ಖಲೀಲನ ಕಣಜದಿಂದ ಯೋಗೇಶ್ ಮಾಸ್ಟರ್ ಅವರ ಅನುವಾದಿತ ಕೃತಿಯಾಗಿದೆ. ಖಲೀಲ್ ಗಿಬ್ರಾನ್ನ ಕಾವ್ಯ ರೂಪದ ಗದ್ಯಗಳು ತಾವೇ ಪರವಶತೆಯಿಂದ ಅನುಮತಿಯಿಲ್ಲದೇ ಪ್ರವೇಶ ಪಡೆದುಕೊಳ್ಳುವವು. ಹೋಲಿಕೆಗಳು, ರೂಪಕಗಳು ಸತ್ಯವೋ ಮಿಥ್ಯವೋ ಅನ್ನಿಸುವುದಕ್ಕಿಂತ ಪ್ರಾಮಾಣಿಕವೆಂದೇ ಗೋಚರವಾಗುವವು. ಬೆಳಕಿಗೊಂದು ಬೆಳಕು ಬೆರೆತ ಶಕ್ತಿ ಅವನ ಬರವಣಿಗಗಳ ಮೂಲಕ ಹಾಯುವಾಗ. ಹಳೆಯದೂ ಅಲ್ಲದ, ಹೊಸತೂ ಅಲ್ಲದ ಇರುವ ಕಾಲದಲ್ಲಿ ಕಾಲಾತೀತವಾಗಿ, ದೇಶಾತೀತವಾಗಿ ಹೊಚ್ಚ ಹೊಸದಾಗಿ ಹುಟ್ಟಿರುವ ಪುರಾತನದ ಸುಗಂಧವು ನವುರಾಗಿ ತಟ್ಟುತ್ತಾ ಲೋಕವೆಲ್ಲಾ ಅದೇ ಮಾದಕತೆಯಲ್ಲಿ ತೇಲಾಡುವಂತಹ ಆಸೆ ಹುಟ್ಟಿಸುತ್ತಾ ಹೋಗುವ ಬಗೆ ಅವನ ಬರಹಗಳಲ್ಲುಂಟು. ಪ್ರಾಮಾಣಿಕತೆಯನ್ನು ಪವಿತ್ರತೆ ಎನ್ನುವ, ಇರುವಿಕೆಯ ಚೈತನ್ಯವನ್ನು ದೇವರೆನ್ನುವ, ಮುಕ್ತ ಸ್ವೀಕೃತವನ್ನು ಪ್ರೇಮವನ್ನುವ ಗಿಬ್ರಾನ್ ಹಾಗೆಂದೇನೂ ಒತ್ತಾಯ ಮಾಡಿ ಕೇಳಸದೇ ತನ್ನ ಪಾಡಿಗೆ ತಾನು ನುಡಿಯಾಡಿಕೊಳ್ಳುತ್ತಿರುತ್ತಾನೆ. ಅಸ್ತಿತ್ವವೆಂಬ ಅವನಿರುವ ಇರುವಿಕೆಯಲ್ಲ ಓದುಗರಿಗೆ ಅದೇ ಗುಂಗು ಆವಲಿಸುತ್ತದೆ, ಆ ಗುಂಗಿನ ಮಾದಕತೆಯಲ್ಲಿ ಒಲವು ಮತ್ತು ಚೆಲುವು ಎಂಬುದರ ಸಾಕ್ಷಾತ್ಕಾರವಾಗುತ್ತದೆ. ಆಗೊಂದು ಸ್ಪರ್ಶಮಣಿ ಸಿಗುತ್ತದೆ. ಆ ಸ್ಪರ್ಶಮಣಿಯನ್ನು ಹೊತ್ತು ಅಲ್ಲಿ ಇಲ್ಲ ಓಡಾಡುತ್ತಾ, ಅವರಿಗೆ ಇವರಿಗೆ ಮುಟ್ಟಿಸುವ ಆಸೆಯಾಗುತ್ತಿರುತ್ತದೆ ಅಂತಹದ್ದೊಂದು ಪ್ರಯತ್ನ ಈ ಖಲೀಲನ ಕಣಜದಿಂದ.
©2024 Book Brahma Private Limited.