ಕೇವಲ ನಲವತ್ತೆಂಟು ವರ್ಷಗಳ ಕಾಲ ಬದುಕಿದ್ದ ಖಲೀಲ್ ಗಿಬ್ರಾನ್ ಜೀವನವನ್ನು ಮೊಗೆಮೊಗೆದು ಕುಡಿದ. ಪರಿಣಾಮ ಆತ ಕಂಡದ್ದೆಲ್ಲಾ ಕಾವ್ಯವಾಯಿತು. ಬರೆದದ್ದೆಲ್ಲಾ ಕಲಾಕೃತಿಯಾಯಿತು. ಗಿಬ್ರಾನ್ ಕಾವ್ಯಕ್ಕೆ, ಚಿಂತನೆಗೆ, ಕಲೆಗಾರಿಕೆಗೆ ವಿಶ್ವ ಸಾಹಿತ್ಯದಲ್ಲಿ ಬಹು ಮಹತ್ವವಿದೆ. ಕನ್ನಡದಲ್ಲಿಯೇ ಈತನ ಬಗ್ಗೆ ಹಲವಾರು ಪುಸ್ತಕಗಳು ಹೊರಬಂದಿವೆ.
’ಕಾಲಾತೀತ ವಿಖ್ಯಾತ ಖಲೀಲ್ ಗಿಬ್ರಾನ್’ ಅಂತಹ ಮುಖ್ಯ ಕೃತಿಗಳಲ್ಲಿ ಒಂದು. ಲೇಖಕ, ಪತ್ರಕರ್ತ ಜಿ.ಎನ್. ರಂಗನಾಥರಾವ್ ಬರೆದಿರುವ ಸುದೀರ್ಘ ಪ್ರಸ್ತಾವನೆ ಗಿಬ್ರಾನ್ ಕೃತಿಗಳಿಗೆ ಹೊಸದೊಂದು ಪ್ರವೇಶಿಕೆ ಒದಗಿಸುತ್ತದೆ. ಗಿಬ್ರಾನ್ ಹುಟ್ಟಿದ್ದು ಲೆಬನಾನ್ನಲ್ಲಿ. ಬದುಕಿದ್ದು ಅಮೆರಿಕದಲ್ಲಿ. ತನ್ನ ತಾಯ್ನೆಲವನ್ನು ನೆನೆದು ಆತ ಬರೆದದ್ದು ಹೆಚ್ಚು. ಒಟ್ಟು ಹನ್ನೊಂದು ಅಧ್ಯಾಯಗಳಲ್ಲಿ ಗಿಬ್ರಾನ್ ಸಾಹಿತ್ಯವನ್ನು ಲೇಖಕರು ಕಟ್ಟಿಕೊಟ್ಟಿದ್ದಾರೆ. ಸೃಷ್ಟಿ, ಮನುಜಗೀತ, ಪ್ರವಾದಿ, ದೃಷ್ಟಾಂತ ಕಥೆಗಳು, ಕಾವ್ಯ, ಹುಚ್ಚ, ಮಿನುಗು-ಮಿಂಚು, ಅಳು ನಗು, ಬಂಡಾಯಗಾರ, ಮುರಿದ ರಕ್ಕೆಗಳು ಗಿಬ್ರಾನ್ ಕೃತಿಗಳನ್ನು ಕನ್ನಡದಲ್ಲಿ ಪಡಿಮೂಡಿಸಿವೆ. ಮೂಲ ಕೃತಿಗಳಲ್ಲಿ ಸ್ವಲ್ಪವೂ ವ್ಯತ್ಯಾಸವಾಗದಂತೆ ಅನುವಾದಿಸಿರುವುದು ರಂಗನಾಥರಾವ್ ಅವರ ಅಗ್ಗಳಿಕೆಗಳಲ್ಲಿ ಒಂದು.
©2024 Book Brahma Private Limited.