ಉದಯಕುಮಾರ್ ಹಬ್ಬು ಅವರ ಕನ್ನಡ ಅನುವಾದಿತ ಕೃತಿ ‘ಗಾಂಧೀಜಿಯವರ ಕಥೆಗಳು’. ಈ ಕೃತಿಗೆ ಚಂದ್ರಕಾಂತ್ ಪೋಕಳೆ ಅವರು ಬೆನ್ನುಡಿ ಬರೆದಿದ್ದು, ‘ ಗಾಂಧೀಜಿಯವರನ್ನು ಪ್ರಸ್ತುತಪಡಿಸುವಾಗ ಲೇಖಕರು ಕೇವಲ ಅವರ ವಿಚಾರಗಳನ್ನಷ್ಟೇ ಹೇಳಿ ವಿಶ್ಲೇಷಿಸಬಹುದು. ಇನ್ನು ಕೆಲವರು ಸಂಕಥನದ ಮೂಲಕ ಗಾಂಧಿ ವಿಚಾರಗಳನ್ನು ಪ್ರಸ್ತುತಪಡಿಸಬಹುದು. ಉದಯಕುಮಾರ ಹಬ್ಬು ಅವರು ಸಂಕಥನದ ಮಾರ್ಗವನ್ನು ಹಿಡಿದು ಓದುಗರಿಗೆ ಹೆಚ್ಚು ಆಪ್ತವಾಗುತ್ತಾರೆ’ ಎಂದು ಹೇಳಿದ್ದಾರೆ.
‘ಗಾಂಧೀಜಿ ಕಥೆಗಳು’ ಕೃತಿಯ ವಿಮರ್ಶೆ
ಭಾರತ ಸ್ವಾತಂತ್ಯ್ರಗೊಂಡು 75 ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ ಮತ್ತೆ ಮತ್ತೆ ನೆನಪಾಗುವುದು ಗುಲಾಮಗಿರಿಯಿಂದ ಹೊರಬಂದ ಆ ದಿನಗಳು ಮತ್ತು ಗಾಂಧೀಜಿ. ಗಾಂಧೀಜಿ ಅವರ ಕುರಿತಾದ ಕೃತಿಗಳು ಕನ್ನಡದಲ್ಲಿ ಮಾತ್ರವಲ್ಲ ಹಲವು ಭಾಷೆಗಳಲ್ಲಿ ಪ್ರಕಟಗೊಳ್ಳುತ್ತಲೇ ಇವೆ. ಇಂತಹ ಮತ್ತೊಂದು ಕೃತಿ ಕನ್ನಡದಲ್ಲಿ ಲೋಕಾರ್ಪಣೆಗೊಂಡಿದೆ. ಅದುವೇ ಹಿರಿಯ ಲೇಖಕ ಉದಯಕುಮಾರ ಹಬ್ಬು ಅವರ 'ಗಾಂಧೀಜಿಯವರ ಕಥೆಗಳು'. ಲೇಖಕರೇ ಹೇಳಿಕೊಂಡಂತೆ ಇಂಟರ್ ನೆಟ್‌ನಿಂದ ಸಿಕ್ಕ ಮಾಹಿತಿಗಳನ್ನು ಆಧರಿಸಿ ಬರೆದ ಲೇಖನಗಳಿವು. ಒಂದು ಪುಟದಿಂದ ಹಿಡಿದು ಮೂರು ಪುಟಗಳಷ್ಟು ಇರುವ ಒಟ್ಟು 64 ಲೇಖನಗಳಿವೆ. ಬೇಸಿಕ್ ಪೆನ್, ಗಾಂಧಿ ಮತ್ತು ದಿಲ್ಲಿ, ದಂಡಿ ವಾರ್ತೆ, ಬಾಲಾ ಆಯ್ಕೆ ಇವೇ ಮುಂತಾದ ಶೀರ್ಷಿಕೆಗಳುಳ್ಳ ಲೇಖನಗಳು. ಲೇಖನದ ಶೀರ್ಷಿಕೆಗಳೇ ಹೇಳವಂತೆ ಗಾಂಧಿ ಅವರ ಬದುಕಿನ ಮಜಲುಗಳ ಪರಿಚಯ ಇಲ್ಲಿದೆ. ಕೃತಿಯ ಬಗ್ಗೆ ಚಂದ್ರಕಾಂತ ಪೋಕಳೆಯವರು ಹೇಳಿದ ಮಾತು ಇಲ್ಲಿ ಉಲ್ಲೇಖನಿಯ. 'ಸಾಮಾನ್ಯವಾಗಿ ಗಾಂಧಿಯ ಬಗೆಗೆ ಬರೆಯುವವರು ಎರಡು ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಒಂದು ಗಾಂಧಿ ಚರಿತ್ರೆ, ಮತ್ತೊಂದು ಗಾಂಧಿವಾದಕ್ಕೆ ಸಂಬಂಧಿಸಿದ್ದು. ಆದರೆ ಹಬ್ಬು ಅವರು ಇವೆರಡಕ್ಕಿಂತ ಭಿನ್ನ ಮಾರ್ಗವನ್ನು ಅನುಸರಿಸಿದ್ದಾರೆ.' ಪುಸ್ತಕವು ಚೊಕ್ಕವಾಗಿ ಮುದ್ರಣಗೊಂಡಿರುವುದು ಗಮನಾರ್ಹ.
( ಕೃಪೆ : ವಿಶ್ವವಾಣಿ)
---
©2024 Book Brahma Private Limited.