ಗರಿಮಾ ಶ್ರೀವಾಸ್ತವ ಅವರ ಯುದ್ಧಕಾಲದ ಮಹಿಳೆಯರ ಅನುಭವಕಥನವನ್ನು ವಿಕ್ರಮ ವಿಸಾಜಿಯವರು ಕನ್ನಡಕ್ಕೆ ದೇಹವೇ ದೇಶ ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ. 1992 ರಿಂದ 1995ರ ವರೆಗೆ ಪೂರ್ವ ಯುರೋಪಿನ ದೇಶಗಳ ನಡುವೆ ನಡೆದ ಯುದ್ಧ ಹಲವು ಘೋರ ದುರಂತಗಳಿಗೆ ಕಾರಣವಾಯಿತು. ಮುಖ್ಯವಾಗಿ ಕ್ರೊವೇಷಿಯಾ, ಸರ್ಬಿಯಾ, ಹರ್ಜೆಗೋವಿನಾ ಮತ್ತು ಬೋಸ್ನಿಯಾ ದೇಶಗಳಲ್ಲಿ ರಕ್ತದ ಕಲೆಗಳು ಎಲ್ಲೆಡೆ ಉಳಿದುಕೊಂಡವು. ಇಂಥ ನರಕದಲ್ಲಿ ಹೆಚ್ಚಾಗಿ ಬೆಂದವರು ಸ್ತ್ರೀಯರು ಮತ್ತು ಮಕ್ಕಳು. ಹತ್ಯೆ, ಅತ್ಯಾಚಾರ, ಮಾನವ ಕಳ್ಳಸಾಗಣಿ - ಇಲ್ಲಿ ನಿತ್ಯದ ಚಟುವಟಿಕೆಗಳಾದವು. ಯುದ್ಧಗಳು ಎಲ್ಲಿಯೇ ನಡೆಯಲಿ, ಅವುಗಳ ಪರಿಣಾಮ ಮಾತ್ರ ಬಹುಕಾಲದವರೆಗೆ ಯಾವ್ಯಾವುದೋ ರೂಪದಲ್ಲಿ ಬೇರುಬಿಟ್ಟಿರುತ್ತದೆ. ಕೆಲವರು ಕುಟುಂಬವನ್ನು ಕಳೆದುಕೊಂಡರೆ ಮತ್ತೆ ಕೆಲವರು ಅರಗಿಸಿಕೊಳ್ಳಲಾರದ ಭಯಾನಕತೆಯಲ್ಲಿ ಮನೋರೋಗಿಗಳಾದರು. ಸಾವಿರಾರು ಹೆಣ್ಣುಮಕ್ಕಳು ದೇಹವನ್ನು ಮಾರಿಕೊಂಡು ಬದುಕಿದರು. ಸಮಾಜದಿಂದ ಈ ಅಬಲೆಯರು ಅಂತಃಕರಣವನ್ನು ನಿರೀಕ್ಷಿಸಿದ್ದರು. ಆದರೆ ಅವರಿಗೆ ಸಿಕ್ಕಿದ್ದು ಕೇವಲ ನಿರ್ಲಕ್ಷ್ಯ ಮತ್ತು ಕ್ರೌರ್ಯ. ಯುದ್ಧಗಳು ನಡೆಯುವುದು ಕೇವಲ ನೆಲ-ಜಲ-ಆಕಾಶದಲ್ಲಿ ಅಲ್ಲ. ಅವು ನಿಜವಾಗಿ ನಡೆಯುವುದು ಹೆಣ್ಣಿನ ದೇಹದ ಮೇಲೆ. ಯುದ್ಧಕ್ಕೆ ಗಾಯಗೊಳ್ಳುವುದು ಹೆಣ್ಣಿನ ದೇಹ, ಮನಸ್ಸು ಮತ್ತು ಕನಸು. ಇಂಥ ಹೆಣ್ಣುಮಕ್ಕಳ ಬದುಕಿನಿಂದ ಆಯ್ದು ತಂದ ಅನುಭವಗಳ ಆರ್ದ್ರ ಲೋಕವಿದು. ಹೆಣ್ಣಿನ ಸಂಕಟ ಹಾಗು ಮತ್ತೆ ಬದುಕು ಕಟ್ಟಿಕೊಳ್ಳುವ ಆಕೆಯ ತಹತಹ ಎರಡಕ್ಕೂ ಈ ಕೃತಿ ನಿದರ್ಶನ. ಈ ಯುದ್ಧಕಥನಗಳು ಕನ್ನಡ ಸಾಹಿತ್ಯಕ್ಕೆ ಅಪರೂಪದ ಕಾಣ್ಕೆಯನ್ನು ಕೊಡಬಲ್ಲವು.
©2024 Book Brahma Private Limited.