ಸಂತೋಷ್ ನಾಯಕ್ ಆರ್ ಅವರ ಅನುವಾದಿತ ಕೃತಿ ಭ್ರಮೆ ಮತ್ತು ವಾಸ್ತವಗಳ ನಡುವೆ.ಲೇಖಕ ಮುಕುಂದ ರಾವ್ ಅವರ ಇಂಗ್ಲಿಷ್ ಕೃತಿ ‘ಬಿಟ್ವೀನ್ ದಿ ಸರ್ಪೆಂಟ್ ಆಂಡ್ ದಿ ರೋಪ್’ ನ ಅನುವಾದಿತ ಕೃತಿಯಾಗಿದೆ. ಅನುವಾದಕರ ಮಾತಿನಂತೆ, ಭಾರತೀಯ ದರ್ಶನ ಪರಂಪರೆಗೆ ದೀರ್ಘವಾದ ಇತಿಹಾಸವಿದ್ದು, ಚಿಂತನೆ ಹಾಗು ಪ್ರಶ್ನೆಯೇ ಇಲ್ಲಿನ ತಾತ್ವಿಕತೆಯ ತಳಹದಿಯಾಗಿದೆ. ಆದರೀಗ ಪ್ರಶ್ನೆ, ವಿಮರ್ಶೆಗಳಿಗೆ ಅವಕಾಶ ಕೊಡದೆ, ತಾತ್ವಿಕ ಚರ್ಚೆ ಅಥವಾ ಆಧ್ಯಾತ್ಮಿಕ ಸ್ಪಷ್ಟತೆಗಳೂ ಇಲ್ಲದ, ಕೇವಲ ಹಿಂಬಾಲಕರನ್ನು ಹುಟ್ಟು ಹಾಕಿಕೊಂಡು ಅಂತರಾಷ್ಟ್ರೀಯ ಮಟ್ಟದ ಬ್ರಾಂಡ್ ಆಗುವ ಸಲುವಾಗಿ ಮಾರುಕಟ್ಟೆಯಲ್ಲಿ ಜನಪ್ರಿಯತೆಯ ಸ್ಪರ್ಧೆ ನಡೆಸುತ್ತಿರುವ ಗುರುಗಳ, ಸಂಸ್ಥೆಗಳ ನಡುವೆ ನಿಜವಾದ ದಾರ್ಶನಿಕ ಪಥಗಳು ಮತ್ತು ಪಥಿಕರು ನೇಪಥ್ಯದಲ್ಲಿದ್ದಾರೆ. ಸತ್ಯಾನ್ವೇಷಣೆಯ ಪಥಗಳು ಮುಚ್ಚಿಹೋಗುತ್ತಿವೆ. ಭಾರತೀಯ ಸಮಾಜದ ಇಂದಿನ ರಾಜಕೀಯ, ಆರ್ಥಿಕ ಹಾಗು ಸಾಮಾಜಿಕ ಪರಿಸ್ಥಿತಿಗಳಿಗೆ ಪ್ರತ್ಯಕ್ಷ ಹಾಗು ಪರೋಕ್ಷವಾಗಿ ಕಾರಣವಾದ ಧಾರ್ಮಿಕ ಪರಂಪರೆಗಳನ್ನೂ, ಹಾಗೆಯೇ ಸಾಕಷ್ಟು ಸಂಕಷ್ಟಗಳ ನಡುವೆ ಜೀವನವನ್ನು ದೂಡುತ್ತಿರುವ ಸಾಮಾನ್ಯರ ಬದುಕನ್ನು ಸಹನೀಯಗೊಳಿಸಿರುವ ಜೀವಪರ ದರ್ಶನಗಳನ್ನು ಸಮಾಜಶಾಸ್ತ್ರೀಯವಾಗಿ ಅಧ್ಯಯನ ಮಾಡುವ, ಸಂಶೋಧಿಸುವ, ವಿಮರ್ಶಿಸುವ ಅಗತ್ಯವು ಸಹ ಹಿಂದೆಂದಿಗಿಂತಲೂ ಹೆಚ್ಚಿದೆ. ಕನ್ನಡಿಗರೇ ಆದ ಮುಕಂದರಾವ್ ಬರೆದಿದ್ದೆಲ್ಲಾ ಇಂಗ್ಲಿಷ್‌ನಲ್ಲಿ. ಅವರ ಈ ಪುಸ್ತಕವು ಅವರದೇ ಆದ ತಾತ್ತ್ವಿಕ ಜಿಜ್ಞಾಸೆಗಳ, ಹುಡುಕಾಟಗಳ, ಚಿಂತನೆಗಳ, ಒಳನೋಟಗಳ ಫಲ. ಅಂತೆಯೇ ಅವರು ವಿವಿಧ ಗುರುಗಳು ಹಾಗು ದಾರ್ಶನಿಕರೊಡನೆ ನಡೆಸಿದ ವೈಯಕ್ತಿಕ ಅನುಸಂಧಾನದ ಸಂಕಲನ. ಜೊತೆಗೆ ಸಮಕಾಲೀನ ಆಧ್ಯಾತ್ಮಿಕ ಚಿಂತಕರನ್ನು ಕುರಿತ ಗಮನಾರ್ಹ ವಿಶ್ಲೇಷಣಾತ್ಮಕ ದಾಖಲೆಯೂ ಹೌದು. ಈ ಆಧ್ಯಾತ್ಮಿಕ ಹುಡುಕಾಟ ಮತ್ತು ತಲ್ಲಣಗಳ ಹಾದಿಯು ಅವರ ವೈಯಕ್ತಿಕ ಪಯಣವಾಗಿದ್ದರೂ, ಈ ಬಗೆಯ ಹಾದಿಯ ಕುರಿತು ಆಸಕ್ತಿಯಿರುವ ಕನ್ನಡದ ಪ್ರಾಜ್ಞ ಓದುಗರಿಗೆ ಆಸಕ್ತಿದಾಯಕವಾಗಬಹುದಾದ ಕಾರಣದಿಂದ ಈ ಪುಸ್ತಕವನ್ನು ನಾನು ಪ್ರೀತಿಯಿಂದ ಅನುವಾದಿಸಿದ್ದೇನೆ ಎಂಬುದಾಗಿ ಹೇಳಿದ್ದಾರೆ.
©2024 Book Brahma Private Limited.