ಅನುಪಮ್ ಖೇರ್ ಅವರ ಇಂದಿನ ದಿನವೇ ಶುಭ ದಿನವು ವಿಶ್ವೇಶ್ವರ ಭಟ್ ಅವರ ಅನುವಾದ ಕೃತಿಯಾಗಿದೆ .ಇಡೀ ಜಗತ್ತನ್ನು ಏಕಕಾಲದಲ್ಲಿ ಕಲ್ಲವಿಲಗೊಳಿಸಿ, ನಂತರ ಒಂದುಗೂಡಿಸುವುದು, ವಿಶ್ವವಾಸಿಗಳೆಲ್ಲಾ ಒಂದೇ ರೀತಿ ಯೋಚಿಸುವಂತೆ ಪ್ರೇರೇಪಿಸುವುದು ಸಾಧ್ಯವಿಲ್ಲ. ಯಾರಿಂದಲೂ ಸಾಧ್ಯವಿಲ್ಲದ್ದು ಕರೋನಾದಿಂದ ಸಾಧ್ಯವಾಯಿತು, ವಿಶ್ವದ ಆರ್ಥಿಕ ವ್ಯವಸ್ಥೆಯೇ ಗಾಳುಮೇಳಾಗಿ ಹೋಯಿತು. ಎಲ್ಲರ ಬದುಕಿನಲ್ಲೂ ಆತಂಕ, ದುಗುಡ, ಅನಿಶ್ಚಿತತೆ, ಕತ್ತಲು ಆವರಿಸಿತು. ನಮ್ಮ ಮುಂದೆ ಇದ್ದವರೆಲ್ಲ ಮಿಂಚುಹುಳುಗಳ ಹಾಗೆ ಸತ್ತು ಹೋದರು. ಇಡೀ ವಿಶ್ವದ ಚಲನೆ ಸ್ತಬ್ಧವಾಯಿತು. ಆತ್ಮೀಯರ ಅಂತ್ಯಸಂಸ್ಕಾರಕ್ಕೂ ಹೋಗಲು ಆಗಲಿಲ್ಲ. ತಂದೆ ಸತ್ತರೂ ಮಗನಿಗೆ ಹೋಗಲಾಗಲಿಲ್ಲ. ಚಿತೆಗೇರಿದ ಗಂಡನನ್ನು ಹೆಂಡತಿ ನೋಡಲಿಲ್ಲ. ಮಾನವ ಸಂಬಂಧದ ಎಲ್ಲಾ ಕೋಶ-ತಂತುಗಳನ್ನು ಕರೋನಾ ಚಿವುಟಿ ಹಾಕಿಬಿಟ್ಟಿತು. ಎಲ್ಲರೂ ತಮ್ಮ ತಮ್ಮ ಜೀವವನ್ನು ಕಂಕುಳಲ್ಲಿ ಬಚ್ಚಿಟ್ಟುಕೊಂಡವರಂತೆ ಭಯದಲ್ಲಿ ಜೀವಿಸಿದರು. ಬದುಕಿನ ಬಗೆಗಿದ್ದ ಕಲ್ಪನೆಯನ್ನೇ ಕರೋನಾ ಗುಡಿಸಿಹಾಕಿತು. ನಮ್ಮ ಆಚರಣೆ, ಸಂಪ್ರದಾಯ, ಜನಜೀವನ, ಯೋಚನೆ, ಜೀವನಕ್ರಮ, ಪದ್ಧತಿಗಳನ್ನೆಲ್ಲಾ ಕರೋನಾ ಮುದ್ದೆಟ್ಟಿ ಬಿಸಾಕಿತು. ಕೆಲದಿನ ಜಗತ್ತಿನ ಯಾವ ರಾಷ್ಟ್ರದ ಮೇಲೂ ವಿಮಾನ ಹಾರಲಿಲ್ಲ. ವಾಹನ ಸಂಚರಿಸಲಿಲ್ಲ. ಹಡಗು ದಡ ಬಿಟ್ಟು ಕದಲಲಿಲ್ಲ, ಕರೋನಾ ಟ್ರಾಫಿಕ್ ಸಿಗ್ನಲ್ ಮುಂದೆ, ಜಗತ್ತೇ ಸ್ಟಾಪ್! ಆ ಸಮಯದಲ್ಲಿ ಮೂಡಿದ ಆಲೋಚನೆಗಳೇನು? ಕರೋನಾ ಕಲಿಸಿದ ಪಾಠಗಳೇನು? ಕದಲಿದ ನಂಬಿಕೆಗಳೇನು? ಅವನ್ನೆಲ್ಲಾ ನಿಭಾಯಿಸಿ ಬದುಕನ್ನು ಮರಳಿ ಹಳಿಗೆ ಎತ್ತಾಕಿಕೊಂಡು ಬಂದಿದ್ದು ಹೇಗೆ? ಸಾವಿನ ಕದ ತಟ್ಟಿ ಬಂದ ಆ ಅನುಭವ ಹೇಗಿತ್ತು? ಕರೋನಾ ನಮ್ಮೊಳಗೇ ತಂದ ಪರಿವರ್ತನೆ ಏನು? ಬದುಕು ಮೂರಾಬಟ್ಟೆಯಾದಾಗ, ಆತ್ಮವಿಶ್ವಾಸ, ಪ್ರೀತಿ, ಆನಂದ, ಸಮಾಧಾನ, ನಂಬಿಕೆಗಳಿಂದ ಪುನಃ ನೆಲಸಮವಾದ ಜೀವನವನ್ನು ಕಟ್ಟಿಕೊಳ್ಳುವುದು ಹೇಗೆ? ಖ್ಯಾತ ಸಿನಿಮಾ ನಟ ಅನುಪಮ್ ಖೇರ್ ಈ ಕೃತಿಯಲ್ಲಿ ವೈಯಕ್ತಿಕ ಅನುಭವದ ನೆಲೆಯಲ್ಲಿ ಅವೆಲ್ಲವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಬದುಕಿಗೆ ಪ್ರೀತಿಯುಣಿಸುವ, ವಿಶ್ವಾಸದ ಕೈತುತ್ತು ತಿನಿಸುವ ಭರವಸೆಯ ಸಾಲುಗಳು ಇಲ್ಲಿವೆ.
©2024 Book Brahma Private Limited.