ಗುಜರಾತಿ ಲೇಖಕ ಸುರೇಶ್ ಸೋಮಪುರ ಅವರು 43 ವರ್ಷಗಳ ಹಿಂದೆ ಬರೆದ ʻಅಘೋರಿಯೋ ಸಾಥೆ ಪಾಂಚ್ ದಿವಸ್ʼ ಕೃತಿಯ ಕನ್ನಡ ಅನುವಾದ ʻಅಘೋರಿಗಳ ನಡುವೆʼ. ಎಂ.ವಿ. ನಾಗರಾಜರಾವ್ ಅವರು ಕನ್ನಡಕ್ಕೆ ತಂದ ಈ ಪುಸ್ತಕದಲ್ಲಿ ಅಘೋರಿಗಳ ಅಘೋರ ಜೀವನದ ಬಗ್ಗೆ ಹೇಳಲಾಗಿದೆ. ಇವರದು ಒಂದು ನಿಗೂಢ ಲೋಕ. ಗೆಳೆಯನೊಬ್ಬನಿಗಾಗಿ ಅಘೋರಿಗಳ ಮೂಲವನ್ನು ಹುಡುಕುತ್ತಾ ಹೋಗುವ ಲೇಖಕರಿಗೆ ಅವರ ಸಾಧನಾ ಶಿಬಿರ ನಡೆಯುವುದು ತಿಳಿಯುತ್ತದೆ. ತಮ್ಮ ಕಾಂಟ್ಯಾಕ್ಗಳನ್ನು ಬಳಸಿಕೊಂಡು 5 ದಿನಗಳ ಕಾಲ ಅವರ ಚಲನ ವಲನಗಳನ್ನು ಗಮನಿಸಿ ಬಳಿಕ ಅಘೋರಿಗಳು ತೋರಿಸುವ ಕೆಲ ಚಮತ್ಕಾರದ ಹಿಂದಿನ ಮರ್ಮವನ್ನು ಲೇಖಕರು ಎಳೆ ಎಳೆಯಾಗಿ ಬಿಚ್ಚಿಡುತ್ತಾರೆ. ಕೆಲ ಅಘೋರಿಗಳು ಮಾತ್ರ ತಮ್ಮ ಅಹಂನ್ನು ಬಿಟ್ಟು ದೇಹತ್ಯಾಗ ಮಾಡಿದ್ದು ವಿಶೇಷವಾಗಿದೆ. ಅಘೋರಿಗಳು ಸಾಮಾಜಿಕರಾಗಿರದೆ ತಮ್ಮದೇ ಜೀವನ ಶೈಲಿಯನ್ನು ರೂಢಿಸಿಕೊಂಡು ಬದುಕುವವರು. ಇವರ ಬಗ್ಗೆ ಇಂದಿಗೂ ಜನರಲ್ಲಿ ಹಲವಾರು ಬಗೆಯ ತಪ್ಪು ಕಲ್ಪನೆಗಳಿವೆ. ಹಾಗಾಗಿ ನಿಜವಾಗಿಯೂ ಅಘೋರಿಗಳು ಯಾರು, ಅವರ ಜೀವನ ಹೇಗಿರುತ್ತದೆ, ಆಚಾರ ವಿಚಾರಗಳು ಹೇಗೆ ಭಿನ್ನವಾಗಿವೆ, ಅವರ ನಂಬಿಕೆಗಳು ಹೀಗೆ ಎಲ್ಲ ಮಾಹಿತಿಗಳನ್ನು ನೀಡುವ ಒಂದು ಪ್ರಯತ್ನ ಇಲ್ಲಿ ನಡೆದಿದೆ.
©2024 Book Brahma Private Limited.