ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಎಂ.ವಿ. ನಾಗರಾಜ ರಾವ್, ಸರ್ಕಾರಿ ಜೂನಿಯರ್ ಕಾಲೇಜಿನ ಉಪಾನ್ಯಾಸಕರು ನಂತರ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದಾರೆ. ಕನ್ನಡ ಹಾಗೂ ಹಿಂದಿಯಲ್ಲಿ ಎಂ.ಎ. ಹಾಗೂ ಬಿ.ಇಡಿ. ಸಾಹಿತ್ಯ ರತ್ನ ಪೂರೈಸಿದ್ದಾರೆ. ಜೇಮ್ಸ್ ಹ್ಯಾಡ್ಲಿ ಚೇಸ್ ಅವರ 20 ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ ಹೆಗ್ಗಳಿಕೆ ಇವರದ್ದು. ಹಾಸ್ಯ-ವಿಡಂಬನೆ-ವೈಚಾರಿಕತೆ ಸೇರಿದಂತೆ ಸುಮಾರು 300ಕ್ಕೂ ಅಧಿಕ ಲೇಕನಗಳನ್ನು ಬರೆದಿದ್ದಾರೆ. ಇವರ ‘ಕಂಪನ’ ಕಾದಂಬರಿಯು ಚಲನಚಿತ್ರವಾಗಿದೆ. ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳನ್ನು ರಚಿಸಿದ್ದಾರೆ. 1985ರಲ್ಲಿ ಶೃಂಗಾರ ಪ್ರಕಾಶನ ಸಂಸ್ಥೆ ಸ್ಥಾಪಿಸಿ, ಸುಮಾರು 242 ಪುಸ್ತಕಗಳನ್ನು ಪ್ರಕಟಿಸಿದ್ದು, ಕರ್ನಾಟಕ ಸರ್ಕಾರದಿಂದ ‘ಪುಸ್ತಕ ಸೊಗಸು’ ಪ್ರಶಸ್ತಿ ಪಡೆದಿದ್ದಾರೆ.
ಅನುವಾದಿತ ಕೃತಿಗಳು : ಜೇಮ್ಸ್ ಹ್ಯಾಡ್ಲಿ ಚೇಸ್ ಅವರ 20 ಕಾದಂಬರಿಗಳ ಅನುವಾದ. ಪ್ರಮುಖವಾದವು- ಅಘೋರಿಗಳ ನಡುವೆ, ಕಂಪನ, ನಾಲ್ಕನೆಯ ಆಯಾಮ, ನೂಪುರ, ಪುನರ್‌ಮಿಲನ, ಲಕ್ಷ್ಮಣ ರೇಖೆ, ಗಾಡ್ ಫಾದರ್, ಶೃಂಗಾರ ಶಯ್ಯೆ, ಕಪ್ಪು ಗುಲಾಬಿ, ದೀಕ್ಷೆ ಇತರೆ ಕೃತಿಗಳು. 2 ನಾಟಕ ಸಂಕಲನಗಳು. -100 ಮಕ್ಕಳ ಕೃತಿಗಳು, ಡಾ.ನರೇಂದ್ರ ಕೋಹಲಿ ಅವರ ರಾಮಾಯಣಾಧಾರಿತ 7 ಕಾದಂಬರಿಗಳು, ತೀನಂಶ್ರೀ, ದೇಜಗೌ, ಚದುರಂಗ, ಎಲ್.ಎಸ್.ಶೇಷಗಿರಿ ರಾವ್, ಮಾಸ್ಟರ್ ಹಿರಣ್ಣಯ್ಯ ಹೀಗೆ ಹಿರಿಯರ ಜೀವನ ಚಿತ್ರಣ ನೀಡುವ ಕೃತಿಗಳು ಪ್ರಕಟಿಸಿದ್ದಾರೆ.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ರೋಟರಿ ಕ್ಲಬ್ ಅಧ್ಯಕ್ಷ ಹಾಗೂ ಕಾರ್ಯದರ್ಶಿಯಾಗಿದ್ದರು. ಹಿಂದಿ ಪ್ರೇಮಿ ಮಂಡಳಿ ಸ್ಥಾಪಿಸಿದ್ದರು. 6 ಮತ್ತು 8ನೇ ತರಗತಿ ಕನ್ನಡ ಪಠ್ಯ ಪುಸ್ತಕ ರಚನಾ ಸಮಿತಿ ಸದಸ್ಯರಾಗಿದ್ದರು. ಹಿರಿಯ ಸಾಹಿತಿಗಳ ಹೆಸರಿನಲ್ಲಿ ಹಲವಾರು ವಿಚಾರ ಸಂಕಿರಣ ಆಯೋಜಿಸಿದ್ದಾರೆ. 68ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿತರಾದ ಇವರಿಗೆ ಜಿಲ್ಲಾ ಹಾಗೂ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರಿಂದ ಹಿಂದಿ ಸೇವಾ ಪ್ರಶಂಸಾ ಪತ್ರ ದೊರೆತಿದೆ.