ಡಾ. ಕೆ. ಸರೋಜಾ, ಮೈಸೂರಿನ ಮಾನಸಗಂಗೋತ್ರಿ ಹಾಗೂ ಧಾರವಾಡದ ಕಷಿ ವಿಶ್ವವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸಿ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ICARನಿಂದ ಇವರಿಗೆ ಅತ್ಯುತ್ತಮ ಶಿಕ್ಷಕಿ ರಾಷ್ಟ್ರಪ್ರಶಸ್ತಿ ಬಂದಿದೆ. ತಮ್ಮ ದೀರ್ಘಾವಧಿಯ ಬೋಧನಾನುಭವದಲ್ಲಿ ವಿದ್ಯಾರ್ಥಿ ವರ್ಗದಲ್ಲಿ ಹೆಚ್ಚಿನವರಿಗೆ ಇಂಗ್ಲಿಷ್‌ನಲ್ಲಿರುವ ಅನೇಕ ಪರಿಕಲ್ಪನೆಗಳು (concepts) ಸ್ಪಷ್ಟವಾಗಿ ಪೂರ್ತಿ ತಿಳಿಯಲಾಗದೇ ಇರುವುದನ್ನು ಗಮನಿಸಿ ತರಗತಿಗಳಲ್ಲಿ ಅವುಗಳನ್ನೆಲ್ಲಾ ಕನ್ನಡದಲ್ಲಿ ಉದಾಹರಣಾ ಸಹಿತ ಚಿತ್ರವತ್ತಾಗಿ ಬೋಧಿಸುತ್ತಾ ಇವರು ವಿದ್ಯಾರ್ಥಿ ಸಮೂಹಗಳಲ್ಲಿ ಜನಪ್ರಿಯರಾಗಿದ್ದವರು.
ತಾವು ಬೋಧಿಸುತ್ತಿದ್ದ ಮಾನವ ವಿಕಾಸ (Human Development) ಶಾಖೆಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಇಂದಿಗೂ ಅಧ್ಯಯನ ಮಾಡುತ್ತಲೇ ಇದ್ದಾರೆ.
ಇವರ ಮೊದಲ ಪುಸ್ತಕ 'ತಾಯಿಹಾಲು' ಎನ್ನುವ ಶುದ್ದ ವೈಜ್ಞಾನಿಕ ಕೃತಿಯು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಗಳಿಸಿದೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯ ಇವರ ಕೆಲವು ಪುಸ್ತಕಗಳನ್ನು ಪ್ರಕಟಿಸಿದ್ದು, ಅವು ನಾಡಿನ ಕೆಲವು ವಿಶ್ವವಿದ್ಯಾಲಯಗಳಲ್ಲಿ ಆಕರಗ್ರಂಥಗಳಂತೆ ಉಪಯೋಗಿಸಲ್ಪಡುತ್ತಿವೆ. ಎರಡು ಕವನ ಸಂಕಲನಗಳನ್ನು ಲೇಖಕಿ ಪ್ರಕಟಿಸಿದ್ದಾರೆ. ಪ್ರವಾದಿ ಭಾವಾರ್ಥ ಸಹಿತ ಎಂಬ ಅನುವಾದಿತ ಕೃತಿಯೂ ಪ್ರಕಟವಾಗಿದೆ.