About the Author

ಯುವ ಲೇಖಕ, ಅನುವಾದಕ ಅಜಯ್ ವರ್ಮಾ ಅಲ್ಲೂರಿ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರಿನವರು. ಕಾಲೇಜುದಿನಗಳಿಂದ ಸಾಹಿತ್ಯಾಸಕ್ತಿ ಬೆಳೆಸಿಕೊಂಡ ಅಜಯ್, ಕ್ರೈಸ್ಟ್ ಕಾಲೇಜಿನ ಬೇಂದ್ರೆ ಕಾವ್ಯ ಸ್ಪರ್ಧೆ ಮತ್ತು ಅ.ನ.ಕೃ.ಕಥಾ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಗಳಿಸಿದ್ದಾರೆ. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅಜಯ್ ವರ್ಮಾ ಅಲ್ಲೂರಿಯವರ ಮನೆ ಭಾಷೆ ತೆಲುಗು.  ಎರಡೂ ಭಾಷೆಗಳಲ್ಲೂ ಹಿಡಿತ ಸಾಧಿಸಿರುವ ಅವರು ಕನ್ನಡದ ಕವಿತೆಗಳನ್ನು ತೆಲುಗಿಗೆ ಅನುವಾದಿಸಿದ್ದಾರೆ. ಜೊತೆಗೆ ತೆಲುಗಿನ ಕೃತಿಗಳನ್ನೂ ಕನ್ನಡೀಕರಿಸಿದ್ದಾರೆ. 'ಗಗನಸಿಂಧು',  'ಡಯಾನಾ ಮರ' ಮತ್ತು ಕನ್ನಡ ಕವಿತೆಗಳ ತೆಲುಗು ಅನುವಾದ ಕೃತಿ  'ಕಲಲ ಕನ್ನೀಟಿ ಪಾಟ' ಪ್ರಕಟಗೊಂಡಿವೆ. 

ಕಳೆದ ಎರಡು-ಮೂರು ವರ್ಷಗಳಿಂದೀಚೆಗೆ ಅನುವಾದ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ತೆಲುಗು ಲೇಖಕಿ ಓಲ್ಗಾ ಅವರ 'ವಿಮುಕ್ತ' ಕೃತಿಯನ್ನು 'ವಿಮುಕ್ತೆ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಸಾಹಿತ್ಯ ಅನುವಾದ ಕ್ಷೇತ್ರಗಳೆರಡರಲ್ಲೂ ಭರವಸೆ ಮೂಡಿಸುತ್ತಿರುವ ಅಜಯ್ ವರ್ಮಾ ಅಲ್ಲೂರಿಯವರು ಸದ್ಯ ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿಯಲ್ಲಿ ಎಂ.ಎಸ್ಸಿ (ಭೌತಶಾಸ್ತ್ರ) ಓದುತ್ತಿದ್ದಾರೆ.

 

ಅಜಯ್ ವರ್ಮಾ ಅಲ್ಲೂರಿ

(07 Sep 1996)