ಹೆಸರಾಂತ ಪಂಜಾಬಿ ಕವಯತ್ರಿ ಅಮೃತಾ ಪ್ರೀತಂ ಅವರ ಆತ್ಮಕತೆ ’ರಸೀದಿ ತಿಕೀಟು’ನ್ನು ಹಸನ್ ನಯೀಂ ಸುರಕೋಡ ಅವರು ಕನ್ನಡಕ್ಕೆ ಅನುವಾದಿಸಿದಾರೆ. ಇದು ಲಡಾಯಿ ಪ್ರಕಾಶನದಿಂದ ಮರುಮುದ್ರಣಗೊಂಡಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಅಮೃತಾರ ಕವಿತೆ- ಬರವಣಿಗೆಗಳು ಓದುಗರ ಪ್ರೀತಿಗೆ ಪಾತ್ರವಾಗಿರುವುದು ಅದರಲ್ಲಿ ಆರ್ದ್ರತೆಯ ಕಾರಣಕ್ಕಾಗಿ. ಅಮೃತಾ ತಮ್ಮ ಬದುಕಿನ ಪುಟಗಳನ್ನು ತೆರೆದಿಟ್ಟಿದ್ದಾರೆ. ಅಮೃತಾ ಕಾವ್ಯ- ಬದುಕು ಎರಡನ್ನೂ ಅರಿಯಲು ಈ ಪುಸ್ತಕ ನೆರವಾಗುತ್ತದೆ. ಅಮೃತಾರ ಕವಿತೆಯೆಡೆಗೆ ಆಸಕ್ತಿ ಮೂಡುವುದಕ್ಕೆ ಕಾರಣವಾಗುತ್ತದೆ. ಈಗಾಗಲೇ ಕವಿತೆ ಓದಿದವರಿಗೆ ಈ ಕೃತಿಯು ಮತ್ತಷ್ಟು ಗಾಢವಾಗಿ ಅರ್ಥೈಸಿಕೊಳ್ಳಲು ಕಾರಣವಾಗುವುದರಲ್ಲಿ ಅನುಮಾನವಿಲ್ಲ.
ಹೊಸತು-2004- ನವೆಂಬರ್
ಕೋಮುಗಲಭೆಗಳ ಕಾಲದಲ್ಲಿ ಲೇಖನಿಯನ್ನು ಕೈಗೆತ್ತಿಕೊಂಡು ತನ್ನ ಸುತ್ತಲೂ ಮಾನವೀಯ ಕಕ್ಷೆ ನಿರ್ಮಿಸಿ ಕ್ರೌರ್ಯ ಹಿಂಸೆಯ ವಿರುದ್ಧ ದನಿಯೆತ್ತಿ ಕವನಗಳನ್ನು ಬರೆದು ಶಾಂತಿಗಾಗಿ ಹಂಬಲಿಸಿದ ಅಮೃತಾ ಪ್ರೀತಂ ಲೋಕಪ್ರಿಯ ಹೆಸರು. ಈ ಜ್ಞಾನಪೀಠ ಪುರಸ್ಕೃತ ಕವಯಿತ್ರಿಯ ಸಾಹಿತ್ಯ ದೇಶ-ವಿದೇಶಗಳಲ್ಲಿ ಬಹುಭಾಷೆಗಳಿಗೆ ಅನುವಾದಗೊಂಡಿದೆ. ಸ್ವಂತ ಬದುಕಿಗಿಂತ ಸಾಹಿತ್ಯದ ನಿರ್ಮಾಣಕ್ಕೆ ಹೆಚ್ಚಿನ ವೇಳೆ ವ್ಯಯಿಸಿದ ಅಮೃತಾ ಒಮ್ಮೆ ತಾನು ಆತ್ಮಚರಿತ್ರೆ ಬರೆಯುವೆ ಎಂದು ಕುಶ್‌ವಂತ್ ಸಿಂಗ್ ರೊಡನೆ ಅಂದರಂತೆ ! ತಕ್ಷಣ ಸರ್ದಾರ್ಜಿ “ನಿನ್ನಲ್ಲೇನಿದೆ ? ಆತ್ಮಚರಿತ್ರೆಗಾಗುವಷ್ಟು ? ಚಿಕ್ಕ ರಸೀದಿ ತಿಕೀಟು ಹಿಂಭಾಗ ಬರೆದರೂ ಮುಗಿಯುತ್ತೆ' ಎಂದರಂತೆ ! ಹೌದು; ಸಾಹಿತ್ಯ ಲೋಕಕ್ಕೆ ಪೂರ್ಣ ಅರ್ಪಿಸಿಕೊಂಡವರ ಖಾಸಗಿ ಬದುಕು ಚಿಕ್ಕದು. ಸ್ವಲ್ಪ ಉದ್ದ - ಅಗಲ - ವಿಸ್ತಾರ ಇರುವ ಈ ರಸೀದಿ ತಿಕೀಟು ಅಮೃತಾ ಆತ್ಮಚರಿತ್ರೆಯನ್ನು ತು೦ಬಿಕೊ೦ಡಿದೆ.
©2024 Book Brahma Private Limited.