ಪುರುಷೋತ್ತಮ ಬಿಳಿಮಲೆ ಅವರು ಉತ್ತಮ ವಾಗ್ಮಿಗಳು, ಬರಹಗಾರರು. ಅವರ ಆತ್ಮಕಥನ-ಕಾಗೆ ಮುಟ್ಟಿದ ನೀರು. ತಾವು ಬದುಕಿನುದ್ದಕ್ಕೂ ನಡೆದ ಹಾದಿಯ ಸಂಕೀರ್ಣತೆಯನ್ನು ನಿರ್ಲಿಪ್ತತೆಯಿಂದ, ಹಾಸ್ಯಮಯವಾಗಿ, ಬದುಕಿನ ಅನುಭವಗಳನ್ನು ‘ಕಾಗೆ ಮುಟ್ಟಿದ ನೀರು’ ಕೃತಿಯಲ್ಲಿ ಸಾದರ ಪಡಿಸಿದ್ದಾರೆ. ಲೇಖಕರ ನಿರೂಪಣಾ ಶೈಲಿಯು ಆಕರ್ಷಕ ಹಾಗೂ ಪರಿಣಾಮಕಾರಿಯಾಗಿದೆ.
'ಕಾಗೆ ಮುಟ್ಟಿದ ನೀರು' ಲೇಖಕ ಪುರುಷೋತ್ತಮ ಬಿಳಿಮಲೆ ಅವರ ಮಾತುಗಳು.
ಸಂಘರ್ಷಗಳ ಬದುಕಿನ ಸಂಜೆ ನೋಟ: ಪ್ರಜಾವಾಣಿ
ತೇನ್ ಸಿಂಗ್ ಬಿಳಿಮಲೆ ಮತ್ತು ‘ಕಾಗೆ ಮುಟ್ಟಿದ ನೀರು’-ಅತ್ರಿ ಬುಕ್ ಸೆಂಟರ್-ಜಿ.ಎನ್.ಅಶೋಕವರ್ಧನ
ಪುರುಷೋತ್ತಮ ಬಿಳಿಮಲೆ ಕನ್ನಡ-ಕರ್ನಾಟಕ ಜನಪದ ಅಧ್ಯಯನ ಕ್ಷೇತ್ರದಲ್ಲಿನ ಒಂದು ಗಣ್ಯ ಹೆಸರು. ಹಾಗೇ ಕಳೆದ ಇಪ್ಪತ್ತಕ್ಕೂ ನಿವಾಸಿಯಾಗಿ ರಾಷ್ಟ್ರದ ರಾಜಧಾನಿಯಲ್ಲಿ ಕನ್ನಡದ ಕಟ್ಟಾಳುವಾಗಿ ಹೆಸರಾದವರು. ಜೊತೆಗೆ (ಎಡಪಂಥೀಯ ಚಿಂತಕರೆಂದೂ, ಬಂಡಾಯ ಸಾಹಿತಿಯೆಂದು ಗುರುತಿಸಲ್ಪಟ್ಟವರು. ಈ ಕೃತಿಯಲ್ಲಿ ಬಿಳಿಮಲೆಯವರು ತಮ್ಮ ವ್ಯಕ್ತಿತ್ವದ ಈ ಎಲ್ಲ ಚಹರೆಗಳಿಗೆ ಸಾಕ್ಷ್ಯ ಒದಗಿಸುವ ರೀತಿಯಲ್ಲಿ ತಮ್ಮ ಈ ಕಥೆಯನ್ನು ನಿರೂಪಿಸಿದ್ದಾರೆ.
ದ.ಕ.ದ ಬಂಟಮಲೆಯೆಂಬ ದಟ್ಟ ಕಾಡು ಬೆಟ್ಟಗಳ ಮಧ್ಯೆ ಹುಟ್ಟಿ ಬೆಳೆದ ಇವರು ಕಾಲೇಜು, ವಿಶ್ವವಿದ್ಯಾಲಯಗಳ ಆಧ್ಯಾಪಕರಾಗಿ, ಅಂತಾರಾಷ್ಟ್ರೀಯ ಅಧ್ಯಯನ ಸಂಸ್ಥೆಯೊಂದರ ಜಂಟಿ ನಿರ್ದೇಶಕರಾಗಿ ತಮ್ಮ ಜನಪದ ಸಂಸ್ಕೃತಿ ಅಧ್ಯಯನದ ತಿಳುವಳಿಕೆಯನ್ನು ವಿವಿಧ ರೂಪಗಳಲ್ಲಿ ವಿಶ್ವದ ಹಲವು ದೇಶಗಳಿಗೆ ಒಯ್ದು ಸೇವೆಯಿಂದ ನಿವೃತ್ತರಾದ ನಂತರ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ(ಜೆಎನ್‌ಯು) ಕನ್ನಡ ಅಧ್ಯಯನ ಪೀಠದ ನಿರ್ದೇಶಕರಾಗಿ, ಜೊತೆಗೆ ಈ ಸಮಯದಲ್ಲೇ ದೆಹಲಿಯ ಕರ್ನಾಟಕ ಸಂಘವನ್ನು ಕನ್ನಡ ಸಂಸ್ಕೃತಿಯ ಒಂದು ಮಹತ್ವದ ಪ್ರಾತಿನಿಧಿಕ ಸಂಸ್ಥೆಯಾಗಿ ಕಟ್ಟುವವರೆಗಿನ ಹಲವು ಏರುಪೇರುಗಳ ಬಾಳಿನ ಈ ಸಾಹಸಗಾಥೆಯ ಮೊದಲ ಭಾಗ ಸರಳ, ನೇರ, ಸು-ಲಲಿತ ಮತ್ತು ಕೆಲವೊಮ್ಮೆ ತುಡಿಯುವ ಭಾವನಾತ್ಮಕ ಭಾಷೆಯಲ್ಲಿ ಹರಿಯುತ್ತಾ ತನಗೆ ತಾನೆ ಕುತೂಹಲಕಾರಿ ಓದನ್ನು ಆಹ್ವಾನಿಸಿಕೊಳ್ಳುತ್ತದೆ. ಲೇಖಕರಿಗೇ ಸುಸ್ತು ಮಾಡುವಷ್ಟು ಅವರ ಮುಂದೆ ತೆರೆದುಕೊಂಡ, ಬೇಸರ ಪಡಿಸುವಷ್ಟು ವಿವರಗಳನ್ನು ಒಳಗೊಂಡ ವಿದೇಶ ಪ್ರವಾಸಗಳ ಅಧ್ಯಾಯ ಇದಕ್ಕೊಂದು ಅಪವಾದ.
ಬಿಳಿಮಲೆ ಕಾಡು ಮೂಲೆಯ ಅಷ್ಟೇನೂ ಅನುಕೂಲವಿಲ್ಲದ ಕುಟುಂಬವೊಂದರಿಂದ ಬಂದವರಾದರೂ, ಅವರ ಅಜ್ಜ ಅವರ ಗೌಡ ಸಮುದಾಯದ ಮಧ್ಯೆ ಹೆಸರಾದವರು. ಇನ್ನು ಅವರ ತಂದೆ-ತಾಯಿ ಇಬ್ಬರೂ ಅಕ್ಷರಸ್ಥರಾಗಿದ್ದು, ತಂದೆ ಯಕ್ಷಗಾನ-ತಾಳೆಮದ್ದಲೆ ಕಲಾವಿದರಾಗಿದ್ದರೆ, ತಾಯಿ ಕಾದಂಬರಿಗಳನ್ನು ಓದಬಲ್ಲ 'ಆಧುನಿಕ'ರಾಗಿದ್ದರು. ಆದರೆ ಇದೇನೂ ಪುರುಷೋತ್ತಮನ ಬಾಲ್ಯವನ್ನು ಕಾಡು ಬದುಕಿನಿಂದ ಪಾರುಮಾಡಿರಲಿಲ್ಲ. ಕೃತಿಯ ಈ ಘಟ್ಟದ ಬದುಕಿನ ವಿವರಗಳು ಎಷ್ಟು ಜೀವಂತವಾಗಿವೆಯೆಂದರೆ, ಇವೇ ಲೇಖಕನ ಅಂತಿಮ ಬೆಳವಣಿಗೆಯನ್ನು ಬೆರಗಿನಿಂದ ನೋಡವಂತೆ ಮಾಡುವುದು, ವಿಶೇಷವಾಗಿ ವಾಟೆಕಜೆಯ ಕಾಡು, ಕೂತ್ಕುಂಜದ ಶಾಲೆ ಮತ್ತು ಯಕ್ಷಗಾನದ ಬಣ್ಣದ ಲೋಕಕ್ಕೆ ಒಯ್ಯುವ ಪಂಜದ 'ನಾಗರಿಕ' ಲೋಕದ ಅನುಭವಗಳು, ತಂದೆಯ ಜಾತಕ ವ್ಯಸನ ಹೇಳಿದ 'ಸತ್ಯ'ದ ಹೊರತಾಗಿಯೂ ಎಸ್ಸೆಸೆಲ್ಸಿ ಪಾಸಾಗಿ ತಂದೆಯದೇ ಒತ್ತಾಯದ ಮೇರೆಗೆ ಕೊಕ್ಕರ್ಣೆಯಲ್ಲಿ ಟಿಸಿಎಚ್ ಸೇರಬೇಕಾಗಿ ಬಂದ ಸಂದರ್ಭದಲ್ಲಿ ಸ್ಫೋಟಿಸಿದ ಮರುಷೋತ್ತಮ ಬಿಳಿಮಲೆ ಕಾಗೆ ಮುಟ್ಟಿದ ನೀರು ಹೆಚ್ಚು ವರ್ಷಗಳ ಕಾಲದಿಂದ ದೆಹಲಿ ಅಸಹಾಯಕತೆಯ ಆಳು ಇವರ ಜೀವನದ ಒಂದು ನಿರ್ಣಾಯಕ ತಿರುವಾಗಿ ಮುಂದಿನ ಏರು ಬದುಕಿಗೆ ಇವರನ್ನು ಸಜ್ಜುಗೊಳಿಸುತ್ತದೆ.
ನಂತರದ ಕಥೆ ನಾಗರೀಕ ಲೋಕದಲ್ಲಿ ಅವರ ಬೆಳವಣಿಗೆಯ-ಕಾಲೇಜು ವಿದ್ಯಾಭ್ಯಾಸದ-ವಿವಿಧ ಘಟ್ಟಗಳನ್ನು -ಅಮೃತ ಸೋಮೇಶ್ವರ, ತಾಳ್ತಜೆ ಮೇಷ್ಟ್ರುಗಳ ಮತ್ತು ರಾಮಚಂದ್ರ ಉಚ್ಚಿಲರಂತಹ ಹಿರಿಯ ವೈಚಾರಿಕ ಗೆಳೆಯರ ಆಪ್ತ ಒಡನಾಟದಲ್ಲಿ ಅರಳಿದ ಸಾಹಿತ್ಯ, ಯಕ್ಷಗಾನ, ಜಾನಪದ ಲೋಕ, ಚಾರಣ ಕುರಿತ ವಿಶೇಷ ಆಸಕ್ತಿಗಳ ಜೊತೆಗೇ ಮದ್ರಾಸ್‌ನಲ್ಲಿ ಕೈಗೊಂಡ ಕನ್ನಡ ಎಂಎ. ವ್ಯಾಸಂಗ ಮತ್ತು ಅಲ್ಲಿ ತೆರಕೊಂಡ ಹೊಸ ಲೋಕಾನುಭವಗಳು, ನಂತರ ಸುಳ್ಯದ ಕಾಲೇಜಿನಲ್ಲಿ, ಆನಂತರ ಮಂಗಳೂರು ವಿಶ್ವವಿದ್ಯಾಲಯದಲ್ಲಿ ವಿವೇಕ ರೈ ಅವರ ಮಾರ್ಗದರ್ಶನದಲ್ಲಿ ಗಳಿಸಿದ ಪಿಎಚ್‌ಡಿ ಪದವಿ, ಆನಂತರ ಅಲ್ಲೇ ನಡೆಸಿದ ಅಧ್ಯಾಪನ ಇವೆಲ್ಲ ಸರಳರೇಖಾತ್ಮಕವಾಗಿ ಇಲ್ಲಿ ವಿವರಿಸಲ್ಪಟ್ಟಿವೆ. ಇವುಗಳ ಜೊತೆಗೆ ಆ ಯೌವ್ವನದ ದಿನಗಳಲ್ಲಿ ಅವರ ಲೋಕದೃಷ್ಟಿಯನ್ನು ರೂಪಿಸಿದ್ದೆಂದು ಹೇಳಬಹುದಾದ ಕೋವೂರ್ ಪ್ರಣೀತ ವಿಚಾರವಾದ ಕಮ್ಯೂನಿಸ್ಟ್ ವಿಚಾರಧಾರೆಯ 'ಕ್ರಾಂತಿಕಾರಿ ಚಟುವಟಿಕೆಗಳು ಇವರನ್ನು ಮಂಗಳೂರಿನ ಸುತ್ತಮುತ್ತಲಿನ ಸಾರ್ವಜನಿಕ ಜೀವನದಲ್ಲಿ ಸುಪರಿಚಿತಗೊಳಿಸಿದ್ದವು.
ಆದರೆ ನಂತರ ಆಗತಾನೇ ಆರಂಭವಾಗಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಒಮ್ಮೆಗೇ ಪ್ರಾಧ್ಯಾಪಕರಾಗಿ ಕಂಬಾರರಿಂದ ಆಹ್ವಾನಿತರಾಗಿ ಅಲ್ಲಿಗೆ ಹೋದ ಮೇಲೆ ಕೆಲ ವರ್ಷಗಳಲ್ಲೇ ಅವರ ಸಂಶಯಕ್ಕೆ ತುತ್ತಾಗಿ ಬೇಸರದಿಂದ ಅಲ್ಲಿಂದ ಕು.ಶಿ ಹರಿದಾಸ ಭಟ್ಟರ ಸೂಚನೆಯಂತೆ ದೆಹಲಿಯಲ್ಲಿನ 'ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್'ನ ಉಪನಿರ್ದೇಶಕರಾಗಿ ಸೇರಿದ ನಂತರ ಬಿಳಿಮಲೆಯವರದ್ದು ಸುಗಮ ಬದುಕಿನ ಏರುದಾರಿಯೇ. ಇದಕ್ಕೆ ತಕ್ಕುನಾಗಿಯೇ ಪುಸ್ತಕದ ಈ ಮೊದಲ ಭಾಗ ಸುಗಮ ಓದಿಗೆ ದಕ್ಕುತ್ತದೆ.
ಬಿಳಿಮಲೆಯವರು ತಾವು ದೆಹಲಿಯಲ್ಲಿ ಸ್ವಂತ ಮನೆ ಹೊಂದಿದ್ದು, ತಮ್ಮ ದೇಶ-ವಿದೇಶಗಳ ವಾಸ-ಪ್ರವಾಸಗಳ ಒಣ ವಿವರ-ಅನುಭವಗಳು, ಹೊಸದೇನೂ ಇಲ್ಲದ ದೇವರು, ಸಾವು, ಪುರ್ನಜನ್ಮ, ಜಾತಿ ವ್ಯವಸ್ಥೆ ಕುರಿತ ತಮ್ಮ ವಿಚಾರಗಳು ಮತ್ತು ತಮ್ಮ ಕಾಯಿಲೆ-ಕಸಾಲೆಗಳ-ಚಿಕಿತ್ಸೆಗಳ ಕಥೆ ಹೇಳುವ ಈ ಇಡೀ ಎರಡನೇ ಭಾಗದಲ್ಲಿ ನಮ್ಮ ಮನಸ್ಸಿನಲ್ಲಿ ಉಳಿಯುವ ಮೂರು ನಿರೂಪಣೆಗಳೆಂದರೆ ಅವರ ಜೆರೂಸಲೆಮ್ ನಗರ ದರ್ಶನ, ಅವರ ಮದುವೆಯ ಪ್ರಸಂಗ ಮತ್ತು ಡಯಾಬಿಟೀಸ್‌ನಿಂದ ಮೂತ್ರಪಿಂಡ ಕಳೆದುಕೊಳ್ಳುವ ಸ್ಥಿತಿ ತಲುಪಿದಾಗ ಪತ್ನಿ ಶೋಭನಾ ಅವರು ತಮ್ಮದೊಂದು ಮೂತ್ರಪಿಂಡ ಕೊಡಲು ನಿರ್ಧರಿಸುವುದನ್ನು ವಿವರಿಸುವ ಮಾರ್ದವ ಬರವಣಿಗೆಯ ಭಾಗಗಳು, ಆಶ್ಚರ್ಯವೆಂದರೆ ಈ ಅತ್ಯ ಕತೆಯಲ್ಲಿ ಹೆಂಡತಿ-ಮಗನ ಪ್ರಸ್ತಾಪ ಬರುವುದು ಆನುಷಂಗಿಕವಾಗಿ ಮಾತ್ರ, ಪತ್ನಿಯ ಮೊದಲ ಪ್ರವೇಶವಾಗುವುದು. ದಿಢೀರನೆ, ಅವರ ವಿದೇಶ ಪ್ರವಾಸದಲ್ಲಿ ಜೊತೆಯಾಗುವ ಪ್ರಸ್ತಾಪದೊಂದಿಗೆ ಮತ್ತೆ ಕಾಣಿಸಿಕೊಳ್ಳುವುದು ಕಿಡ್ನಿ ದಾನಿಯಾಗಿ, ಇನ್ನು ಅವರ ವ್ಯಕ್ತಿತ್ವದ ಅಲ್ಪಸ್ವಲ್ಪವಾದರೂ ಪರಿಚಯವಾಗುವುದು ಜಾತಿ ವ್ಯವಸ್ಥೆ ಕುರಿತ ವಿಚಾರಗಳ ಅಧ್ಯಾಯದಲ್ಲಿ: ಅವರ ಈ ಅಂರ್ತಜಾತಿ ವಿವಾಹದ ಸಾಹಸ ನಿರೂಪಿಸುವಾಗ ಹೀಗಾಗಿ ಈ ಆತ್ಮಕಥೆ ತೀರಾ ಸ್ವಕೇಂದ್ರಿತವಾಗಿ ವಿನ್ಯಾಸಗೊಂಡಿದ್ದೆನಿಸಿ ಈ ಕೃತಿಯ ಮುಖ್ಯ ಶೀರ್ಷಿಕೆಗಿಂತ 'ಚದುರಿ ಬಿದ್ದ ಆತ್ಮದ ತುಣುಕುಗಳು' ಎಂಬ ಅದರ ಉಪಶೀರ್ಷಿಕೆಯೇ ಹೆಚ್ಚು ಅರ್ಥಪೂರ್ಣವೆನಿಸುತ್ತದೆ.
ಈ ಇಡೀ ಕೃತಿಯಲ್ಲಿ ಎದ್ದು ಕಾಣುವ ಬಿಳಿಮಲೆಯವರ ಬದುಕು ಕಟ್ಟಿಕೊಳ್ಳುವ ಹಠ, ಜಾಣೆ, ಅದಕ್ಕೆ ತಕ್ಕುನಾದ ಪ್ರತಿಭೆ ಪರಿಶ್ರಮಗಳ ನಡುವೆಯೂ ಕೆಲವು ಪ್ರಶ್ನಾರ್ಥಕ ಖಾಲಿ ಜಾಗಗಳು ಉಳಿದುಕೊಳ್ಳುತ್ತವೆ. ಉದಾಹರಣೆಗೆ, ಕಂಬಾರರು ತಮ್ಮ ಮೇಲೆ ಸಂಶಯಗ್ರಸ್ತರಾಗಲು ಏನು ಕಾರಣ ಎಂಬ ಸುಳಿವೂ ಇಲ್ಲಿ ದೊರೆಯುವುದಿಲ್ಲ. ವಿಶ್ವವಿದ್ಯಾಲಯದ ಪರವಾಗಿ ಆಹ್ವಾನಿತರಾಗಿದ್ದ ಜಪಾನೀ ಅತಿಥಿಯನ್ನು ವಾಪಸು ಕಳಿಸುವ ಕಂಬಾರರ ತುಘಲಕಿ ನಿರ್ಧಾರದ ಜವಾಬ್ದಾರಿಯನ್ನು ಬಿಳಿಮಲೆಯವರೇಕೆ ವಹಿಸಿಕೊಳ್ಳಬೇಕು? ಕಮ್ಯೂನಿಸ್ಟ್ ಸೂರ್ತಿಯಲ್ಲಿ ಹೋರಾಟಗಾರರಾಗಿ ಬಂಡಾಯ ಸಾಹಿತಿಯೂ ಆಗಿ ಗುರುತಿಸಿಕೊಂಡು ಅಮೆರಿಕಾ ಎಂದರೆ ಬಂಡವಾಳಶಾಹಿ, ಸಾಮ್ರಾಜ್ಯಶಾಹಿ ಎನ್ನುತ್ತಾ ಜಾಗತೀಕರಣದ ವಿರುದ್ಧ ವಾದಿಸುತ್ತಿದ್ದ ಬಿಳಿಮಲೆಯವರು ಯಾವ ದ್ವಂದ್ವವೂ ಇಲ್ಲದೆ ಅಮೆರಿಕಾದ ಸಂಸ್ಥೆಯನ್ನು ಸೇರಿಕೊಂಡದ್ದನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? ಅದೂ ಆ ಹೊತ್ತಿಗೆ ವಿಶ್ವವಿದ್ಯಾನಿಲಯದಿಂದ ಕಂಬಾರರ ನಿರ್ಗಮನ ಖಚಿತವಾಗಿದ್ದಾಗ, ಅಲ್ಲದೆ ಆ ಅಮೆರಿಕನ್ ಸಂಸ್ಥೆಯ ಹುದ್ದೆಗೆ ಇಂಗ್ಲಿಷ್‌ನಲ್ಲಿ ಅರ್ಜಿ ಬರೆಯಲೂ ಬಾರದವನಾಗಿದ್ದೆ ಎಂದು ಹೇಳಿಕೊಳ್ಳುವ ಅವರು ನೇರವಾಗಿ ಅದರ ಉಪನಿರ್ದೇಶಕರಾಗಿ ಸೇರಿಕೊಂಡು, ನಂತರದ ವರ್ಷಗಳಲ್ಲಿ ಅದರ ಆಡಳಿತ ಮಂಡಳಿಯ ನಿರ್ದೇಶಕರಾದ ಹದಿನೇಳು ವರ್ಷಗಳಷ್ಟು ದೀರ್ಘ ಅವಧಿಯ ತಮ್ಮ ಸಾಧನೆಯ ಕಥೆಯನ್ನು ಕೇವಲ ಏಳೆಂಟು ಪುಟಗಳಲ್ಲಿ ಮುಗಿಸಿ ನಮ್ಮಲ್ಲಿ ಆಶ್ಚರ್ಯವನ್ನುಂಟು ಮಾಡುತ್ತಾರೆ. ಜೊತೆಗೆ ಈ ದೀರ್ಘ ಸೇವಾವಧಿಯ ಕಾಲದಲ್ಲಿ ಅವರ ಎಡಪಂಥೀಯ ಆಲೋಚನೆಗಳು ಏನಾಗಿದ್ದವು ಎಂಬುದರ ಸುಳಿವು ಎಲ್ಲೂ ದೊರಕುವುದಿಲ್ಲ. ಅವುಗಳ ಪ್ರಸ್ತಾಪ ಮತ್ತೆ ಕಾಣಿಸಿಕೊಳ್ಳುವುದು ಅವರು ಜೆಎನ್‌ಯು ಸೇರಿದ ಮೇಲೇ, ಹಾಗೇ, ಕರ್ನಾಟಕ ಸಂಘದ ಆಡಳಿತ ಕಾಲದಲ್ಲಿ ತಮ್ಮ ವಿರೋಧಿ ಗುಂಪು ತಮ್ಮ ಮೇಲೆ ಅಪಪ್ರಚಾರದಲ್ಲಿ ತೊಡಗಿತು ಎನ್ನುವ ಬಿಳಿಮಲೆ ಆ ಅಪಪ್ರಚಾರಕ್ಕೆ ಕಾರಣಗಳೇನು ಮತ್ತು ಅದರ ವಾದವೇನಾಗಿತ್ತು ಎಂಬುದರ ಸೂಚನೆಯನ್ನೂ ನೀಡುವುದಿಲ್ಲ. ಬದುಕಲ್ಲಿ ಕಹಿ ಉಂಡಿರುವಾಗ, ದ್ವಂದ್ವಗಳ ಸಂಕಟಗಳನ್ನು ಎದುರಿಸಿರುವಾಗ ಮತ್ತು ಅವನ್ನೆಲ್ಲ ಜಯಿಸಿ ದಡ ಮುಟ್ಟಿರುವಾಗ ಅದನ್ನು ಅದಿದ್ದಂತೆ ದಾಖಲಿಸಲು ಹಿಂಜರಿಯುತ್ತಾ ಸಜ್ಜನ (ಜಂಟ್‌ಮನ್)ನಾಗಿ ಉಳಿಯಬಯಸುವ ಉದ್ದೇಶವಾದರೂ ಏನು? ಉದ್ದೇಶ ಏನೇ ಇರಲಿ, ಪರಿಣಾಮವಂತೂ ಸ್ಪಷ್ಟ ಕಥನದ ಸಮಗ್ರತೆ(Integrity) ಭಂಗಗೊಂಡಿದೆ. ನಿರೂಪಣೆಯ ಬೆನ್ನೆಲುಬು ಸಡಿಲವಾಗಿದೆ.
- ಡಿ.ಎಸ್. ನಾಗಭೂಷಣ
ಕೃಪೆ: ಹೊಸ ಮನುಷ್ಯ ಸೆಪ್ಟೆಂಬರ್ 2020
©2024 Book Brahma Private Limited.