ಮೋನು ಸ್ಮೃತಿ

Author : ಬೊಳುವಾರು ಮಹಮದ್ ಕುಂಞ್

Pages 352

₹ 350.00




Year of Publication: 2021
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸ್ಸಿ ಸೆಂಟರ್ 11 ಕ್ರಾಸ್, ಶಿವಾನಂದ ಸ್ಟೋರ್‍ಸ್ ಹತ್ತಿರ, ಫಿಲ್ಮ್ ಚೇಂಬರ್, ಕುಮಾರ ಪಾರ್ಕ್ ಈಸ್ಟ್, ಶೇಷಾದ್ರಿಪುರಂ, ಬೆಂಗಳೂರು - 560001

Synopsys

‘ಮೋನು ಸ್ಮೃತಿ’ ಕೃತಿಯು ಬೊಳುವಾರು ಮಹಮ್ಮದ್ ಕುಂಞ ಅವರ ಆತ್ಮಕಥನ ಸಂಕಲನವಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಎರಡು ಬಾರಿ ಪ್ರಶಸ್ತಿಗೆ ಭಾಜನರಾದ ಸಾಹಿತಿ, ಕಾದಂಬರಿಕಾರ, ಬೊಳುವಾರು ಮೊಹಮ್ಮದ್ ಕುಂಞಯವರು ಜೀವನದ ವಿವಿಧ ಮಜಲುಗಳನ್ನು ಇಲ್ಲಿನ ಬರಹಗಳಲ್ಲಿ ಕಾಣಬಹುದು. ‘ಬುಸುಗುಟ್ಟಿದ ಮೆಟ್ರಿಮೊನಿ ದಲ್ಲಾಳಿ’ ಮೋನು ಸ್ಮೃತಿಯ ಆತ್ಮಕಥನದ ಒಂದು ಭಾಗವಾಗಿದೆ. ಕೃತಿಯು ಪ್ರತಿಜ್ಞೆ, ಮೋನು ಸ್ಮೃತಿ, ಸಮರ್ಪಣೆ, ಹಕ್ಕುದಾರರು, ಮೋನು ಸ್ಮೃತಿ, ಒಳಗುಟ್ಟು, ಸ್ಮೃತಿ ಒಂದು: ಬೊಳುವಾರು ಕ್ಷೇತ್ರ ಮಹಾತ್ಮೆ, ಅಧ್ಯಾಯ - ಒಂದು : ಹಕ್ಕು ಸ್ಥಾಪನೆ, ಹಳೆ ಸಿಲೆಬಸ್, ಆನೆ ಬಾಲ, ಎರಡಂಗಳದ ಮನೆ, ಹರಾಂ ಬಡ್ಡಿ, ಕೈ ಕೊಟ್ಟ ಮೊದಲ ಹೆಣ್ಣು, ಪರಸ್ತ್ರೀ `ವರ', ರೈ ಬಂಗಲೆ, ವೀಕೆಂಡ್ ಪಾರ್ಟಿ, ಬದುಕು ಬದಲಿಸಿದ ಬಾವಿ, ಅಧ್ಯಾಯ - ಎರಡು : ಮಂಗಳೂರು ಸಮಾಚಾರ, ಫಂಡ್ ಕಮಿಟಿ, `ಮೈಕಾಲ' ಮಹಾತ್ಮೆ, ಬೆಬ್ಬೆ ಮೋನು, ಪ್ರೊ. ಡಿನ್ ಗೂಲಿ, ದಿನಗೂಲಿ, ಅಧ್ಯಾಯ - ಮೂರು : ಅಭಿಜ್ಞಾನ ಶಾಕುಂತಲ, ಕೇರಂ ಬೋರ್ಡ್, ಲವ್ ಲೆಟರ್ಸ್, ನಿರೀಕ್ಷೆ, ಮೊದಲ ಲವ್ ಜೆಹಾದ್, ನವಭಾರತ , ಶಾಸನ ವಿಧಿಸಿದ ಎಚ್ಚರಿಕೆ, ಶತಮಾನದ ಸಣ್ಣ ಕತೆಗಳು ರಾಜದೂತ, ಮನವೆಂಬ ಮರ್ಕಟ, ಅಧ್ಯಾಯ - ನಾಲ್ಕು : ಸಮಯಕ್ಕೊಂದು ಸುಳ್ಳು, ಜಾತಿದ ಬ್ರಾಂತಿ, ಬಲ್ಲಿರೇನಯ್ಯಾ?, ಅಧ್ಯಾಯ - ಐದು: ವರ್ಗ ಸಂಘರ್ಷ ಫಾದರ್ ಸೀರಿಯೆಸ್, ಬಾಗಿಲನು ತೆರೆದು, ಅಧ್ಯಾಯ - ಆರು : ಸೆಕೆಂಡ್ ಎಟೆಂಪ್ಟು, ಸರಳ ರಗಳೆ ನನ್ನ ಅಕ್ಕ ಬೀಪಾತುಮ್ಮ, ಶಾಲೆ ಬಿಡಿಸಿ ಮನೆಗೆ ಕರೆಸಿ, ಕೋಳಿ ಮೊಟ್ಟೆ, ದಿಗ್ವಿಜಯ, ಕಾಫರರ ಕನ್ನಡ, ಹುಡುಗಿ ನೋಡುವ ಸಮಯ, ಮಕ್ಕಳ ದಿನಾಚರಣೆ, ನಾಟಿ ಹರಾಮಿ!, ಬಹಿರಂಗ ಚರ್ಚೆಗೆ ಆಹ್ವಾನ, ಇನ್ ಲ್ಯಾಂಡ್ ಲೆಟರ್ ಕಮಾಲ್, ಸ್ಮೃತಿ: ಎರಡು - ತೇರಬೀದಿಯ ಸರದಾರರು, ಅಧ್ಯಾಯ - ಒಂದು - ರೀಯಲ್ ಏಜೆಂಟ್, ಮುಸ್ಲಿಮನಾದರೂ ಒಳ್ಳೆಯವನು!, ಮುತ್ತುಪ್ಪಾಡಿ, ವಿಶ್ವ ಮಾನವ ಪತಿವಾಕ್ಯ ಪರಿಪಾಲನೆ, ಅಧ್ಯಾಯ - ಎರಡು : ಇಂದಿರಾ ಭಾಗ್, ಬೇರೆ ಯಾರೂ ಇಲ್ವಾ?, ನಡುಬೀದಿ ನಾರಾಯಿಣಿ, ನಿನಗೆ ಕೇಳಿಸಲಿಲ್ಲ. ನಿನಗೆ ಕಾಣಿಸಲಿಲ್ಲ', `ಪೈ ವಾಕ್ಯ' ಪರಿಪಾಲನೆ, ಮಾಪುಳ್ತಿ ದೈವ, ನನ್ನೆದುರು ಇದ್ದದ್ದು ಎರಡೇ ಕತ್ತಲ ದಾರಿಗಳು, ನಗುವ ಹೂವು, ಹೆಣ್ಣು ಮಕ್ಕಳ `ಸಿ.ಡಿ.' ಮಾಡುವ ಬೆದರಿಕೆ!, ಅಧ್ಯಾಯ - ಮೂರು : `ಧರ್ಮ' ದಫನ, ಅಧ್ಯಾಯ - ನಾಲ್ಕು : `ಧರ್ಮ' ಸಂಕಟ, ಮೂಲ ಭೂತ, ಮಮತೆಯ ಕರೆ, ಗೋಕಾಕ ಚಳುವಳಿ, `ಕನ್ನಡ ಬೆಳೆಸಿ ಬಳಗದ' ಸ್ಪಷ್ಠೀಕರಣ, ಕೈಕೊಟ್ಟ ಗೋಕಾಕರು, ಬ್ಯಾಂಕ್ ಕೆಲಸಕ್ಕೆ ರಾಜೀನಾಮೆ, ರೇಶನ್ ಕಾರ್ಡ್ ಪೂಜಾರಿ, ಅಧ್ಯಾಯ - ಐದು : ಪಾಪ ನಿವೇದನೆ, ಹದಿನೆಂಟು ದಾಟಿದೆ, ಫೊಟೋ ಕಟ್, ಬ್ಲಾಕ್ ನಂಬರ್-3, ಜಿಲ್ಲಾ ಕಾರಾಗ್ರಹ, ಮಂಗಳೂರು, ಬಾಬ್ರಾಯರ `ಬಿಸ್ಕುಟಂಬಡೆ, ಪರಾವರ್ತಿತ ಪ್ರತಿಕ್ರಿಯೆ, `ಲವ್ ಜೆಹಾದ್'ಗೆ ಸ್ಪೆಶಲ್ ಡಿಸ್ಕೌಂಟ್, ನಾದಿನಿಯ `ಗೃಹ ಪ್ರವೇಶ', ಭಾರತೀಯ ಜನತಾ ಪಾರ್ಟಿ'ಯಿಂದ ನಿರಪೇಕ್ಷಣಾ ಪತ್ರ, ಡಿಸ್‌ಕಸ್ ಮಾಡಿಕೊಂಡೇ ಬಂದವರು!, ಕೊನೆಯ ಅಂಕ, ಮರಣ ದಂಡನೆ, ಅಂತಿಮ ಇಚ್ಛೆ, ಅಧ್ಯಾಯ - ಆರು : ದಂಗೆಯ ಮುಂಚಿನ ದಿನಗಳು, ಡಾ. ಪೋಲಂಕಿ ಸಭೆಗೆ ಅಡ್ಡಿ, ಗೊಂದಲ ಹೀಗೆ ಹಲವಾರು ಅಧ್ಯಾಯಗಳನ್ನು ಒಳಗೊಂಡಿದೆ.

 

About the Author

ಬೊಳುವಾರು ಮಹಮದ್ ಕುಂಞ್
(22 October 1951)

ಕನ್ನಡದ  ವಿಶಿಷ್ಟ ಕತೆಗಾರ ಬೊಳುವಾರು ಮಹಮದ್ ಕುಂಞ್   ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ‘ಅತ್ತ, ಇತ್ತಗಳ ಸುತ್ತಮುತ್ತ’. ದೇವರುಗಳ ರಾಜ್ಯದಲ್ಲಿ, ಅಂಕ, ಆಕಾಶಕ್ಕೆ ನೀಲಿ ಪರದೆ, ಒಂದು ತುಂಡು ಗೋಡೆ, ಅವರ ಕಥಾಸಂಗ್ರಹಗಳು. ತಟ್ಟು ಚಪ್ಪಾಳೆ ಪುಟ್ಟ ಮಗು ಅವರು ಸಂಪಾದಿಸಿದ ಮಕ್ಕಳ ಪದ್ಯಗಳ ಸಂಕಲನ. ಜಿಹಾದ್, ಸ್ವಾತಂತ್ರ್ಯದ ಓಟ, ಓದಿರಿ ಅವರ ಕಾದಂಬರಿಗಳು. ಬ್ಯಾಂಕ್ ಉದ್ಯೋಗಿಯಾಗಿ ನಾಲ್ಕು ದಶಕ ಕೆಲಸ ಮಾಡಿ ನಿವೃತ್ತರಾಗಿರುವ ಬೊಳುವಾರರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.  ಕನ್ನಡ ಗದ್ಯ ಸಾಹಿತ್ಯಕ್ಕೆ ಮುಸ್ಲಿಂ ಬದುಕನ್ನು ಮೊತ್ತ ಮೊದಲು ಪರಿಚಯಿಸಿದ ಇವರು, ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ ಎಂಬ ...

READ MORE

Reviews

‘ಮೋನು ಸ್ಮೃತಿ’ ಕೃತಿಯ ವಿಮರ್ಶೆ

ಮುಸ್ಲಿಮನಾದರೂ ಒಳ್ಳೆಯವನು!

ನಾನು ಊರಲ್ಲಿಲ್ಲದ ದಿನಗಳಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರು ನಮ್ಮೂರಲ್ಲಿ ‘ತುರ್ತು ಪರಿಸ್ಥಿತಿ’ ಜ್ಯಾರಿಗೊಳಿಸಿಬಿಟ್ಟಿದ್ದರು. ಗುಲಬರ್ಗಾದಿಂದ ನಾನು ಹುಟ್ಟೂರಿಗೆ ಮರಳುವಷ್ಟರಲ್ಲಿ ಎಲ್ಲ ಪ್ರಜೆಗಳೂ ‘ತುರ್ತು ಪರಿಸ್ಥಿತಿ’ಯೊಂದಿಗೆ ಒಗ್ಗಿಕೊಂಡು ಸುಖ ಸಂಸಾರ ನಡೆಸುತ್ತಿದ್ದರು. ಆದರೆ, ಅದಕ್ಕೆ ತುರ್ತಾಗಿ ‘ತಲಾಕ್’ ನೀಡಲು ಗುಟ್ಟಾಗಿ ತಯಾರಿ ನಡೆಸುತ್ತಿದ್ದವರು, ‘ಜನಸಂಘ’ದವರು ಮಾತ್ರ. ಪಾರ್ಟಿಯ ಲೋಕಲ್ ನಾಯಕರಲ್ಲೊಬ್ಬರಾಗಿದ್ದ ಶ್ರೀ ದೇವದಾಸ ಭಕ್ತರಿಗೆ ನಮ್ಮ ಬ್ರಾಂಚಿನ ಎದುರಲ್ಲೇ ಒಂದು ಜೀನಸು ಬಂಡಸಾಲೆಯಿತ್ತು. ಅವರ ಮಗ ರಾಧಾಕೃಷ್ಣ ಭಕ್ತ, ಕೊಂಬೆಟ್ಟು ಹೈಸ್ಕೂಲಿನಲ್ಲಿ ನನ್ನ ಕ್ಲೋಸ್ ಫ್ರೆಂಡು. ನಾನು ಪರವೂರಲ್ಲಿದ್ದಾಗ ಊರೊಳಗೆ ‘ತುರ್ತು ಪರಿಸ್ಥಿತಿ’ ಹೆಸರಲ್ಲಿ ಯಾರು ಯಾರಿಗೆ ಹೊಡೆದಿದ್ದರು, ಯಾರು ಯಾರನ್ನು ಕೊಂದಿದ್ದರು ಎಂಬಿತ್ಯಾದಿಗಳ ವರದಿ ಒಪ್ಪಿಸಿದ್ದವರು ಅವರು.

ಪ್ರತಿದಿನ ಸಂಜೆ ಬ್ಯಾಂಕಿನ ಮೆಟ್ಟಿಲಿಳಿಯುತ್ತಿದ್ದಂತೆಯೇ ಕಣ್ಣಿಗೆ ಬೀಳುತ್ತಿದ್ದದ್ದು, ಬಂಡಸಾಲೆಯ ಬಾಗಿಲ ಬಳಿ ಇರಿಸಿದ್ದ ಬೀಟಿ ಮರದ ಚಂದದ ಸೋಫಾದ ಮೇಲೆ ಒಂದು ಕಾಲು, ನೆಲದ ಮೇಲೆ ಮತ್ತೊಂದು ಕಾಲು ಅಂಟಿಸಿಕೊಂಡು ಕುಳಿತಿರುತ್ತಿದ್ದ ರಾಧಾಕೃಷ್ಣರ ಚಿಕ್ಕಪ್ಪ ಶ್ರೀ ಗೋಪಾಲಕೃಷ್ಣ ಭಕ್ತರು. ಅವರ ಬಳಿಗೆ ಹೋಗಿ, ಒಂದೈದು ನಿಮಿಷ ತಮಾಷೆ ಮಾತನಾಡದೆ, ಮುಸ್ಸಂಜೆಯ ‘ಪಟ್ಟಾಂಗ ಕಟ್ಟೆ’ಯಾಗಿದ್ದ ‘ಸುಜಾತಾ ಹೋಟೆಲ್’ ಜಗಲಿಗೆ ಹೋಗುತ್ತಿರಲಿಲ್ಲ. ಕೆಲವೊಂದು ಸಂಜೆಗಳಲ್ಲಿ ಜನಸಂಘದ ಆ ಕಾಲದ ಲೀಡರಾಗಿದ್ದ ಶ್ರೀ ವಿಶ್ವನಾಥ ನಾಯಕರೂ, ವಿವೇಕಾನಂದ ಕಾಲೇಜಿನ ಪ್ರಾಂಶುಪಾಲರಾಗಿದ್ದ ಶ್ರೀ ಸೂರ್ಯನಾರಾಯಣಪ್ಪನವರೂ ಅಂಗಡಿಗೆ ಬರುತ್ತಿದ್ದರು. ಅವರೆಲ್ಲರಿಗೂ, ‘ಮುಸ್ಲಿಮನಾದರೂ ಒಳ್ಳೆಯವನು’ ಆಗಿದ್ದ ನಾನೆಂದರೆ ಬಲು ಪ್ರೀತಿ.

ಈ ‘ಮುಸ್ಲಿಮನಾದರೂ ಒಳ್ಳೆಯವನು’ ಎಂಬ ಅಪ್ಪಟ ಹಿಂದೂಸ್ತಾನೀ ಜೋಡಿ ಪದಗಳ ಕಾಪಿರೈಟ್ ‘ಪ್ರಜಾಮತ’ ವಾರಪತ್ರಿಕೆಯ ಸಂಪಾದಕರಾಗಿದ್ದ ಶ್ರೀ ಮ. ನ. ಮೂರ್ತಿಯವರಿಗೆ ಸಲ್ಲಬೇಕು. ಅದಕ್ಕೆ ಕಾರಣ, ಅವರ ‘ಪ್ರಜಾಮತ’ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ‘ಗುಪ್ತ ಸಮಾಲೋಚನೆ’ ಎಂಬ ಬಹುಜನಪ್ರಿಯ ‘ಕಾಲಂ’. ಪತ್ರಿಕೆ ಕೈ ಸೇರುತ್ತಲೇ ತೆರೆಸಿಕೊಳ್ಳುತ್ತಿದ್ದ ಪುಟ ಅದು.

ಒಮ್ಮೆ ಒಬ್ಬಳು ಹೆಣ್ಣು ಮಗಳು, ‘ನಾನು ಒಬ್ಬರನ್ನು ಪ್ರೀತಿಸುತ್ತಿದ್ದೇನೆ. ಅವರು ಮುಸ್ಲಿಮರಾದರೂ ಒಳ್ಳೆಯವರು’ ಎಂದು ಆರಂಭಿಸಿ ತನ್ನ ಪ್ರೇಮ ತಾಪತ್ರಯಗಳನ್ನು ವಿವರಿಸಿದ್ದಳು. ನನಗೆ ‘ಜ್ಞಾನೋದಯ’ ಆದದ್ದು ಆಗ.

ಆ ನಂತರದ ದಿನಗಳಲ್ಲಿ, ನಾನು ಹೊಸ ಕತೆಗೆ ಪಂಚಾಂಗ ಹಾಕುತ್ತಿದ್ದಾಗಲೆಲ್ಲ ಅವಳು ನನ್ನ ಕೈ ಹಿಡಿದು ಎಳೆಯುತ್ತಿದ್ದಳು. ‘ನನಗೊಂದು ಉತ್ತರ ಕೊಡು’ ಎಂದು ಒತ್ತಾಯಿಸುತ್ತಿದ್ದಳು. ಆ ಪತ್ರದ ಕಾರಣದಿಂದ ‘ಪ್ರಜಾಮತ’ದ ಉಪ ಸಂಪಾದಕಿ, ಕತೆಗಾರ್ತಿ ಶ್ರೀಮತಿ ವೈ. ಕೆ. ಸಂಧ್ಯಾ ಶರ್ಮಾ ಪರಿಚಯವಾದರು. ಅವರ ಮೂಲಕ ಸರ್ವಶ್ರೀ ಈಶ್ವರಚಂದ್ರ, ಎಮ್. ಕೆ. ಗೋಪಿನಾಥ್, ಮನೋಹರ ಚಂದ್ರನ್, ಚಿರಂಜೀವಿ, ಮೊದಲಾದ ಸಾಹಿತಿಗಳ ಪರಿಚಯ ಲಾಭವೂ ಆಯಿತು. ಬೆಂಗಳೂರಿಗೆ ಹೋದಾಗಲೆಲ್ಲ ಜಯನಗರದ ಪಾರ್ಕ್‌ನಲ್ಲಿ ಅವರು ನಡೆಸುತ್ತಿದ್ದ ಖಾಸಗಿ ‘ಸಾಹಿತ್ಯ ಸಂವಾದ’ದಲ್ಲಿ ನಾನೂ ಸೇರಿಕೊಳ್ಳತೊಡಗಿದೆ. ಅಂತಹ ಒಂದು ಸಂವಾದದಲ್ಲಿ, ಶ್ರೀ ಹೊ. ವೆ. ಶೇಷಾದ್ರಿಯವರಿಂದ ನನಗೆ ಬಂದಿದ್ದ ಅಭಿನಂದನಾ ಪತ್ರವೊಂದರ ಬಗ್ಗೆ ಹೆಮ್ಮೆಯಿಂದಲೇ ಹೇಳಿಕೊಂಡಿದ್ದೆ. ನನ್ನ ಕತೆಯೊಂದನ್ನು ಓದಿ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದ ಶೇಷಾದ್ರಿಯವರು, ‘ನೀವು ಕರ್ನಾಟಕದ ಹಮೀದ್ ದಳವಾಯಿ’ ಎಂಬುದಾಗಿ ಹೊಗಳಿದ್ದರು.

ಶ್ರೀ ಹೊ.ವೆ. ಶೇಷಾದ್ರಿಯವರು ಯಾರು ಮತ್ತು ಏನು ಎಂಬುದು ನನಗೆ ತಿಳಿದಿತ್ತು. ಆದರೆ, ಆ ‘ದಳವಾಯಿ’ಯವರ ಬಗ್ಗೆ ಆಗ ನನಗೇನೇನೂ ಗೊತ್ತಿದ್ದಿರಲಿಲ್ಲ. ನನ್ನ ದಡ್ಡತನವನ್ನು ನೀವಾಳಿಸಿ ಎಸೆದವರು ಅದೇ ‘ಜಯನಗರ ಪಾರ್ಕ್’ನ ಗೆಳೆಯರಲ್ಲೊಬ್ಬರಾಗಿದ್ದ ಶ್ರೀ ಈಶ್ವರಚಂದ್ರ ಅವರು.

ಸರ್ವಶ್ರೀ ರಾಮ ಮನೋಹರ ಲೋಹಿಯಾ, ಜಯಪ್ರಕಾಶ ನಾರಾಯಣರಂತಹ ಸಮಾಜವಾದಿಗಳಿಂದ ಪ್ರೇರಿತರಾಗಿದ್ದ ದಳವಾಯಿ ಸಾಹೇಬರು, ಮಹಾರಾಷ್ಟ್ರದಲ್ಲಿ ‘ಮುಸ್ಲಿಮ್ ಸತ್ಯಶೋಧಕ ಸಂಘ’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಮುಸ್ಲಿಮ್ ಮಹಿಳೆಯರ ಪರವಾಗಿದ್ದ ಅವರ ಕಾರ್ಯಕ್ರಮಗಳೆಲ್ಲವೂ ಸಹಜವಾಗಿ ಮುಸ್ಲಿಮ್ ಮಹನೀಯರಿಗೆ ‘ಹರಾಂ’ ಅನ್ನಿಸಿಕೊಂಡಿದ್ದವು. ಅದೆಲ್ಲವೂ ಸರಿ. ನನಗೆ ದಳವಾಯಿ ಸಾಹೇಬರೂ ಬಹಳ ಇಷ್ಟವಾದರು. ಆದರೆ, ಮುಸ್ಲಿಮರಿಗೆ ‘ಹರಾಂ’ ಅನ್ನಿಸಿ ಕೊಂಡವರೆಲ್ಲರೂ ‘ಜನಸಂಘ’ದವರಿಗೆ ಮಾತ್ರ ಯಾಕೆ ‘ಹಲಾಲ್’ ಆಗುತ್ತಾರೆ?

ಆ ದಿನಗಳಲ್ಲಿ ನನ್ನೂರ ನನ್ನ ಓದುಗರಲ್ಲಿ ನೂರಕ್ಕೆ ತೊಂಬತ್ತೊಂಬತ್ತು ಮಂದಿ ಮುಸ್ಲಿಮೇತರರು. ದುಡ್ಡು ಕೊಟ್ಟು ದಿನಪತ್ರಿಕೆಗಳನ್ನೂ, ವಾರ ಅಥವಾ ಮಾಸ ಪತ್ರಿಕೆ ಗಳನ್ನೂ ತರಿಸಿಕೊಂಡು ಟೀಪಾಯಿಗಳನ್ನು ಚಂದಗಾಣಿಸುತ್ತಿದ್ದವರು ಅವರು ಮಾತ್ರ. ಓದುಗರಲ್ಲಿ ಹೆಚ್ಚಿನವರು ಅಡಿಕೆಭಟ್ಟರುಗಳು. ಹಾಗಾದರೆ, ಅವರೆಲ್ಲರಿಂದ ನನಗೆ ಸಿಗುತ್ತಿದ್ದ ಮೆಚ್ಚುಗೆಗಳೆಲ್ಲವೂ ಮುಸ್ಲಿಮರ ಕಂದಾಚಾರಗಳನ್ನು ಪ್ರಶ್ನಿಸುತ್ತಿರುವುದಕ್ಕೆ ಮಾತ್ರವೆ? ಹಿಂದೂಗಳ ಕಂದಾಚಾರಗಳನ್ನು ಪ್ರಶ್ನಿಸಿದರೆ, ಅವರಿಗೂ ನಾನೊಬ್ಬ ‘ಹರಾಮಿ’ಯಾಗಿ ಕಾಣಿಸಲಾರಂಭಿಸುತ್ತೇನೆಯೆ? ಯಾರಲ್ಲಿ ಕೇಳುವುದು?

ಈ ‘ಹರಾಮಿ-ಚರಾಮಿ’ಗಳ ಎಡಬಲಗಳನ್ನು ನನ್ನೊಳಗೇ ಪ್ರಶ್ನಿಸಿಕೊಳ್ಳುತ್ತಾ, ‘ಮುಸ್ಲಿಮನಾಗಿರುವುದೆಂದರೆ’ ಎಂಬ ಲೇಖನ ಬರೆದು, ‘ತುಷಾರ’ಕ್ಕೆ ಕಳಿಸಿದ್ದೆ. ಆ ಪತ್ರದಲ್ಲಿ, ಮುಸ್ಲಿಮನೊಬ್ಬನ ಮಗನಾಗಿ ಹಿಂದೂಸ್ಥಾನದಲ್ಲಿ ಹುಟ್ಟಿದ ಕಾರಣದಿಂದ ನಾನು ಎದುರಿಸುತ್ತಿರುವ ಇರುಸು ಮುರುಸುಗಳೆಲ್ಲವನ್ನೂ ತೋಡಿಕೊಂಡಿದ್ದೆ. ಆದರೆ, ಅದು ‘ತುಷಾರ’ದಲ್ಲಿ ಪ್ರಕಟವಾಗಲಿಲ್ಲ.

ಅದೇಕೆ ಪ್ರಕಟವಾಗಲಿಲ್ಲ ಎಂಬುದಕ್ಕೆ ಉದಯವಾಣಿಯ ಸಂಪಾದಕರುಗಳಲ್ಲಿ ಒಬ್ಬರಾಗಿದ್ದ, ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಮಾರ್ಚ್ 26, 1977ರಂದು ನನಗೆ ಬರೆದಿದ್ದ ಸಮಜಾಯಿಸಿ ಪತ್ರದ ಕೆಲವು ಸಾಲುಗಳು ಈ ಮುಂದಿನವು.

‘‘‘ತುಷಾರಕ್ಕೆಂದು ನೀವು ಬರೆದು ಕಳಿಸಿದ್ದ, ವಿಚಾರ ಪತ್ರ ಓದಿದ್ದೆ. ಕನ್ನಡಿಯಂತೆ ಪಾರದರ್ಶಕವಾಗಿ ನಿಮ್ಮ ಹೃದಯವನ್ನು ತೆರೆದಿಟ್ಟು ಬರೆಯಬಲ್ಲಿರಿ. ಪತ್ರ ಚೆನ್ನಾಗಿತ್ತು. ಚುರುಕಾಗಿತ್ತು. ಸಮಾಜ, ವಾತಾವರಣ ಎಲ್ಲವನ್ನೂ ಮರೆತು ತಟಸ್ಥವಾಗಿ ಡಿಟ್ಯಾಚ್ಡ್ ಆಗಿ, ವಸ್ತುನಿಷ್ಠವಾಗಿ ನೀವು ವಿಷಯಗಳನ್ನು ಕಾಣಬಲ್ಲಿರಿ. ಇದು ಒಂದು ಅಪರೂಪದ ಗುಣ. ಇದನ್ನು ಉಳಿಸಿಕೊಳ್ಳಿ; ಬೆಳೆಸಿಕೊಳ್ಳಿ. ಆದರೆ, ತುಷಾರ ನಿಮ್ಮ ಈ ಪತ್ರವನ್ನು ಪ್ರಕಟಿಸುವಂತಿಲ್ಲ. ಕಾರಣ ನಿಮಗೂ ಗೊತ್ತು. ಪತ್ರಿಕೆಯವರೆಂದರೆ. … … ಇದ್ದಂತೆ. ದುಡ್ಡು ಕೊಟ್ಟವರೆಲ್ಲರೂ ಅದರ ಧನಿಗಳು. ಎಲ್ಲರನ್ನೂ ಪ್ಲೀಸ್ ಮಾಡುವ ಮುಖವಾಡ ಹೊತ್ತೇ ಬದುಕುವುದು ಅದರ ಜಾಯಮಾನ.’’’

ಒಮ್ಮೆ ಒಬ್ಬಳು ಹೆಣ್ಣು ಮಗಳು, ‘ನಾನು ಒಬ್ಬರನ್ನು ಪ್ರೀತಿಸುತ್ತಿದ್ದೇನೆ. ಅವರು ಮುಸ್ಲಿಮರಾದರೂ ಒಳ್ಳೆಯವರು’ ಎಂದು ಆರಂಭಿಸಿ ತನ್ನ ಪ್ರೇಮ ತಾಪತ್ರಯಗಳನ್ನು ವಿವರಿಸಿದ್ದಳು. ನನಗೆ ‘ಜ್ಞಾನೋದಯ’ ಆದದ್ದು ಆಗ.

ನಾನಂದೇ ನಿರ್ಧರಿಸಿದ್ದೆ; ಇನ್ನು ಮುಂದೆ ಏನನ್ನು ಬರೆದರೂ, ಅದರಲ್ಲಿ ‘ಸರ್ವರಿಗೂ ಸಮಪಾಲು’ ಕೊಡಲೇಬೇಕು ಅಂತ.

ಮುತ್ತುಪ್ಪಾಡಿ

ಕಾನೂನು ಶಾಸ್ತ್ರದಂತೆ ಅಪರಾಧವು ಸಿದ್ಧವಾಗುವವರೆಗೂ ಆರೋಪಿಯೊಬ್ಬ ಅಪರಾಧಿ ಅನ್ನಿಸಿಕೊಳ್ಳುವುದಿಲ್ಲ. ಆದರೆ, ವಿಭಜನೋತ್ತರ ಹಿಂದೂಸ್ತಾನದಲ್ಲಿ ಆಕಸ್ಮಿಕವಾಗಿ ಹುಟ್ಟಿದ ಪ್ರತಿಯೊಬ್ಬ ಮುಸ್ಲಿಮನೂ, ತನ್ನ ನಿರಪರಾಧಿತನವು ಸಾಬೀತಾಗುವವರೆಗೂ ಅಪರಾಧಿಯೆಂಬ ‘ಐ.ಎಸ್.ಐ.’ ಮಾರ್ಕಿನ ಹಣೆಪಟ್ಟಿಯನ್ನು ಅಂಟಿಸಿಕೊಂಡೇ ಬದುಕಬೇಕಾಗುತ್ತದೆ.

ವಿಭಜನೆಗೂ ಒಂದು ವರ್ಷದ ಹಿಂದೆ, ‘ದೇಶವಿಭಜನೆ ಬೇಕೇ ಅಥವಾ ಬೇಡವೇ’ ಅಂತ ಮತದಾನವನ್ನು ನಡೆಸಲಾಗಿತ್ತಂತೆ. ಹಾಗೆಂದು ಹೇಳಲಾದ ಮತದಾನದಲ್ಲಿ ಶೇ. ೬೬ರಷ್ಟು ಮುಸ್ಲಿಮರು ‘ಬೇಕು’ ಅಂದಿದ್ದರಂತೆ. ಆದರೆ, ಆ ಕಾಲದಲ್ಲಿ ದಕ್ಷಿಣ ಹಿಂದೂಸ್ತಾನದಲ್ಲಿದ್ದ ನನ್ನ ಉಪ್ಪನಂತಹ ಬಹಳಷ್ಟು ಬಡ ಶ್ರಮಜೀವಿಗಳಿಗೆ, ‘ಬೇಕು ಬೇಡ’ದ ಅಂಥದ್ದೊಂದು ಮತದಾನ ನಡೆದಿರುವುದೂ ಗೊತ್ತಿದ್ದಿರಲಿಕ್ಕಿಲ್ಲ. ಆ ದಿನಗಳಲ್ಲಿ ಮೂವತ್ತು ದಾಟಿದ್ದ ನನ್ನ ಉಪ್ಪನಿಗೆ ಮತ್ತು ಅವರ ಅಪ್ಪನಂತವರಿಗೆ, ‘ವಿಭಜನೆ ಬೇಕಾ ಬೇಡವಾ’ ಎಂಬ ಭಜನೆಗಿಂತಲೂ, ಪ್ರತಿದಿನ ಸಂಜೆಗೆ ದಕ್ಕುವ ದಿನಗೂಲಿಯೇ ಪ್ರಮುಖ ಆಯ್ಕೆಯಾಗಿದ್ದಿರಬಹುದು.

ಮುಸ್ಲಿಮರು ಜನ್ಮತಃ ಕ್ರೂರಿಗಳು. ಪ್ರತಿಯೊಂದು ಮನೆಯಲ್ಲೂ ಮಾರಕಾಸ್ತ್ರಗಳನ್ನು ಇಟ್ಟುಕೊಂಡಿರುತ್ತಾರೆ. ರಾಷ್ಟ್ರೀಯ ಪ್ರವಾಹದಲ್ಲಿ ಅವರು ಒಂದಾಗುವುದಿಲ್ಲ. ಅವರೆಲ್ಲರೂ ಪಾಕಿಸ್ತಾನದ ಏಜೆಂಟರುಗಳು. ಹಾಕಿ ಆಟದಲ್ಲಿ ಪಾಕಿಸ್ತಾನದ ವಿರುದ್ಧ ಹಿಂದೂಸ್ತಾನ ಸೋತರೆ, ರೇಡಿಯೊಗಳಿಗೆ ಹೂಮಾಲೆ ಹಾಕಿ ಪಟಾಕಿ ಸಿಡಿಸುತ್ತಾರೆ, ನಾಲ್ಕು ಮದುವೆಯಾಗಿ ನಲುವತ್ತು ಮಕ್ಕಳನ್ನು ಹುಟ್ಟಿಸಿ ಜನಸಂಖ್ಯೆಯನ್ನು ಹೆಚ್ಚಿಸುತ್ತಿದ್ದಾರೆ. ಕುಟುಂಬ ಯೋಜನೆಗೆ ಅವರು ತಯಾರಿರುವುದಿಲ್ಲ ಎಂಬಿತ್ಯಾದಿ ಆರೋಪಗಳಿಂದ ಅವರನ್ನು ದೂಷಿಸಲಾಗುತ್ತದೆ. ಹಿಂದೂಸ್ತಾನದ ಪವಿತ್ರಗ್ರಂಥ ‘ಭಗವದ್ಗೀತೆ’ಯನ್ನು ಸಮರ್ಥಿಸಲೆಂದು, ‘ಐನ್‌ಸ್ಟೀನ್’ನಂತಹ ವಿದೇಶೀ ವಿಜ್ಞಾನಿಗಳ ಉದ್ಧರಣೆಗಳಿಗೆ ಮೊರೆ ಹೋಗುವವರ ನಡುವೆ, ಜುಬೇದಾ ಬುರ್ಖಾ ತೊಡುವುದು ಅಥವಾ ತೊಡದಿರುವುದು ಚಿಲ್ಲರೆ ತಮಾಷೆ ಅನ್ನಿಸುತ್ತಿತ್ತು. ‘ನೀನು ಜುಮ್ಮಾ ನಮಾಜಿಗೆ ಹೋಗುವುದೇ ಇಲ್ವಾ?’ ಎಂಬುದಾಗಿ ಕುತೂಹಲದಿಂದ ಪ್ರಶ್ನಿಸುತ್ತಾ ಕಣ್ಣರಳಿಸಿ ಅಭಿನಂದಿಸುವ ಸಹೋದ್ಯೋಗಿಗಳು, ತಮ್ಮ ತಮ್ಮ ಮನೆಗಳಲ್ಲಿ ನಡೆಸಲಾಗುತ್ತಿದ್ದ ‘ಸತ್ಯನಾರಾಯಣ ಪೂಜೆ’ಯ ಪ್ರಸಾದವನ್ನು ತಂದು ಕೊಟ್ಟಾಗ ಬೇಡವೆಂದರೆ ನನ್ನನ್ನು, ‘ದೇಶದ್ರೋಹಿ’ಯ ಪಟ್ಟಕ್ಕಿಳಿಸಬಹುದೆಂಬ ಅಳುಕಿನಿಂದ, ಅವರಿಗೆ ಕಾಣುವಂತೆಯೇ ನುಂಗಿಬಿಡುತ್ತಿದ್ದೆ. ನನ್ನ ಸಕ್ಕರೆ ಖಾಯಿಲೆಗೆ ಕಾರಣನಾದವನೇ ಆ ಸತ್ಯನಾರಾಯಣ.

ಸುಳ್ಳು ಸುಳ್ಳು ಕತೆ ಕಟ್ಟಿ ಹೇಳುವ ಕಲೆಯನ್ನು ಅದಾಗಲೇ ನಾನು ಅಲ್ಪ ಸ್ವಲ್ಪ ಕಲಿತಿದ್ದೆ. ಬರಹದಿಂದ ಬದುಕು ಬದಲಾಯಿಸಲು ಸಾಧ್ಯವಿದೆ ಎಂಬುದನ್ನು ನಮ್ಮೆಲ್ಲಾ ಧರ್ಮ ಗ್ರಂಥಗಳು ಕಲಿಸಿದ್ದವು. ನಾನು ಬರೆದುದರಲ್ಲಿ ದುರ್ಬೀನು ಹಾಕಿ ‘ಹರಾಂ’ ಹುಡುಕುತ್ತಿದ್ದ ಮುಸ್ಲಿಮ್ ಗೆಳೆಯರ ಸಂಖ್ಯೆ ಸಣ್ಣದೇನೂ ಆಗಿದ್ದಿರಲಿಲ್ಲ. ನನ್ನೆಲ್ಲಾ ಬರಹಗಳ ವಸ್ತುಗಳು ಅದೇ ಮುಸ್ಲಿಮ್ ಗೆಳೆಯರ ಮನೆಯ ಹೆಣ್ಣು ಮಕ್ಕಳು. ಆದರೆ, ಮುಸ್ಲಿಮ್ ಹೆಣ್ಣು ಮಕ್ಕಳ ಕನ್ನಡ ಓದು ಅಷ್ಟಕ್ಕಷ್ಟೆ. ಐದು, ಆರು ಪಾಸಾಗುವುದೇ ಬಲು ದೊಡ್ಡ ಸಾಧನೆ. ಏಳು ಪಾಸಾಗುವುದು ಮಹಾಸಾಧನೆ. ಹಾಗಾಗಿ, ನನ್ನ ಕತೆಗಳಲ್ಲಿ ಬಳಸುವ ಪದಗಳನ್ನು ಏಳು, ಏಂಟನೇ ತರಗತಿಗಳ ಪಠ್ಯ ಪುಸ್ತಕಗಳಲ್ಲಿ ಕಾಣಿಸುತ್ತಿದ್ದ ಪದಸಂಪತ್ತಿನ ಮಿತಿಯಲ್ಲೇ ಇರಿಸುವ ಅನಿವಾರ್ಯತೆ ಇತ್ತು. ಆರಂಭದ ದಿನಗಳಲ್ಲಿ ಅದು ಸ್ವಲ್ಪ ಕಷ್ಟವೇ ಆಯಿತು. ಕ್ರಮೇಣ ಅದುವೇ ಅಭ್ಯಾಸವಾಯಿತು. ಆದ್ದರಿಂದಲೇ ಇರಬೇಕು; ಆ ತರಗತಿಗಳ ಪಠ್ಯ ಪುಸ್ತಕಗಳಲ್ಲಿ ಅಂದಿನ ದಿನಗಳಲ್ಲಿ ಕಾಣಿಸದಿರುತ್ತಿದ್ದ, ‘ಅಸ್ಮಿತೆ’ ಎಂಬ ಪದವು, ಇಂದಿಗೂ ನನ್ನ ಕತೆ ಕಾದಂಬರಿಗಳಲ್ಲಿ ಕಾಣಿಸದಿರುವುದು.

ನನ್ನೆಲ್ಲಾ ಕತೆಗಳಲ್ಲೂ, ಅಗತ್ಯಕ್ಕಿಂತ ತುಸು ಹೆಚ್ಚಾಗಿಯೇ ಮುಸ್ಲಿಮ್ ಹೆಣ್ಣುಮಕ್ಕಳ ಪಕ್ಷಪಾತಿಯಾಗಿ, ಮುಸ್ಲಿಮ್ ಗಂಡಸರನ್ನು ಇರುವುದಕ್ಕಿಂತ ಸ್ವಲ್ಪ ಹೆಚ್ಚು ಕೆಟ್ಟವರನ್ನಾಗಿ ಕಾಣಿಸುತ್ತಿದ್ದೆ. ಹಾಗೆ ಕಾಣಿಸುತ್ತಿರುವಾಗಲೂ, ನನ್ನ ಪಕ್ಷಪಾತಿಯಾಗುತ್ತಿದ್ದ ಮುಸ್ಲಿಮ್ ವಿರೋಧಿ ಓದುಗರಿಗೆ, ‘ಪಂಕ್ಚರ್’ ಹಾಕುವುದಕ್ಕೆ ಹೊರತಾಗಿಯೂ ಮುಸ್ಲಿಮರಿಗೆ ಬೇರೆ ಕೆಲಸಗಳೂ ಇರುತ್ತವೆ ಎಂಬುದನ್ನೂ ಪರಿಚಯಿಸತೊಡಗಿದ್ದೆ. ಒಟ್ಟಿನಲ್ಲಿ, ಏಕ ಕಾಲದಲ್ಲಿ, ಎರಡು-ಮೂರು ದೋಣಿಗಳಲ್ಲಿ ಕಾಲಿರಿಸಿ, ಶತ್ರುಗಳ ಸಂಖ್ಯೆಯನ್ನು ಏರಿಸಿಕೊಳ್ಳುತ್ತಲೇ ‘ಹುಟ್ಟು’ ಹಾಕುವ ಅರ್ಧ ಶತಮಾನದ ಯೋಜನೆ ನನ್ನದಾಗಿತ್ತು. ಅದಕ್ಕಾಗಿ ಅಷ್ಟು ಕಾಲವಾದರೂ ಬದುಕುಳಿಯಬೇಕಾಗಿತ್ತು. ಹಾಗಾಗಿ, ಬೇರೆಯವರ ಉಸಾಬರಿಯೇ ಬೇಡವೆಂದು ನನ್ನದೇ ಆದ `ಮುತ್ತುಪ್ಪಾಡಿ’ ಎಂಬ ‘ಹೊಸ ನಾಡೊಂದನು’ ಕಟ್ಟಿಕೊಂಡಿದ್ದೆ.

‘ಮುತ್ತುಪ್ಪಾಡಿ’ಯ ತುಂಬ ಮನುಷ್ಯರನ್ನು ಹುಟ್ಟಿಸಿದ್ದೆ. ಅವರಿಗೆ ನಂಬಲೆಂದು ದೇವರುಗಳನ್ನು ಸೃಷ್ಟಿಸಿದ್ದೆ. ಪೂಜಿಸಲು ಮಂದಿರ, ಪ್ರಾರ್ಥಿಸಲು ಮಸೀದಿ, ಓದಲು ಶಾಲೆ, ಕವಾಯತಿಗೆ ಮೈದಾನ, ಈಜಲು ಹೊಳೆ, ಹಾರಲು ಕೆರೆ, ಮಲಗಲು ಆಸ್ಪತ್ರೆ, ಅಳಲು ಸ್ಮಶಾನ, ಹೂಳಲು ಕಬರಸ್ತಾನ, ಆಳಲು ಪೊಲೀಸ್…, ಏನೇನು ಬೇಕೋ ಅವೆಲ್ಲವನ್ನೂ ಒದಗಿಸಿದ್ದೆ. ಆನಂತರ ‘ಮುತ್ತುಪ್ಪಾಡಿ’ಯ ಮನುಷ್ಯರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ಕೊಟ್ಟು, ಅವರೆಲ್ಲರನ್ನೂ ಅವರಿಷ್ಟದಂತೆ ಬದುಕಲು ಬಿಟ್ಟು, ಅವರದೇ ಕತೆಗಳನ್ನು ಬರೆಯತೊಡಗಿದ್ದೆ.

ಕನ್ನಡದ ಎಲ್ಲ ಪತ್ರಿಕೆಗಳೂ ನನ್ನ ಬರಹಗಳನ್ನು ಬೆಂಬಲಿಸಿದ್ದವು. ಅಗತ್ಯ ಅನ್ನಿಸಿದಾಗಲೆಲ್ಲ ಚರ್ಚೆಗಳಿಗೆ ಪುಟಗಳನ್ನು ಮೀಸಲಿರಿಸಿ ಓದುಗರನ್ನು ಹುರಿದುಂಬಿಸಿದ್ದವು. ಮುಸ್ಲಿಮನೊಬ್ಬ ‘ರ‍್ಯಾಶನಲ್’ ಆಗುವುದೆಂದರೆ ‘ಮುಸಲ್ಮಾನ ಆಗದಿರುವುದು’ ಹಾಗೂ ‘ದೇಶಪ್ರೇಮ’ವೆಂದರೆ ಕೇವಲ ‘ಮುಸ್ಲಿಮರನ್ನು ಅನುಮಾನಿಸುತ್ತಿರುವುದು’ ಎಂಬುದನ್ನು ಪ್ರಾಮಾಣಿಕವಾಗಿಯೇ ನಂಬಿದ್ದ ಕನ್ನಡದ ಕೆಲ ಓದುಗರು ಕೂಡಾ ಈ ‘ಅಂತಿಮಸತ್ಯ’ದ ಹುಡುಕಾಟದಲ್ಲಿ ಉತ್ಸಾಹದಿಂದ ಪಾಲುಗೊಂಡಿದ್ದರು. ಎಲ್ಲವನ್ನೂ ಅರಿತೂ ಅರಿಯದವನಂತೆ ಸಂಕಟ ಅನುಭವಿಸುವುದಷ್ಟೇ ನನ್ನ ಕೆಲಸವಾಗಿತ್ತು.

ಎಲ್ಲದಕ್ಕೂ ಕಾಲ ಕೂಡಿಬರಬೇಕು ಅಂತ ನಮ್ಮ ಹಿರಿಯರು ಹೇಳುತ್ತಿದ್ದರಂತೆ. ಆ ಕಾಲವೂ ಕೂಡಿಕೊಂಡು ಬಂದಿತ್ತು. ಸರ್ವಶ್ರೀ/ಮತಿ ಬರಗೂರು, ಚಂಪಾ, ಸಿದ್ಧಯ್ಯ, ದ್ಯಾವನೂರು, ಡಿ.ಆರ್., ಬೆಸಗರಹಳ್ಳಿ, ಸಿದ್ಧಲಿಂಗಯ್ಯ, ದರ್ಗಾ, ಕಾಳೇಗೌಡ, ರಾಕೆ, ಗೋವಿಂದಯ್ಯ, ಶಂಕರಪ್ಪ, ಇಂದೂಧರ, ವಾಲೀಕಾರ, ಆರ್.ಜಿ. ಹಳ್ಳಿ, ಬೆಟ್ಟದೂರು, ಸಬರದ, ಮಾಲಗತ್ತಿ, ಜಿ.ಆರ್. ಶೂದ್ರ, ಷರೀಫಾ, ಹನುಮಂತಯ್ಯ, ಕುಂವೀ, ಬಿದರಕುಂದಿ, ರ‍್ಕೆ, ಹೊರೆಯಾಲ ಮೊದಲಾದ ಜೀವಪರ ಬರಹಗಾರರೊಂದಿಗೆ, `ಖಡ್ಗವಾಗಲಿ ಕಾವ್ಯ, ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ ಘೋಷಣೆಯೊಂದಿಗೆ, 1979ರಲ್ಲಿ ‘ಬಂಡಾಯ ಸಾಹಿತ್ಯ ಸಂಘಟನೆ’ಯನ್ನು ಕಟ್ಟಿಕೊಂಡಿದ್ದೆವು.

(ಕೃಪೆ : ಕೆಂಡಸಂಪಿಗೆ)

---

ಬೊಳುವಾರು ಮಹಮದ್ ಕುಂಞಿ ಸಂದರ್ಶನ: ಮೋನು ಸ್ಮೃತಿ ಕಾಲ್ಪನಿಕ ಬರಹವಲ್ಲ(ಕೃಪೆ: ಪ್ರಜಾವಾಣಿ)

--

 ಸರಹದ್ದುಗಳ ಅನ್ವಯಿಸುವ ‘ಮೋನುಸ್ಮೃತಿ’ ( ವಾರ್ತಾಭಾರತಿ)

--

Related Books