ಖ್ಯಾತ ರಷ್ಯನ್ ಲೇಖಕ-ಕತೆಗಾರ ಲಿಯೋ ಟಾಲ್‌ಸ್ಟಾಯ್ ಅವರ ಆತ್ಮಕತೆ. ತರ್ಕಕ್ಕೆ ನಿಲುಕದ ಆಚರಣೆಗಳನ್ನು ಕುರುಡಾಗಿ ಹಿಂಬಾಲಿಸಿದ ಅನುಭವವನ್ನು ಟಾಲ್‌ಸ್ಟಾಯ್ ವಿವರಿಸಿದ್ದಾರೆ. ಇಂಗ್ಲಿಷಿನ ಕನ್‌ಫೆಷನ್ ಎಂಬುದನ್ನು ಓ.ಎಲ್. ನಾಗಭೂಷಣಸ್ವಾಮಿ ಅವರು ’ಬಿನ್ನಪ’ ಎಂದು ಅನುವಾದಿಸಿದ್ದಾರೆ. ಟಾಲ್‌ಸ್ಟಾಯ್ ಬದುಕಿನ ಅಂತರಂಗದ ಕಥೆ ಇಲ್ಲಿದೆ.
ಓಎಲ್‌ಎನ್ ಅವರ ಅನುವಾದದ ಮಾದರಿ ಹೀಗಿದೆ-
ಬದುಕು ಸ್ಥಾವರವಾಗಿತ್ತು. ಉಸಿರಾಡುತ್ತಿದ್ದೆ, ಉಣ್ಣುತ್ತಿದ್ದೆ. ಕುಡಿಯುತ್ತಿದ್ದೆ, ಮಲಗುತ್ತಿದ್ದೆ. ಆದರೆ ಬದುಕು ಇರಲಿಲ್ಲ. ಇಂಥ ಆಸೆಯನ್ನು ಪೂರೈಸಿಕೊಂಡರೆ ಮಾತ್ರ ಬದುಕು ಸಾರ್ಥಕ ಅನ್ನುವಂಥ ಆಸೆಗಳು, ಬಯಕೆಗಳು ಇರಲಿಲ್ಲ. ದೇವತೆಯೊಬ್ಬಳು ಪ್ರತ್ಯಕ್ಷಳಾಗಿ ಏನು ನಿನ್ನ ಕೋರಿಕೆ, ಏನು ನಿನ್ನ ಬಯಕೆ ಎಂದು ಕೇಳಿದ್ದರೆ ಪ್ರತಿಯಾಗಿ ನಾನೇನು ಕೇಳಬೇಕೆಂದು ನನಗೆ ಗೊತ್ತಿರಲಿಲ್ಲ. ನಮ್ಮ ವರ್ಗದ ಜನರ ಬದುಕು-ವಿಶ್ವಾಸದ ನಡುವೆ ವಿರೋಧಗಳಿದ್ದವು, ಆದರೆ ದುಡಿವ ಜನರ ಇಡೀ ಬದುಕು ಅವರ ವಿಶ್ವಾಸ ಅವರಿಗೆ ನೀಡಿದ್ದ ಬದುಕಿನ ಅರ್ಥಕ್ಕೆ ಸಂಪೂರ್ಣವಾಗಿ ಹೊಂದಿಕೊಂಡಿತ್ತು. ಬದುಕನ್ನು ಅರ್ಥಮಾಡಿಕೊಳ್ಳುವುದಿದ್ದರೆ ಬದುಕಿನ ಬಂದಳಿಕೆಗಳಾಗಿರುವ ನಮ್ಮ ವರ್ಗದ ಜನರ ಬದುಕನ್ನಲ್ಲ ಸರಳವಾದ ದುಡಿಯುವ ಜನರ ಬದುಕನ್ನು ನೋಡಬೇಕು, ಬದುಕನ್ನು ಕಟ್ಟುವವರು ಅವರೇ. ಮಾತಿನಲ್ಲಿ ಹೇಳಬಹುದಾದರೆ ಅವರು ಕಟ್ಟಿಕೊಂಡ ಬದುಕಿನ ಅರ್ಥ ಹೀಗಿತ್ತು: ಪ್ರತಿಯೊಬ್ಬ ಮನುಷ್ಯನೂ ದೇವರ ಇಚ್ಚೆಯಂತೆ ಈ ಲೋಕಕ್ಕೆ ಬರುತ್ತಾನೆ. ತನ್ನ ಆತ್ಮವನ್ನು ಕಾಪಾಡಿಕೊಳ್ಳುವ ಅಥವಾ ಹಾಳು ಮಾಡಿಕೊಳ್ಳುವ ಅವಕಾಶ ಇರುವಂತೆ ಮನುಷ್ಯನನ್ನು ದೇವರು ನಿರ್ಮಿಸಿದ್ದಾನೆ. ತನ್ನ ಆತ್ಮವನ್ನು ಕಾಪಾಡಿಕೊಳ್ಳುವುದೇ ಮನುಷ್ಯನ ಬದುಕಿನ ಗುರಿ. ಆತ್ಮವನ್ನು ಕಾಪಾಡಿಕೊಳ್ಳುವುದಕ್ಕೆ ಮನುಷ್ಯ 'ದೇವರ ಥರ' ಬದುಕಬೇಕು, ದೇವರ ಥರ ಬದುಕುವುದಕ್ಕೆ ಎಲ್ಲ ಥರದ ಖುಷಿಗಳನ್ನು ಬಿಡಬೇಕು, ದುಡಿಯಬೇಕು, ವಿನಯ ಇರಬೇಕು, ವೇದನೆ ಪಡಬೇಕು, ಕರುಣೆ ಇರಬೇಕು.
©2024 Book Brahma Private Limited.