ತಮ್ಮ ವಿಶಿಷ್ಟ ಚಿಂತನ ಶೈಲಿ ಮತ್ತು ಬರಹದಿಂದ ಗಮನ ಸೆಳೆದವರು ಶಿವರಾಮ ಕಾಡನಕುಪ್ಪೆ. ಶಿಕಾಕು ಹೆಸರಿನಲ್ಲಿ ಅವರು ಬರೆಯುತ್ತಿದ್ದ ಚಿಂತನ ಬರಹಗಳು ಸುಧಾ ನಿಯತಕಾಲಿಕದ ಮೂಲಕ ಜನಪ್ರಿಯವಾಗಿದ್ದವು. ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು.
ಅದಕ್ಕೂ ಮುನ್ನ ಅವರು ಬರೆದಿದ್ದ ಆಸ್ಪತ್ರೆ ಅನುಭವಗಳ ಸಂಗ್ರಹ ’ಆಸ್ಪತ್ರೆಯಲ್ಲಿ ಕಳೆದ ಐವತ್ನಾಲ್ಕು ದಿನಗಳು’. ಒಂದು ನಿಟ್ಟಿನಲ್ಲಿ ನೋಡಿದರೆ ಅನುಭವ ಕಥನದಂತೆಯೂ ಮತ್ತೊಂದು ನಿಟ್ಟಿನಲ್ಲಿ ನೋಡಿದರೆ ಆತ್ಮಕತೆಯಂತೆಯೂ ಕಾಣುವುದೇ ಕೃತಿಯ ವೈಶಿಷ್ಟ್ಯ.
ಆಸ್ಪತ್ರೆಯ ಸೇವಾ ವ್ಯವಸ್ಥೆ, ವೈದ್ಯರ ಕರ್ತವ್ಯ ನಿಷ್ಠೆ, ಶುಶ್ರೂಶಕ, ಶುಶ್ರೂಶಕಿಯರ ಕಾರ್ಯತತ್ಪರತೆ, 'ಅಣ್ಣ ಅಕ್ಕಾ'ಗಳ ಸೇವಾಪರತೆಗಳ ವಿವರಣೆ ಕೃತಿಯ ಮುಖ್ಯಭಾಗ. ದೇಹ ಕ್ಷೀಣಿಸುತ್ತಿದ್ದರೂ ಜಾಗೃತ ಮನಸ್ಸು ಏನನ್ನೆಲ್ಲಾ ಗಮನಿಸಿದೆ ಎಂಬುದಕ್ಕೆ ಕೃತಿ ಸಾಕ್ಷಿಯಾಗಿದೆ. ಸಾವನ್ನು ಕೂಡ ತಣ್ಣಗೆ ನಿರುದ್ವಿಗ್ನವಾಗಿ ನೋಡುತ್ತಿದ್ದುದರಿಂದಲೋ ಏನೋ ಕಾಡನಕುಪ್ಪೆ ಅವರಿಗೆ ಕ್ಷಣಕ್ಷಣವನ್ನೂ ಜೀವಿಸುವ, ಹಾಗೆ ಜೀವಿಸಿದ್ದನ್ನು ಅಕ್ಷರಕ್ಕೆ ಇಳಿಸುವುದು ಸಾಧ್ಯವಾಗುತ್ತಿತ್ತು.
ಸಾಮಾನ್ಯ ಎನಿಸುವಂತಹ ಸಂಗತಿಗಳನ್ನೇ ಅಸಾಮಾನ್ಯ ಅನುಭವವಾಗಿಸುವ ’ಶಿಕಾಕು’ ಕೃತಿಯ ಮೂಲಕ ಉಸಿರಾಡುತ್ತಿದ್ದಾರೆ ಎನ್ನುವುದೇ ಓದುಗರ ಪಾಲಿಗೆ ಒಂದು ರೀತಿಯ ನೆಮ್ಮದಿ.
©2024 Book Brahma Private Limited.