ಬೇರು - ಬೆಂಕಿ - ಬಿಳಲು

Author : ಕಮಲಾ ಹಂಪನಾ

Pages 602

₹ 595.00




Year of Publication: 2019
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯ ರಸ್ತೆ. ಗಾಂಧಿನಗರ, ಬೆಂಗಳೂರು, 560009
Phone: 0804011 4455

Synopsys

ಕಮಲಾ ಹಂಪನಾ ಅವರು ಪ್ರಾಕೃತ, ಜೈನಶಾಸ್ತ್ರದಲ್ಲಿ ಪರಿಣಿತರು. ಸರ್ಕಾರಿ ಸೇವೆಯಿಂದ ನಿವೃತ್ತರಾದ ಮೇಲೆ ಮೈಸೂರು ವಿಶ್ವವಿದ್ಯಾಲಯದ ಜೈನಶಾಸ್ತ್ರ, ಪ್ರಾಕೃತ ಅಧ್ಯಯನದ ಪ್ರಾಧ್ಯಾಪಕರೂ, ಅಧ್ಯಕ್ಷರೂ, ಹಂಪಿ ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕರೂ ಆಗಿದ್ದರು. ಅವರ ಬಾಲ್ಯ, ಶಿಕ್ಷಣ, ಕೌಟುಂಬಿಕ ಹಿನ್ನೆಲೆ, ಬೋಧನೆ ಅನುಭವ, ಜೀವನಯಾನ, ಅವರ ಸಾಧನೆಯ ಹಿಂದಿರುವ ವ್ಯಕ್ತಿಗಳು ಮತ್ತು ವೈವಾಹಿಕ ಜೀವನದ ಕುರಿತು ‘ಬೇರು - ಬೆಂಕಿ - ಬಿಳಲು’ ಕೃತಿಯಲ್ಲಿ ತೆರೆದಿಟ್ಟಿದ್ದಾರೆ.

About the Author

ಕಮಲಾ ಹಂಪನಾ
(28 October 1935 - 22 June 2024)

ಲೇಖಕಿಯಾಗಿ ಚಿರಪರಿಚಿತರಾಗಿರುವ ಕಮಲಾ ಹಂಪನಾ ಅವರು ಪ್ರಾಕೃತ, ಜೈನಶಾಸ್ತ್ರದಲ್ಲಿ ಪರಿಣಿತರು. ಬೆಂಗಳೂರು ಜಿಲ್ಲೆ ದೇವನಹಳ್ಳಿಯಲ್ಲಿ 1935ರ ಅಕ್ಟೋಬರ್ 28 ರಂದು ಜನಿಸಿದರು. ತಂದೆ ಸಿ. ರಂಗಧಾಮನಾಯಕ್- ತಾಯಿ ಲಕ್ಷಮ್ಮ. ಚಳ್ಳಕೆರೆಯಲ್ಲಿ ಪ್ರಾರಂಭವಾದ ಪ್ರಾಥಮಿಕ ವಿದ್ಯಾಭ್ಯಾಸ ಬೇರೆ ಬೇರೆ ಊರುಗಳಲ್ಲಿ ಮುಂದುವರಿಯಿತು. ತುಮಕೂರಿನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸವಾಗಿ, ಕಾಲೇಜು ವಿದ್ಯಾಭ್ಯಾಸ ಮೈಸೂರಿನಲ್ಲಿ ಮುಂದುವರೆದು ಬಿ.ಎ. ಆನರ್ಸ್ (1958) ಮಾಡಿದರು. ಕನ್ನಡ ಅಧ್ಯಾಪಕಿಯಾಗಿ (1959) ಶಿಕ್ಷಣ ವೃತ್ತಿಗೆ ಪ್ರವೇಶಿಸಿ, ಬೆಂಗಳೂರು ಮತ್ತು ಮೈಸೂರು ಮಹಾರಾಣಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಬೆಂಗಳೂರಿನ ವಿಜಯನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದರು. ಸರ್ಕಾರಿ ...

READ MORE

Reviews

ಕಿರಿಯರಿಗೆ ಸ್ಫೂರ್ತಿ ನೀಡುವ ಬಾಳ ಕಥನ

ಬೇರು-ಬೆಂಕಿ-ಬಿಳಲು ಎಂಬುವು ಹಿರಿಯ ಲೇಖಕಿ ಕಮಲಾ ಹಂಪನಾ ಅವರ ಜೀವನ ಕಥನದ ಮೂರು ಮಜಲುಗಳನ್ನು ಸೂಚಿಸುವ ಅಧ್ಯಾಯಗಳು. ಇವನ್ನು ಪುನಃ ಯಾನ ಎಂದು ಇಪ್ಪತ್ತು ಯಾನಗಳಾಗಿ ವಿಂಗಡಿಸಿ ನಿರೂಪಿಸಿದ್ದಾರೆ. ಮೊದಲ ಅಧ್ಯಾಯ 'ಬೇರು'ವಿನಲ್ಲಿ ಕಮಲಾ ಅವರ ಬಾಲ್ಯ ಮತ್ತು ವಿದ್ಯಾರ್ಥಿ ಜೀವನದ ನಿರೂಪಣೆ ತುಂಬಾ ಆಪ್ತವಾಗಿ ಮೂಡಿಬಂದಿದೆ. 'ಬೆಂಕಿ'ಯಲ್ಲಿ ವಿದ್ಯಾಭ್ಯಾಸ ಮುಗಿದು ಅಧ್ಯಾಪಕಿಯಾಗಿ, ವೈವಾಹಿಕ ಜೀವನಕ್ಕೆ ಕಾಲಿಟ್ಟು ಮುಂದೆ ಸಾಗಿದ ತಮ್ಮ ಅನುಭವಗಳನ್ನು - ಬಿಂಬಿಸಿದ್ದಾರೆ. 'ಬಿಳಲು'ವಿನಲ್ಲಿ ಅವರ ಸಾಹಿತ್ಯ ಸಾಧನೆ, ಆ ಸಾಧನೆಯ ಹಿಂದಿರುವ ವ್ಯಕ್ತಿಗಳು ಹಾಗೂ ಅವರ ಮಕ್ಕಳ ಬಗ್ಗೆ ಬರೆದಿದ್ದಾರೆ.

ತಾವು ಬೈಬಲ್, ಕುರಾನ್, ವೈದಿಕ ಗ್ರಂಥಗಳು, ಗರುಡಪುರಾಣ, ಜೈನಧರ್ಮ, ಬೌದ್ಧಧರ್ಮದ ಗ್ರಂಥಗಳನ್ನು ಗಂಭೀರವಾಗಿಯೇ ಓದಿದ್ದರೂ 'ಆತ್ಮ'ದ ಬಗ್ಗೆ ಖಚಿತವಾದ ನಿಲುವನ್ನು ತಳೆಯಲು, ಖಂಡಿತವಾದ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲವಾದ್ದರಿಂದ ತಮ್ಮ ಕಥೆಯನ್ನು 'ಆತ್ಮಚರಿತೆ' ಎಂದು ಕರೆಯದೆ ‘ಜೀವನಯಾನ' ಎಂದು ಕರೆದಿರುವುದಾಗಿ ಹೇಳುತ್ತಾರೆ.

ನಿಜವಾಗಿಯೂ ಕಮಲಾ ಹಂಪನಾ ಅವರ ಬೇರು ಬಹಳ ಗಟ್ಟಿಯಾದದ್ದೇ. ತಾವು ಮಹರ್ಷಿ ವಾಲ್ಮೀಕಿ ಜಾತಿಗೆ ಸೇರಿದ ಬೇಡ ಜನಾಂಗದವರು ಎಂದು ಹೇಳಿಕೊಂಡಿದ್ದಾರೆ. ಅವರ ತಾಯಿಯ ಕಡೆಯ ಮುತ್ತಾತ ಕೆಂಪಲ್ಲಯ್ಯನವರು ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿದ್ದರು. ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದ್ದರು, ಕಮಲಾರವರ ತಾಯಿಯೂ ಕನ್ನಡ ಮತ್ತು ಇಂಗ್ಲಿಷ್ ಬಲ್ಲವರಾಗಿದ್ದರು. ಸಂಗೀತವನ್ನು ಕಲಿತಿದ್ದರು. ಇನ್ನೊಂದು ವಿಶೇಷ ಸಂಗತಿಯೆಂದರೆ ಕಮಲಾ ಹಂಪನಾ ಅವರ ಅಜ್ಜ ಚಂದ್ರಯ್ಯನವರು ಜೈನರಾಗಿದ್ದರೂ, ಅವರು ಬೇಡರ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿ ತಮ್ಮ ಜಾತಿಯವರಿಂದ ಬಹಿಷ್ಕಾರಕ್ಕೂ ಒಳಗಾಗಿದ್ದರು. ಚಂದ್ರಯ್ಯನವರ ಮಗ ರಂಗಧಾಮನಾಯ್ಕರ ಮಗಳು ಸಿ.ಆರ್.ಕಮಲಮ್ಮ ಅವರು ಜೈನರಾದ ಹಂ.ಪ.ನಾಗರಾಜಯ್ಯ ಅವರೊಂದಿಗೆ ಮದುವೆ ಆದರು.

ಕಮಲಾ ಅವರ ವ್ಯಕ್ತಿತ್ವ ರೂಪುಗೊಳ್ಳಲು ಕಾರಣರಾದ, ಬಾಲ್ಯದಲ್ಲಿ ಅವರು ಒಡನಾಡಿದ ಮತ್ತು ಅವರ ಮನೆಯ ಮೂರು ತಲೆಮಾರನ್ನು ಕಾಯ್ದ ಜೋಗಿ ನಾಗಣ್ಣ ಅವರ ಕಥೆ ತುಂಬಾ ಕುತೂಹಲಕಾರಿಯಾಗಿ ಮೂಡಿ ಬಂದಿದೆ. ಇಂಟರ್ಮೀಡಿಯೆಟ್ ನಿಂದ ಪ್ರಾರ೦ಬಿ ಸಿ ಎಂ.ಎ.ವರೆಗೂ ಹಂ.ಪ.ನಾಗರಾಜಯ್ಯ ಅವರು ಕಮಲಾರವರ ಸಹಪಾಠಿಯಾಗಿದ್ದರು. ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಬಿ.ಎ. ಆನರ್ಸ್ ಮಾಡಲು ಸೇರಿಕೊಂಡಾಗ ಅಲ್ಲಿ ಕುವೆಂಪು ಅವರೇ ಪ್ರಿನ್ಸಿಪಾಲರು. ಇದರಿಂದಾಗಿ ಕುವೆಂಪು ಅವರ ಶಿಷ್ಠೆಯಾಗಬೇಕೆಂಬ ಅವರ ಆಸೆ ನೆರವೇರಿತು. ಬಿ.ಎ. ಮತ್ತು ಎಂ.ಎ. ಓದುವಾಗ ದೇ.ಜವರೇಗೌಡರು, - ಎಸ್.ವಿ.ಪರಮೇಶ್ವರ ಭಟ್ಟರು ಡಿ.ಎಲ್.ನರಸಿಂಹಾಚಾರ್, ತೀನಂಶ್ರೀ ಮುಂತಾದ ಕನ್ನಡ ವಾಜಯಲೋಕದ ದಿಗ್ಗಜರೇ ಅವರಿಗೆ ಅಧ್ಯಾಪಕರಾಗಿದ್ದರು. ಇದು ಮುಂದೆ ಅಧ್ಯಯನ, ಸಂಶೋಧನೆ, ಸಂಪಾದನೆ, ಬರವಣಿಗೆ, ಕನ್ನಡಪರ ಹೋರಾಟಗಳಲ್ಲಿ ತೊಡಗಿಕೊಳ್ಳಲು ಹೇಗೆ ಸಹಾಯವಾಯಿತು ಎಂಬ ಬಗ್ಗೆ ವಿವರವಾಗಿಯೇ ನಿರೂಪಿಸಿದ್ದಾರೆ. ಈ ಪುಸ್ತಕ ಕಮಲಾ ಹಂಪನಾ ಅವರು ಅಕೆಡೆಮಿಕ್ ಆಗಿ ಮಾಡಿದ ಸಾಧನೆಗಳ ಒಂದು ದಾಖಲೆ ಕೂಡ ಎನ್ನಬಹುದು. ಸಾಹಿತ್ಯ ರಚನೆಯಲ್ಲಿ ತಮ್ಮ ಆದ್ಯತೆ ಏನೆಂಬುದನ್ನು ಹೀಗೆ ಹೇಳುತ್ತಾರೆ; `...ನನಗೆ ಸಂಶೋಧನೆ ಸಂಪಾದನೆ ಮುಖ್ಯ ಊಟ. ಮಿಕ್ಕ ಸಾಹಿತ್ಯ ರಚನೆ ಊಟದ ಜೊತೆಗಿನ ವ್ಯಂಜನಗಳು', ಅವರ ಪ್ರಾರಂಭದ ರಚನೆ ಹಳಗನ್ನಡ ಸಂಶೋಧನೆ ಮತ್ತು ಸಂಪಾದನೆಯ ಶಾಂತಿನಾಥ ಕವಿಯ ಸುಕುಮಾರ ಚರಿತೆಯ ಸಂಗ್ರಹ. - 83 ವರ್ಷಗಳ ಕಮಲಾ ಹಂಪನಾ ಸುಮಾರು 60 ವರ್ಷಗಳ ಕಾಲ ಸತತ ಅಧ್ಯಯನ, ಸಂಶೋಧನೆಯಲ್ಲಿ ಗಳಿಸಿದ ಯಶಸ್ಸು, ಅವರ ಜೀವನಾನುಭವ ಈ ಹೊತ್ತಗೆಯಲ್ಲಿ ಸಾಕಾರಗೊಂಡಿದ್ದು, ಕಿರಿಯರಿಗೆ ಸ್ಫೂರ್ತಿ ನೀಡಿ ಒಳ್ಳೆಯ ಮಾರ್ಗ ತೋರಬಲ್ಲದು.

-ಕೆ. ಪದ್ಮಾಕ್ಷಿ 

ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ದಿನಪತ್ರಿಕೆ (ಅಕ್ಟೋಬರ್‌ 2019)

................................................................................................................................................................

ಇರುವುದೊಂದೇ ಜೀವ ಇರುವುದೊಂದೇ ಬದುಕು-ಜಕಾ-ಉದಯವಾಣಿ

Related Books