ನಿವೃತ್ತ ಕುಲಪತಿ ಡಾ. ತೇಜಸ್ವಿ ಕಟ್ಟೀಮನಿ ಅವರು ಬರೆದ ಆತ್ಮಕಥನ-ಜಂಗ್ಲಿ ಕುಲಪತಿಯ ಜಂಗೀಕಥೆ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಹಿಂದಿ ಪ್ರಾಧ್ಯಾಪಕರಾಗಿದ್ದ ಲೇಖಕರು ಪ್ರಗತಿಪರ ಚಳವಳಿಗಳಲ್ಲಿ ಗುರುತಿಸಿಕೊಂಡಿದ್ದರು. ಅಂದಿನ ರಾಯಚೂರು ಜಿಲ್ಲೆಯ ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದವರು. ಅಂತಹ ಕುಗ್ರಾಮದಿಂದ ಮತ್ತು ಅತ್ಯಂತ ಕೆಳವರ್ಗದಿಂದ ಬಂದ ಅವರು ಹಂತಹಂತವಾಗಿ ತಮ್ಮ ಸ್ವಸಾಮರ್ಥ್ಯವನ್ನೇ ನಂಬಿಕೊಂಡುಕೊಂಡು, ಶೈಕ್ಷಣಿಕವಾಗಿ-ಸಾಹಿತ್ಯಕವಾಗಿ ಸಾಧನೆ ಮಾಡುತ್ತಾ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿಯ ಸದಸ್ಯತ್ವದಂತಹ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಾ, ಆಂಧ್ರಪ್ರದೇಶ ಕೇಂದ್ರೀಯ ವಿಶ್ವವಿದ್ಯಾಲಯದ ಉಪ ಕುಲಪತಿ ಯಂತಹ ಅತ್ಯುನ್ನತ ಹುದ್ದೆಯನ್ನು ನಿರ್ವಹಿಸುವವರೆಗೂ ತಮ್ಮ ಸಾಧನೆಗಳಲ್ಲಿ ನಯ-ವಿನಯ ಕಾಪಿಟ್ಟುಕೊಂಡು ಬಂದವರು. ತಮ್ಮ ಬದುಕಿನ ಮರೆಯದ ಕ್ಷಣಗಳನ್ನು ಅವರು ದಾಖಲಿಸಿದ್ದೇ ಈ ಕೃತಿ.
‘ಜಂಗ್ಲಿ ಕುಲಪತಿಯ ಜಂಗೀಕಥೆ’ ಕೃತಿಯ ವಿಮರ್ಶೆ
ತೇಜಸ್ವಿ ಕಟ್ಟಿಮನಿ ಅವರು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕಲಿಸಿದವರು. ಬಹುಶಃ ಸಾಕಷ್ಟು ಯಶಸ್ವಿ ಜನರ ಮೊದಲ ಗಟ್ಟಿಹೆಜ್ಜೆ ಇಲ್ಲಿಂದಲೇ ಆರಂಭವಾಗುವುದೇನೋ. ಅವರೇ ಹೇಳಿದಂತೆ ಅಳವಂಡಿ-ಗದಗ-ಧಾರವಾಡ-ಹೈದರಾಬಾದನಿಂದ ಸಾಗಿ ಮಧ್ಯಪ್ರದೇಶದ ಅಮರಕಂಟಕದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಎರಡನೆಯ ಕುಲಪತಿಯವರೆಗಿನ ಅವರ ಯಾತ್ರೆ ರೋಚಕ. ಅಷ್ಟೇ ಸಂಘರ್ಷಕಾರಿ, ದಿನದಿನಕ್ಕೂ ಸಮಸ್ಯೆಗಳು, ಮೆಟ್ಟಿ ನಿಲ್ಲಲೇಬೇಕಾದ ಅನಿವಾರ್ಯತೆ, ಮೂಕರ್ಜಿ ಕಾಟ, ಕೇಸುಗಳು.. ಏಕಿದಲ್ಲ. ಏನಿದೆಲ್ಲ.. ಅವರು ಅಕೆಡೆಮಿಕ್ ಬೇಶಿಸ್ತಿನ ವಿರುದ್ಧ ಶಿವಧನುಷ್ಯ ಎತ್ತಿದರು. ಕನ್ನಡನಾಡಿನ ಸಾತ್ವಿಕ ಮನುಷ್ಯ ಅಲ್ಲಿ ಹಸಿರಿನ ಹಾದಿ ನಿರ್ಮಿಸಿದರು. ಕಾಡುವ ಜನರಿಗೆ ಸಫಲ ಯುನಿವರ್ಸಿಟಿ ಕಟ್ಟಿ ತೋರಿಸಿದರು. ಮಸ್ತಕದ ಪುಟಗಳಲ್ಲಿ ಅವರು ಪಟ್ಟ ಪಾಡು ಹಾಡಾಗಿ, ಬಾಳಗಾಥೆ ಸಿಗ್ನವಾಗಿ ನಿರೂಪಗೊಂಡಿದೆ.
ಬುಡಕಟ್ಟು ಜನಾಂಗದವರಿಗೆ ಅವರದ್ದೇ ಆದ ಒಂದು ಸಂಸ್ಕೃತಿ ಇದೆ. ಅವರದ್ದೇ ಆದ ಕಲೆ, ಸಂಗೀತ, ನೃತ್ಯವಿದೆ. ಕಟ್ಟೀಮನಿಯವರು ಇವುಗಳಿಗೆಲ್ಲ ನೀರೆರೆದು ಪೋಷಿಸಿ ಅಲ್ಲಿಯ ಬುಡಕಟ್ಟು ಕಲಾವಿದರ ಕಲೆ ಜಂಗೀಕಥೆ ಭಾರತಾದ್ಯಂತ, ವಿಶ್ವಾದ್ಯಂತ ಪಸರಿಸುವಂತೆ ನೋಡಿಕೊಂಡರು. ಈ ಅನಕ್ಷರಸ್ತ ಕಲಾವಿದರ ಪೇಂಟಿಂಗ್‌ಗಳು ವಿಶ್ವದ ಅನೇಕ ಕಡೆ ಮುಟ್ಟಲು ಶ್ರಮಪಟ್ಟರು. ದೀಪಾವಳಿ ಹೋಳಿ ಹಬ್ಬಗಳನ್ನು ಈ ಬುಡಕಟ್ಟು ಜನರ ಜೊತೆಗೇ ಆಚರಿಸಿದರು. ಇವರೂ ನಮ್ಮಂತೆಯೇ ನಮ್ಮ ನಡುವಿನವನೇ ಎಂಬ ಭಾವನೆ ಬರಿಸಲು ಕಾರಣರಾದರು.
ಡಾ.ತೇಜಸ್ವಿ ಕಟ್ಟಿಮನಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದವರೊಡಗೂಡಿ ಅಮರಕಂಟಕ ವಿಶ್ವವಿದ್ಯಾಲಯದಲ್ಲಿ ಹೊರನಾಡ ಕನ್ನಡಿಗರ ಸಮಾವೇಶವನ್ನು ಆಯೋಜಿಸಿದ್ದುದನ್ನು ಮರೆಯಲಾಗದು. ಐದು ದಿನದ ಅಮರಕಂಟಕ ವಿಶ್ವವಿದ್ಯಾಲಯದಲ್ಲಿ ನಡೆದ ಹೊರನಾಡ ಕನ್ನಡಿಗರ ಈ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ 450 ಜನರು ಅಕ್ಷರಶಃ ಕರ್ನಾಟಕವನ್ನಾಗಿ ಪರಿವರ್ತಿಸಿದ್ದರು. ಇದರಿಂದ ಪ್ರೇರಿತಗೊಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಣಿಪುರದ ಇಂಫಾಲದಲ್ಲಿ ಹೊರನಾಡು ಉತ್ಸವ ಆಯೋಜಿಸಿತ್ತು. ಈ ಉತ್ಸವದ ಸಕಲ ಯಜಮಾನ್ಯವನ್ನು ಪ್ರೊ. ಕಟೀಮನಿಯವರಿಗೆ ನೀಡಲಾಗಿತ್ತು. ಇವರ ನಿರಂತರ ಶ್ರಮದ ಫಲವಾಗಿ ದೇಶಗಳ ವಿಶ್ವವಿದ್ಯಾಲಯಗಳ ಜೊತೆಗೆ ಶೈಕ್ಷಣಿಕ ವಿದ್ಯಾರ್ಥಿಗಳು ಅಮರಕಂಟಕಕ್ಕೆ ಬಂದು ಅಭ್ಯಸಿಸಿದರೆ ಇಲ್ಲಿಯ ವಿದ್ಯಾರ್ಥಿಗಳು ಆ ದೇಶಗಳಿಗೆ ಹೋಗಿ ಅಲ್ಲಿಯ ಬುಡಕಟ್ಟು ಸಂಸ್ಕೃತಿಯನ್ನು ಅಭ್ಯಸಿಸುತ್ತಿದ್ದಾರೆ. ಸಮೀಪದ ಶಹರಿನ ಮುಖವನ್ನು ನೋಡಿರದಿದ್ದ ಈ ಬುಡಕಟ್ಟು ವಿದ್ಯಾರ್ಥಿಗಳು ಇಂದು ವಿದೇಶದಲ್ಲಿ ಅಭ್ಯಸಿಸುತ್ತಿರುವುದು ಡಾ. ಕಟೀಮನಿಯವರು ಕಂಡ ಕನಸು ನನಸಾಗಿದೆ. ಅವರು ಎದುರಿಸಿದ ಎಡರು-ತೊಡರು ಓದಿದರೆ ದಿಕ್ಕು ತಪ್ಪುತ್ತದೆ. ಅವರು ಎದುರಿಸಿದರು. ಗೆದ್ದರು. ಗಟ್ಟಿತನದ ಸಂಕೇತವಾಗಿ ತೋರಿದರು. ಇದನ್ನು ಸಂಕಥನವೆಂದೇ ತಿಳಿಯಬಹುದು. ಇಲ್ಲಿಯ ಪ್ರಾಮಾಣಿಕ ನಿರೂಪಣೆ ತಟ್ಟುತ್ತದೆ. ಸಮಸ್ಯೆಗಳನ್ನು ತಟಸ್ಥವಾಗಿ ಎದುರಿಸಿ ನಿಭಾಯಿಸಿದವರು ಪ್ರೊ. ಕಟ್ಟಿಮನಿ, ಇದೆಲ್ಲದರ ಹೊರತಾಗಿಯೂ ಇಲ್ಲಿ ಪ್ರಸ್ತಾಪಿಸಲ್ಪಟ್ಟ ದಲಿತ ಸಂವೇದನೆ ನಮ್ಮನ್ನು ವಿಚಲಿತಗೊಳಿಸುತ್ತದೆ. ನಾವು ಕನ್ನಡಿಗರು ಇಂದಿಗೂ ಸಹ ಪರಸ್ಪರ ಗೌರವಯುತವಾಗಿಯೂ ಬಾಳುತ್ತಿದ್ದೇವೆ. ಅವರ ನೋವು ನಮ್ಮದಾಗುತ್ತದೆ. ಅವರ ಕುದಿ ನಮ್ಮ ನಿಟ್ಟುಸಿರು ಸಹಜ. ಇಂದು ನಾವೆಲ್ಲರೂ ಹೊಸ ಬದಲಾವಣೆಗೆ ತೆರೆಯುತ್ತಿದ್ದೇವೆ. ಇದರೊಂದಿಗೆ ಕೇಂದ್ರೀಯ ವಿವಿ, ತಂತು ಇಂದಿನ ಜರೂರತ್ತಾಗಿದೆ. ಅದು ನಿಯೋ ಕನೆಕ್ಟಿವಿಟಿಯೂ ಹೌದು. ಈ ಹಿನ್ನೆಲೆಯಲ್ಲಿ ಇಂತಹ ರಚನಾತ್ಮಕ ಪುಸ್ತಕ ಹೊಸ ಮುಂಜಾವಿಗೆ ತೆರೆಯುತ್ತಿದೆ. ನಮ್ಮ ಪೀಳಿಗೆ, ಯುವಜನತೆಗೆ ಇಂತಹ ಪುಸ್ತಕವನ್ನು ತಲುಪಿಸಬೇಕಿದೆ. ಆಕರ್ಷಕ ವಿನ್ಯಾಸದ ಮಾಹಿತಿಪೂರ್ಣ ಕೃತಿ ಮನೆ ಮನ ತಲುಪಬೇಕಿದೆ.
(ಕೃಪೆ ; ಸಂಯುಕ್ತ ಕರ್ನಾಟಕ, ಬರಹ ; ಸುನೀಲ ಪಾಟೀಲ)
---
ಡಾ. ತೇಜಸ್ಡಾವಿ ಕಟ್ಟೀಮನಿ ಅವರ ಜಂಗ್ಲಿ ಕುಲಪತಿಯ ಜಂಗೀಕಥೆ
ತೇಜಸ್ವಿ ಕಟ್ಟಿಮನಿಯವರು ಕೊಪ್ಪಳದ ಅಳವಂಡಿಯ ಅನಕ್ಷರಸ್ಥ ಬಡಕುಂಟಂಬದವರು. ಹಿಂದಿ ಸಾಹಿತ್ಯದಲ್ಲಿ ಎಂ.ಎ.. ಪಿಎಚ್.ಡಿ. ಮಾಡಿದವರು. ಕವಿ, ಲೇಖಕ ಮತ್ತು ಅನುವಾದಕರು. ಈ ಕೃತಿಯಲ್ಲಿ ತಮ್ಮ ಹಿನ್ನೆಲೆ-ಮುನ್ನೆಲೆಗಳ ಬವಣೆ ಸಾಧನೆಗಳನ್ನು ನಿರೂಪಿಸಿದ್ದಾರೆ. ಅಳವಂಡಿಯಿಂದ ಅಮರಕಂಟಕದವರೆಗಿನ ನಡಿಗೆಯಲ್ಲಿ ಎದುರಾದ ಕಂಟಕಗಳನ್ನು ಕಾನೂನುಗಳ ನೈತಿಕ ಚೌಕಟ್ಟಿನಲ್ಲಿ ಎದುರಿಸಿ, ಸಾಧಿಸಿದ ಸಾಧನೆ ಹುಬ್ಬೇರಿಸುವಂತೆ ಮಾಡುತ್ತದೆ.
ಇವರು 2014ರ ಜನವರಿಯಲ್ಲಿ ಮಧ್ಯಪ್ರದೇಶದ ಅಮರಕಂಟಕ ಬುಡಕಟ್ಟು ವಿಶ್ವವಿದ್ಯಾಲಯಕ್ಕೆ ಎರಡನೆಯ ಕುಲಪತಿಯವರಾಗಿ ನೇಮಕವಾದರು. ಅದುವರೆಗೆ ಎಲ್ಲಾ ರೀತಿಯಲ್ಲೂ ಜಡಗೊಂಡಿದ್ದ ವಿಶ್ವವಿದ್ಯಾಲಯವನ್ನು ನಿರಂತರ ಅಧ್ಯಯನ, ಅಸಾಮಾನ್ಯ ಕನಸು, ಎದೆಗುಂದದ ಛಲಗಾರಿಕೆ, ಪ್ರಾಮಾಣಿಕ ಬದ್ಧತೆ, ಪ್ರಜಾತಾಂತ್ರಿಕ ಆಡಳಿತದ ಮೂಲಕ ವಿಶಿಷ್ಟ ವಿಶ್ವವಿದ್ಯಾಲಯವನ್ನಾಗಿ ರೂಪಿಸಿದರು. ಇದಕ್ಕೆ ವಿಶ್ವವಿದ್ಯಾಲಯದ ಆವರಣದಲ್ಲಿ ಕಸ ಗುಡಿಸುವುದರಿಂದ ಮೊದಲುಗೊಂಡು, ಕೋರ್ಟಿನವರೆಗೆ ಸೆಣಸಬೇಕಾಯಿತು.
ವಿಶ್ವವಿದ್ಯಾಲಯವನ್ನು ಭೌತಿಕ, ಆಡಳಿತಾತ್ಮಕ, ಶೈಕ್ಷಣಿಕ, ಸಂಶೋಧನಾತ್ಮಕವಾಗಿ ಕಟ್ಟಿಬೆಳೆಸಿದ್ದು, ಮಧ್ಯಪ್ರದೇಶದ ಕೆಲವು ವರ್ಗದವರಿಗೆ ಸೀಮಿತವಾಗಿದ್ದ ವಿಶ್ವವಿದ್ಯಾಲಯಕ್ಕೆ ದೇಶದ 23 ರಾಜ್ಯಗಳಿಂದ ಶೈಕ್ಷಣಿಕ ಸಿಬ್ಬಂದಿಗಳನ್ನು ನೇಮಕ ಮಾಡಿದ್ದು, ಮುಗ್ಧ ಮತ್ತು ಅನಕ್ಷರಸ್ಥ ಬುಡಕಟ್ಟು ಜನರಿಗೆ ಉನ್ನತ ಶಿಕ್ಷಣ ನೀಡಿ, ಅವರಿಗೆ ಸ್ವಾಭಿಮಾನ ಹಾಗೂ ಧೈರ್ಯತುಂಬಿ ಮುಖ್ಯವಾಹಿನಿಗೆ ಬರುವಂತೆ ಮಾಡಿದ್ದು, ಬಡ ಆದಿವಾಸಿಗಳನ್ನು ಕಾಡುತ್ತಿರುವ, ಇಡೀ ಜನತ್ತಿನ ಗಮನ ಸೆಳೆದಿರುವ ಸಿಕಲ್ ಸೆಲ್ ಎನಿಮಿಯಾ ರೋಗದ ಬಗೆಗೆ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಶುರುಮಾಡಿಸಿದ್ದು, ರಾಷ್ಟ್ರಪತಿಯವರ ಶೈಕ್ಷಣಿಕ ನಿಯೋಗದಲ್ಲಿ ಸದಸ್ಯರಾಗಿ ನಾರ್ವೆ, ಫಿನ್‌ಲ್ಯಾಂಡ್, ಸ್ವೀಡನ್, ಬೆಲಾರೂಸ್, ಕೊರಿಯಾ ದೇಶಗಳಲ್ಲಿ ಪ್ರವಾಸಮಾಡಿ ಸಂಶೋಧನೆಗೆ ಸಂಬಂಧಿಸಿ ಒಡಂಬಡಿಕೆ ಮಾಡಿಕೊಂಡಿದ್ದು, ಕಾಯ್ದೆ ಅಲರ್ಜಿ ಗ್ಯಾಂಗ್‌ನ (ಕಾಯ್ದೆಗಳನ್ನು ಗಾಳಿಗೆ ತೂರಿ ದಬ್ಬಾಳಿಕೆಯ ಆಡಳಿತ ಮಾಡುವವರು) ಕೋರ್ಟು, ಕಛೇರಿ, ಮೂಗರ್ಜಿಗಳನ್ನು ಎದುರಿಸುತ್ತಲೇ ಅವರ ಮಸನ್ನನ್ನು ಪರಿವರ್ತನೆ ಮಾಡಲು ಶ್ರಮಿಸಿದ್ದು ಇವೆಲ್ಲವನ್ನೂ ಈ ಕೃತಿ ಎಳೆಯೆಳೆಯಾಗಿ ಬಿಡಿಸಿಟ್ಟಿದೆ. ತೆಲಂಗಾಣ ರಾಜ್ಯದಲ್ಲಿ, ಎರಡು ವರ್ಷಕ್ಕೊಮ್ಮೆ ನಡೆಯುವ, ಒಂದೂವರೆ ಕೋಟಿ ಆದಿವಾಸಿ ಭಕ್ತರು ಸೇರುವ, 'ಸಮ್ಮಕ್ಕ ಸರಳಮ್ಮ ಜಾತರಾ'ವನ್ನು ವಿವರಿಸುತ್ತಲೇ ಇವರ ಬಾಳಿನ ನಾಡಿಮಿಡಿತವನ್ನು ಅನಾವರಣ ಮಾಡಿದೆ.
ಪ್ರಜಾಪ್ರಭುತ್ವದ ರಾಜಕೀಯ ಅರಿವು ಮತ್ತು ಅನುಷ್ಠಾನ, ಆಧುನಿಕ ಸಾಂಸ್ಕೃತಿಕ ಮಾನವಶಾಸ್ತ್ರದ ತಿಳುವಳಿಕೆ, ಬುಡಕಟ್ಟು ಜನರ ಏಳಿಗೆಗೆ ಪ್ರಾಮಾಣಿಕ ಬದ್ಧತೆ ಹಾಗೂ ಕಾರ್ಯಕ್ಷಮತೆ ಇವು ಕೃತಿಕಾರರ ಮತ್ತು ಕೃತಿಯ ಕೇಂದ್ರ ಹೃದಯ ಹಾಗೂ ಗುಂಡಿಗೆಯಾಗಿವೆ. ಕವಿಮಸ ಹೂವಿನಂತಹ ನಿರೂಪಣೆಯು ಕೃತಿಗೆ ವಿಶೇಷ ಮೆರುಗುತಂದಿದೆ. ಇದು ಕನ್ನಡ ಸಾಹಿತ್ಯಕ್ಕೆ ವಿಶೇಷ ಸೇರ್ಪಡೆ. ಅಮರಕಂಟಕ ಬುಡಕಟ್ಟು ವಿಶ್ವವಿದ್ಯಾಲಯವನ್ನು ಮಾದರಿಯಾಗಿ ಕಟ್ಟಿಬೆಳೆಸಿರುವ ಕಟ್ಟೀಮನಿಯವರು ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಸದಸ್ಯರಾಗಿ, ತೆಲಂಗಾಣ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯಕ್ಕೆ ಮೊದಲ ಕುಲಪತಿಯವರಾಗಿ ನೇಮಕವಾಗಿರುವುದು ಹೆಮ್ಮೆಯಿಂದ ಇವರಿಗೆ ಗೌರವ ಸಲ್ಲಿಸಬೇಕಾದ ಸಂಗತಿ.
( ಕೃಪೆ : ಪುಸ್ತಕಲೋಕ, ಬರಹ : ಬಿ.ಎಂ.ಪುಟ್ಟಯ್ಯ)
----
©2024 Book Brahma Private Limited.