‘ಜೇನುಗೂಡು’ ಲೇಖಕಿ ಗಿರಿಜಾ ಎಸ್. ದೇಶಪಾಂಡೆ ಅವರ ಆತ್ಮಕಥೆ. ಒಟ್ಟು 11 ಅಧ್ಯಾಯಗಳಲ್ಲಿ ನಿರೂಪಿತವಾಗಿದೆ. ಹನಿ ಹನಿ ಅನುಭವಗಳ ಜೇನುಗೂಡು’ ಎಂದು ಕೃತಿಗೆ ಲೇಖಕಿಯು ಉಪಶೀರ್ಷಿಕೆ ನೀಡಿದ್ದಾರೆ. ಹಿರಿಯ ಪತ್ರಕರ್ತ ಅರುಣಕುಮಾರ ಹಬ್ಬು ಅವರು ಕೃತಿಯ ಕುರಿತು ‘"ಜೇನುಗೂಡು" ಆತ್ಮಕಥನ ಕನ್ನಡ ಸಾರಸ್ವತ ಲೋಕದಲ್ಲಿ ಎದ್ದುನಿಲ್ಲುವ ಕೃತಿ. ಜೀವನದ ಈ ಸುದೀರ್ಘ ಪಯಣದ ಮಧ್ಯದಲ್ಲಿ ಇಲ್ಲವೇ ತುಟ್ಟತುದಿಯಲ್ಲಿ ನಿಂತು ತಾವು ಸವೆಸಿ ಬಂದ ಜಿವನದ ಏರುಪೇರುಗಳು, ಸಿಹಿ- ಕಹಿ ಅನುಭವಗಳು, ಕಿರುಕಳಗಳು, ಔದಾರ್ಯ, ಕರುಣ, ಸಹಾಯ, ಸಹಾನುಭೂತಿ, ಅನುಭೂತಿಗಳನ್ನು ಅಕ್ಷರಗಳ ಮೂಲಕ ಪರಿಣಾಮಕಾರಿಯಾಗಿ ಹಿಡಿದಿಡುವ ಸಮರ್ಥ ಕಾರ್ಯವನ್ನು "ಜೇನುಗೂಡು" ಮಾಡಿದೆ. ಪತಿಯ ಅಗಲುವಿಕೆ ಇನ್ನೊಂದು ಆಘಾತ. ಮಕ್ಕಳ ಲಾಲನೆ ಪಾಲನೆ. ಪುಟ್ಟ ಉದ್ಯೋಗ, ನಂತರ ಮಕ್ಕಳ ಅಭ್ಯುದಯ ಮೊದಲಾದ ಮಜಲುಗಳು ಅವರ ಜೇನುಗೂಡಿನಲ್ಲಿ ಅತ್ಯಂತ ಮಾರ್ಮಿಕವಾಗಿ ದಾಖಲಾಗಿವೆ. ತಮ್ಮೆಲ್ಲ ಕಹಿ ಘಟನೆಗಳನ್ನು ಬರವಣಿಗೆಯ ಮೂಲಕ ಮರೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅಂಕಣ ಬರೆಹಗಾರ್ತಿ, ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿರುವ ಗಿರಿಜಾ ದೇಶಪಾಂಡೆ, ಜೀವನದಲ್ಲಿ ಹತ್ತು ಹಲವಾರು ಏರುಪೇರುಗಳನ್ನು ಕಂಡು ಮಾಗಿದವರು. ಮನುಷ್ಯಕುಲದ ನಾಡಿಮಿಡಿತವನ್ನು ಅರಿತವರು. ಜೀವನದಲ್ಲಿ ಎದುರಾದ ಸಂಕಷ್ಟಗಳು, ಅವರು ಎದುರಿಸಿದ ರೀತಿ ಇತರರಿಗೆ ದಾರಿ ದೀಪ. ಈ. ಆತ್ಮಕಥೆ ಓದುತ್ತಿದ್ದಂತೆ ಉತ್ತಮ ಕಾದಂಬರಿಯ ರೂಪ ಪಡೆದಿದೆ ಎಂದೆನಿಸಿತು. ತಮ್ಮ ಜೀವನದ ಕಥಾನಕವನ್ನು ಅವರು ಭಾವುಕರಾಗಿ ಸರಳವಾಗಿ ನಿರೂಪಿಸುತ್ತ ಹೋಗುತ್ತಾರೆ. ಓದುತ್ತಿದ್ದಂತೆ ಕುತೂಹಲವೂ ಕೆರಳುತ್ತ ಸಾಗುತ್ತದೆ. ಜೀವನದ ಆಕಸ್ಮಿಕ ತಿರುವುಗಳು ಕಥೆ ಕಾದಂಬರಿಗಳಲ್ಲಿ ಬರುವ ಘಟನೆಗಳಂತೆ ಭಾಸವಾಗುತ್ತವೆ.ಅವರ ಪೆನ್ನಿಗೆ ಬರಹ ಪಕ್ಕಾಗಿದೆ. ಒಟ್ಟಾರೆ, ಓದಬಹುದಾದ ಕೃತಿ ಜೇನುಗೂಡು’ ಎಂದು ಪ್ರಶಂಸಿಸಿದ್ದಾರೆ. .
©2024 Book Brahma Private Limited.