ರೇವತಿ ಉಪ್ಪಿನ ಅವರ ‘ಅಪ್ಪನ ಧ್ಯಾನ’ ಕೃತಿಯು ಆತ್ಮಕಥನಾತ್ಮಕ ಕಾದಂಬರಿಯಾಗಿದೆ. ಅಪ್ಪನ ಧ್ಯಾನ ಆಲೋಚನೆಗಳ ಮೊತ್ತವಲ್ಲ. ಅಳಿದ ಕಾಯದ ಕಥನವಲ್ಲ, ಉಳಿದು ಕಾಡುವ ನೆನಪಷ್ಠೇ ಅಲ್ಲ. ಬದಲಾಗಿ ಇದು ಧ್ಯಾನ. ಈ ಭೂಮಿಯ ಮೇಲಿನ ಬದುಕಿಗೆ ದಾರಿಯಾದವನ, ಹೆಬ್ಬಂಡೆಯಂತೆ ನಿಂತು ಬದುಕು ರಕ್ಷಿಸಿದವನ ಧ್ಯಾನ. ಹಾಗೆ ನೋಡಿದರೆ ಮನುಷ್ಯ ಲೋಕದ ಅದ್ಬುತ ವಾಸ್ತವ ‘ಅಪ್ಪ’. ಅವನಿಲ್ಲದ ಬದುಕು ಉಹೆಗೂ ಅಸಾಧ್ಯ. ಬ್ರಹ್ಮಾಂಡದಷ್ಟೇ ಅಖಂಡವಾದ ಈ ‘ಅಪ್ಪ’, ಪ್ರಪಂಚದ ಎಲ್ಲಾ ಭಾಷೆಗಳ ಬೇರೂ ಹೌದು. ‘ಅಪ್ಪ’ ಕಾಲಾತೀತ ಯಾಕೆಂದರೆ, ಆತ ಬರೀ ವರ್ತಮಾನದ ವಸ್ತು ಅಲ್ಲ. ಪ್ರತಿ ವ್ಯಕ್ತಿಯ ಜೀವನದ ಮೌಲ್ಯವೇ ‘ಅಪ್ಪ’. ಅವ್ವ ಎನ್ನುವ ಭೂಮಿಯನ್ನು ಆಕಾಶವಾಗಿ ಬಾಚಿಕೊಂಡ ‘ಅಪ್ಪ’, ಮೇಲು ಮೇಲಿನವನಾಗಿಯೇ ಕಂಡರೂ ಕೂಡ ಆತ ಒಂದು ರೀತಿ ‘ಹುಟ್ಟಿರದ ಗಿಡದ ಬಿಟ್ಟಿರದ ಎಲೆಯಂತೆ’ ಎಂದಿದ್ದಾರೆ ಲೇಖಕಿ ಈ ಕೃತಿಯಲ್ಲಿ.
ಕವಯತ್ರಿ ರೇವತಿ ಸಿದ್ದರಾಮ ಉಪ್ಪಿನ ಅವರು 1955 ಏಪ್ರಿಲ್ 01 ರಂದು ಸಿಂದಗಿ ತಾಲೂಕಿನ ಹಂದಿಗನೂರು ಗ್ರಾಮದಲ್ಲಿ ಜನಿಸಿದರು. ತಂದೆ ಗುರಣ್ಣ, ತಾಯಿ ಸೋನವ್ವ. ಎರಡು ಆತ್ಮ ಒಂದು, ರಾಮನಲ್ಲ ರಾವಣ ಮತ್ತು ನೀಲಿ ಹೂವು- ಈ ಮೂರು ಅವರ ಕವನ ಸಂಕಲನಗಳು. ...
READ MORE