ಕವಿ ಮತ್ತು ಸಾಮಾಜಿಕ ಹೋರಾಟಗಾರ ಡಾ. ಸಿದ್ಧಲಿಂಗಯ್ಯನವರ ಆತ್ಮಕಥಾನಕ ಇದು. ತುಂಬಾ ಸರಳ ಮಾತುಗಳಲ್ಲಿ ತಮ್ಮ ಬಾಲ್ಯ, ವಿದ್ಯಾಭ್ಯಾಸ, ತಮ್ಮ ಬಡತನ, ತಾವು ಪಟ್ಟ ಕಷ್ಟಗಳನ್ನು ಅವರು ಈ ಕೃತಿಯಲ್ಲಿ ಬಿಡಿಸಿಟ್ಟಿದ್ದಾರೆ.
ಈ ಕೃತಿಯ ಬಗ್ಗೆ ಹಿರಿಯ ವಿಮರ್ಶಕ ಡಿ.ಆರ್. ನಾಗರಾಜ ಅವರು ಹೀಗೆ ಬರೆದಿದ್ದಾರೆ-
ಈ ಆತ್ಮಕಥೆಯಲ್ಲಿ ದಲಿತಲೇಖಕರ ಕೃತಿಗಳಲ್ಲಿ ನಾವು ನಿರೀಕ್ಷಿಸಬಹುದಾದ ಅನೇಕ ಅಂಶಗಳಿವೆ. ಬಡತನ, ರೋಚ್ಚು, ಅವಮಾನ ಇತ್ಯಾದಿಗಳೆಲ್ಲ ಇವೆ. ಆದರೆ, ಇಡೀ ಕೃತಿಯಲ್ಲಿ ಹೊಸದಾದ, ಅನಿರೀಕಿತವಾದ ಒಂದು ಮುಖಾಂಗವೂ ಇದೆ. ಅದು ಬಡತನ ಮತ್ತು ಹಿಂಸೆಯ ಬಗ್ಗೆ ಭೀತಿಯ ಗೈರುಹಾಜರಿ. ಈ ಕೃತಿಯ ವಸ್ತು ದಲಿತಕೃತಿಗಳಿಗೆ ಸಾಮಾನ್ಯವಾದದ್ದು, ಸಹಜ ವಾದದ್ದು, ಆದರೆ, ಈ ವಸ್ತುವನ್ನು ನಿರ್ವಹಿಸುವ ಧ್ವನಿ ಭಿನ್ನವಾದದ್ದು, ಚೇತೋಹಾರಿಯಾದದು. ಬಡತನ, ಜಾತಿ ಅವಮಾನದ ಭೀತಿಗಳಿರದ ದಲಿತಕಥೆ ಸುಳ್ಳು. ಆದರೆ, ಅವನ್ನು ಪ್ರತಿಭೆಯಲ್ಲಿ ಲೇಖಕ ಗೆಲ್ಲುತ್ತಾನೆ ಎಂಬ ಮಾತು ನಿಜ. ತಮ್ಮ ಬದುಕಿನಲ್ಲಿನ ಹಸಿವು, ಅವಮಾನಗಳನ್ನು ಕೊಂಚ ವಕೀಕರಣ ಗೊಳಿಸುವ ಮೂಲಕ ಕವಿ ಸಿದ್ದಲಿಂಗಯ್ಯ, ಅವನ್ನು ದಾಟುವ ಮಾರ್ಗಗಳನ್ನು ತೋರಿಸುತ್ತಾರೆ. ಬಡತನ-ಹೋರಾಟಗಳ ಬದುಕು ಈ ಕಥಾನಕದಲ್ಲಿ ತುಂಟತನ, ವ್ಯಂಗ್ಯದಲ್ಲಿ ನಿರೂಪಿತವಾಗಿದೆ; ಆ ಮೂಲಕ ಪ್ರತಿಭೆಯು ಬಡತನವನ್ನು ಗೆಲ್ಲುವ ಹೊಸ ಆತ್ಮವಿಶ್ವಾಸವೊಂದನ್ನು ಆವಿಷ್ಕರಿಸುವ ಅಪರೂಪದ ಬರವಣಿಗೆ ಇದು’.
©2024 Book Brahma Private Limited.