’ಗೆರೆ ದಾಟಿದ ಮೇಲೆ’ ಪರಶಿವಮೂರ್ತಿಯವರ ಆತ್ಮಕತೆ. ಪರಶಿವಮೂರ್ತಿಯವರು ಬ್ಯಾಂಕ್ ಅಧಿಕಾರಿಗಳು. ಅವರ ಹುಟ್ಟು, ಬೆಳವಣಿಗೆ ಸಾಮಾನ್ಯ ರೀತಿಯದೆ. ಅನೇಕ ಬಗೆಯ ನಿಂದೆ, ಶೋಷಣೆ, ಸಮಸ್ಯೆಗಳಿಗೆ ಈಡಾದವರು. ಅಂದುಕೊಂಡದ್ದನ್ನು ನೆರವೇರಿಸಲಾಗದೆ ತೊಳಲಿದವರು. ಅವರು ತಮ್ಮ ಆತ್ಮಕಥನದ ಉದ್ದಕ್ಕೂ ಯಾರ ಮೇಲೂ ಎಂಥ ಸಂದರ್ಭದಲ್ಲೂ ದ್ವೇಷದ ಮಾತುಗಳನಾಡಿಲ್ಲ. ಬದಲಿಗೆ ತಮ್ಮ ಮನಸ್ಸಿನೊಂದಿಗೇ ಮುಖಾಮುಖಿಯಾಗುತ್ತಾರೆ. ತಮ್ಮ ಆತ್ಮಸಾಕ್ಷಿಯನ್ನೇ ಅಗೆದಗೆದು ನೋಡುತ್ತಾರೆ. ಅತ್ಯಂತ ಸಮಾಧಾನಚಿತ್ತದಿಂದ ತಮ್ಮ ವಿವೇಕ, ಅವಿವೇಕಗಳನ್ನು ಒರೆಗೊಡ್ಡಿ ನೋಡಿಕೊಳ್ಳುತ್ತಾರೆ ಕೂಡ. ತಮ್ಮ ಬದುಕಿನ ಹಾದಿ ಬದಲಾದಾಗಲೆಲ್ಲ ಅದರ ಅರಿವಾಗಿ, ತಾನು ಕ್ರಮಿಸುತ್ತಿರುವ ದಿಕ್ಕು ತಪ್ಪಿರಬಹುದೇ ಎನಿಸಿ ಹೆತ್ತವರ ಮುಂದೆ ನಿಂತು ತಲೆಬಾಗುತ್ತಾರೆ. ಇಲ್ಲಿ ಪರಶಿವಮೂರ್ತಿಯವರು ತಾಯ್ತನದ ಅಂತರಂಗ ಇಟ್ಟುಕೊಂಡೇ ತಮ್ಮ ಇಡೀ ಬದುಕನ್ನೂ, ಜಗತ್ತನ್ನೂ ನೋಡ ಹೊರಟಿದ್ದಾರೆ. ಇಂಥ ಅನೇಕ ಅಚಾನಕಗಳನ್ನು ದಾಟುವ ಪರಶಿವಮೂರ್ತಿಯವರ ಈ ಆತ್ಮಕಥನ ಒಂದು ರೋಚಕತೆಗಳನ್ನು ಒಳಗೊಂಡಿರುವ ಕೃತಿ.
©2024 Book Brahma Private Limited.