ಕರ್ನಾಟಕದ ರಾಜಕೀಯ, ಮಾಜಿ ಮುಖ್ಯಮಂತ್ರಿಗಳ ಕುರಿತ ವಿಶೇಷ, ಕುತೂಹಲಕಾರಿ ಮಾಹಿತಿಯುಳ್ಳ ಒಂದು ರೀತಿಯಲ್ಲಿ ಜೀವನ ಚರಿತ್ರೆ ಎನ್ನಬಹುದಾದ ಪುಸ್ತಕ ’ಇದೊಂಥರ ಆತ್ಮಕಥೆ’. ವೃತ್ತಿಯಲ್ಲಿ ಪತ್ರಕರ್ತರಾಗಿರುವ ಆರ್.ಟಿ. ವಿಠ್ಠಲಮೂರ್ತಿ ಅವರು ವರದಿಗಾರಿಕೆಗಾಗಿ ಓಡಾಡಿದ ಸ್ಥಳಗಳಲ್ಲಿ ಕಂಡುಂಡ ವಿಷಯಗಳನ್ನು ಈ ಕೃತಿಯಲ್ಲಿ ಬಿತ್ತರಿಸಿದ್ದಾರೆ.
ಈ ಕೃತಿಗೆ ಮುನ್ನುಡಿ ಬರೆದಿರುವ ಜಿ.ಎನ್. ಮೋಹನ್ ಅವರ ಮಾತುಗಳಲ್ಲಿಯೇ ಓದುವುದಾದರೆ, ’ವಿಠ್ಠಲಮೂರ್ತಿ ಮಾಧ್ಯಮದ ದೋಣಿಯನ್ನೇರಿ ವಿಧಾನಸೌಧದ ಕಥೆಗಳಿಗೆ ಕಿವಿಯಾದರು. ಬಹುತೇಕ ಪತ್ರಕರ್ತರು ವಿಧಾನಸೌಧದ ಮೂರನೆಯ ಮಹಡಿಯಲ್ಲಿ ‘ಆನ್ ದಿ ರೆಕಾರ್ಡ್’ ಸುದ್ದಿಗಳನ್ನು ಹೆಕ್ಕುತ್ತಿದ್ದಾಗ ಈ ‘ಏಕೋಪಾಧ್ಯಾಯ ಶಾಲೆಯ ಮುಖ್ಯಸ್ಥ’ ವಿಠ್ಠಲಮೂರ್ತಿ ವಿಧಾನಸೌಧದ ಹೊರಗೂ ಕಣ್ಣು ಹಾಯಿಸಿದ ಪರಿಣಾಮವೇ ಈ ‘ಇದೊಂಥರಾ ಆತ್ಮಕಥನ’.
ಹೊತ್ತಿ ಉರಿದ ಮನೆ ಎದುರು ಎದೆ ಎದೆ ಬಡಿದುಕೊಂಡ ಮಾಪಣ್ಣನ ಮಗು ಹೆಜ್ಜೆ ಹಾಕುತ್ತಾ ಹಾಕುತ್ತಾ, ಬದುಕಿನ ಗುಟ್ಟುಗಳನ್ನು ಹೆಕ್ಕುತ್ತಾ, ಅನುಭವ ದಕ್ಕಿಸಿಕೊಳ್ಳುತ್ತಾ, ಗಿರಣಿಯ ಕಾರ್ಮಿಕ ಮುಖಂಡನಾಗಿ ಅರಳಿ ನಿಲ್ಲುತ್ತದೆ. ಆ ಮಗುವಿನ ಹೆಸರು ಮಲ್ಲಿಕಾರ್ಜುನ ಖರ್ಗೆ ಎಂದು ಗೊತ್ತಾಗಬೇಕಾದರೆ ಆರ್ ಟಿ ವಿಠ್ಠಲಮೂರ್ತಿಯೇ ಆಗಬೇಕು. ಮೊಮ್ಮಗುವಿನ ಜೊತೆ ಆಟವಾಡುತ್ತಿರುವ ಅಜ್ಜನ ಕಣ್ಣಲ್ಲಿ ನಿಲ್ಲದ ಕಣ್ಣೀರು. ಬದುಕಿನ ವಸಂತವನ್ನು ಮುರುಟಿ ಹಾಕಿಬಿಡುವ ಸಂಗತಿಗಳ ಬಗ್ಗೆ ಬೆಚ್ಚಿ ಹರಿಸಿದ ಕಣ್ಣೀರು. ಆ ಅಜ್ಜ ಎಂ ಪಿ ಪ್ರಕಾಶ್ ಎಂದು ಗೊತ್ತಾಗಲು ಆರ್ ಟಿ ವಿಠ್ಠಲಮೂರ್ತಿಯೇ ಆಗಬೇಕು. ಕೀ ಇಲ್ಲದ ಬೀಗ ಹೇಗೆ ತನ್ನೊಳಗನ್ನು ಬಿಟ್ಟುಕೊಡಲಾರದೋ ಹಾಗೆಯೇ ವ್ಯಕ್ತಿಗಳನ್ನು ತಟ್ಟದ ಮಾತುಗಳೂ ಅಷ್ಟೇ ಎನ್ನುವುದು ಗೊತ್ತಾಗಬೇಕಾದರೆ, ಒಳ್ಳೆಯತನವೇ ಸೆಕ್ಯುಲರ್, ಕೆಟ್ಟತನವೇ ನಾನ್ ಸೆಕ್ಯುಲರ್ ಎನ್ನುವ ಸರಳ ಸೂತ್ರ ಗೊತ್ತಾಗಬೇಕಾದರೆ, ಅಷ್ಟಾವಕ್ರನ ಕಥೆ ಮನಸ್ಸಿಗೆ ನಾಟುವಂತೆ ಹೇಳುವ ಎಸ್ ಆರ್ ಬೊಮ್ಮಾಯಿ, ಕೆಟ್ಟತನ ಎನ್ನುವ ಕೌರವ- ಒಳ್ಳೆಯತನ ಎನ್ನುವ ಪಾಂಡವರ ನಡುವೆ- ವಿವೇಕವೆಂಬ ಕೃಷ್ಣನಿರಬೇಕು ಎಂದು ಕಿವಿಮಾತು ಹೇಳುವ ವೀರೇಂದ್ರ ಪಾಟೀಲ್, ಅಧರ್ಮ-ಧರ್ಮ, ಹಿಂಸೆ-ಅಹಿಂಸೆ ಎನ್ನುವುದರ ಮ್ಯಾಥಮೆಟಿಕ್ಸ್ ಸೂತ್ರ ತಿಳಿಸುವ ಜೆ ಎಚ್ ಪಟೇಲ್ ಗೊತ್ತಾಗಬೇಕಾದರೆ ಆರ್ ಟಿ ವಿಠ್ಠಲಮೂರ್ತಿ ಅವರ ‘ಇದೊಂಥರಾ ಆತ್ಮಕಥೆ’ಯೇ ಆಗಬೇಕು ಎಂದಿದ್ದಾರೆ.
©2024 Book Brahma Private Limited.