‘ಮುದ್ದು ಮಗಳೇ ಮತ್ತೊಮ್ಮೆ ಹುಟ್ಟಿ ಬಾ’ ಲೇಖಕಿ ಲತಾ ಶ್ರೀನಿವಾಸ್ ಅವರ ಆತ್ಮಕಥನ. ಈ ಕೃತಿಗೆ ಖ್ಯಾತ ಕಾದಂಬರಿಗಾರ್ತಿ ವೈದೇಹಿ, ಹಿರಿಯ ಸಾಹಿತಿ ಎಚ್.ಎಸ್. ಶಿವಪ್ರಕಾಶ್ ಬೆನ್ನುಡಿ ಬರೆದಿದ್ದು, ಕವಿ, ನಾಟಕಕಾರ ಬೇಲೂರು ರಘುನಂದನ್ ಮುನ್ನುಡಿ ಬರೆದಿದ್ದಾರೆ. ‘ಅಸ್ವಾಸ್ಥ್ಯವೆಂಬ ಉರಿಗಾಳಿಯಿಂದ ಉದ್ದಕ್ಕೂ ನಲುಗಿದ ಮಗು ಮತ್ತು ಅದನ್ನು ಕೊನೆಗೂ ಬೀಳ್ಕೊಟ್ಟ ಹೆತ್ತೊಡಲ ಒಳಗುದಿಯ ಕತೆಯಿದು’ ಎನ್ನುತ್ತಾರೆ ವೈದೇಹಿ. ತಾಯಿಯೊಬ್ಬಳನ್ನು ನಿರಂತರ ಬೇಯಿಸುವ ನೆನಹುಗಳ ಬಿಸುಸುಯ್ಲಿನ ಕತೆಯೂ, ಯಾವ ಉತ್ಪ್ರೇಕ್ಷೆಯಿಲ್ಲದೆ ಸಹಜಸ್ಯ ಸಹಜವಾಗಿ ನಿರೂಪಣೆಯ ನುಡಿ-ನುಡಿಗಳಲ್ಲಿಯೂ ಉಕ್ಕಿ ಹರಿವ ವೇದನೆ ಓದುಗರನ್ನೂ ಇನ್ನಿಲ್ಲದಂತೆ ಸ್ಪರ್ಶಿಸುತ್ತದೆ. ಮನುಷ್ಯನ ಅಳವಿಗೆ ಮೀರಿದ ವಿಧಿವಿಪರೀತದ ವ್ಯಂಗ್ಯವನ್ನೂ ಕ್ರೌರ್ಯವನ್ನೂ ದರ್ಶಿಸುತ್ತದೆ. ಬಾಳ ಬೆಳಕಿನ ಕೋಮಲ ಕುಡಿಯು ತಾನು ಎಷ್ಟೇ ಕೈಮರೆ ಮಾಡಿದರೂ ಫಲವಾಗದೆ ಕೊನೆಗೂ ನಂದಿಯೇ ಹೋದ ನೋವು, ಆ ನಂತರದ ಸ್ವಗತ, ಮಗುವಿನೊಡನೆ ಮಾತು, ಆತ್ಮನಿರೀಕ್ಷಣೆ, ಮೆಲುಕು ಇತ್ಯಾದಿಗಳಿಂದ ಕೃತಿ ಒಂದು ರೀತಿಯಲ್ಲಿ ಗತಿಸಿದ ಜೀವಕ್ಕೆ ತಾಯಿ ಸಲಿಸುವ ಅಶ್ರುತರ್ಪಣವೂ ಆಗಿದೆ. ನಿತ್ಯ ನೈಮಿತ್ಯದಲ್ಲಿ ಮುಳುಗಿರುವ ಗೃಹಿಣಿಯೊಬ್ಬರು ತನ್ನ ಅಂತರಂಗದ ಎಣೆಯೇ ಇಲ್ಲದ ತಳಮಳವನ್ನು ಬರವಣಿಗೆಗೆ ತೊಡಗಿಸಿದರೆ ಅದು ತಂತಾನೆ ಪಡೆವ ಕೃತಿರೂಪದ ಸಾರ್ಥಕತೆ ಈ ಕೃತಿಯಲ್ಲಿ ಎದ್ದುಕಾಣುತ್ತಿದೆ ಎಂದು ವೈದೇಹಿ ಅಭಿಪ್ರಾಯಪಟ್ಟಿದ್ದಾರೆ.
©2025 Book Brahma Private Limited.