ಕೊಂಡಪಲ್ಲಿ ಕೋಟೇಶ್ವರಮ್ಮ ಆಂಧ್ರದಲ್ಲಿ ಹೋರಾಟಗಳಿಗೆ ಸರ್ವ ಶಕ್ತಿಯನ್ನು ತುಂಬಿದವರು. ತಮ್ಮ ಒಳಗಿನ ನೋವು ದುಮ್ಮಾನ ಗಳನ್ನು ಹೊರಜಗತ್ತಿಗೆ ತೋರಿಸಿ ಕೊಡದೆ ವಿವಿಧ ಸಂಘಟನೆಗಳಿಗೆ ತಾಯಿಯಾದವರು. ಅವರು ತೆಲುಗಿನಲ್ಲಿ ಬರೆದ ಆತ್ಮಕಥನವೇ ಒಂಟಿ ಸೇತುವೆ. ಸ. ರಘುನಾಥ ಅವರು ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ತನ್ನ ಸಮಾಜವನ್ನು, ಅದರೊಳಗಿನ ಹುಳುಕುಗಳನ್ನು ಹೆಣ್ಣು ನೋಡುವ ದೃಷ್ಟಿಯೇ ಬೇರೆಯಾದುದು. ತೀರಾ ಎಳವೆಯಲ್ಲಿಯೇ ವಿವಾಹವಾಗಿ, ಗಂಡ ಕ್ಷಯರೋಗದಿಂದ ತೀರಿ ಹೋಗಿರುವುದು ಆಕೆಗೆ ಬೇರೆಯವರಿಂದಲೇ ಗೊತ್ತಾಗುತ್ತದೆ. ಬಾಲ ವಿಧವೆಯಾಗಿ ಆಕೆ ಸಮಾಜದಿಂದ ಸಾಕಷ್ಟು ತುಚೀಕಾರವನ್ನು ಎದುರಿಸಬೇಕಾಗುತ್ತದೆ. ಆದರೆ ತಂದೆ, ತಾಯಿಯ ಬೆಂಬಲದಿಂದ ಆಕೆ ಎಲ್ಲ ಸವಾಲುಗಳನ್ನು ಎದುರಿಸುತ್ತಾಳೆ. ಕೊಂಡದಲ್ಲಿ ಸೀತಾರಾಮಯ್ಯರ ಜೊತೆಗೆ ಅವರ ಮರುಮದುವೆಯೇ ಸಮಾಜದಲ್ಲಿ ಒಂದು ದೊಡ್ಡ ಕ್ರಾಂತಿಯಾಗಿ ಪರಿಣಮಿಸಿತ್ತು. ಇದಾದ ಬಳಿಕ ಅವರ ಹೋರಾಟದ ಬದುಕು ಹೊಸ ಮಗ್ಗುಲನ್ನು ಪಡೆಯಿತು. ಅಸ್ಪಶ್ಯತೆಯ ವಿರುದ್ದ ಹೋರಾಟ, ಪ್ರಜಾಶಕ್ತಿ ಪತ್ರಿಕೆ, ಮಹಿಳಾ ಸಂಘಟನೆ, ತೆಲಂಗಾಣ ಹೋರಾಟ ಹೀಗೆ ಆಂಧ್ರದ ಕ್ರಾಂತಿಕಾರಿ ದಿನಗಳ ನೆನಪುಗಳನ್ನು ಹೃದಯ ಮುಟ್ಟುವಂತೆ ಕೋಟೇಶ್ವರಮ್ಮ ವಿವರಿಸುತ್ತಾರೆ. ಕಮ್ಯುನಿಸ್ಟ್ ಪಕ್ಷ ಭಿನ್ನಾಭಿಪ್ರಾಯಗಳಿಂದ ಒಡೆದು ಹೋದ ಮೇಲೆಯೂ ಅದು ಒಂದಾಗುವ ಕನಸನ್ನು ಕಾಣುವ ಆಶಾಜೀವಿ ಕೋಟೇಶ್ವರಮ್ಮ ತನ್ನ ಮಗನನ್ನು ಕಳೆದು ಕೊಂಡಾಗಲೂ, ಹಾಗೆ ಮಗಳು, ಅಳಿಯ ತನ್ನ ಕಣ್ಣೆದುರಿಗೆ ಮರಣಹೊಂದಿದಾಗಲೂ ಪಕ್ಷದ ಹಿತದೃಷ್ಟಿಯಿಂದ ಆ ನೋವನ್ನು ನುಂಗಿಕೊಂಡವರು. ಗಂಡ ಕೊಂಡದಲ್ಲಿ ಸೀತಾರಾಮಯ್ಯ ತೊರೆದು ಹೋಗಿ 38 ವರ್ಷಗಳ ಅನಂತರ ಹಿಂದಿರುಗಿದಾಗ ಆತನನ್ನು ಸಹಿಸಿಕೊಂಡವರು. ಹೋರಾಟದ ಅಗ್ನಿಕುಂಡವನ್ನು ದಾಟುವಾಗ ಒಬ್ಬ ಮಹಿಳೆಗೆ ಎದುರಾಗುವ ಸವಾಲುಗಳನ್ನು ಅವರು ಈ ಕೃತಿಯಲ್ಲಿ ವಿವರಿಸಿದ್ದಾರೆ.
©2024 Book Brahma Private Limited.