‘ನೆನಪಿನ ಪುಟಗಳು’ ಕನ್ನಡ ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರ ಆತ್ಮಕಥನ. ಈ ಕೃತಿಗೆ ಲೇಖಕ ಜೋಗಿ ಅವರ ಬೆನ್ನುಡಿ ಬರಹವಿದೆ. ಪುಸ್ತಕದ ಕುರಿತು ಬರೆಯುತ್ತಾ ‘ಅಗಾಧ ಪ್ರತಿಭೆ, ನಿರಂತರ ಹುಡುಕಾಟ, ಅಚಲ ಶ್ರದ್ಧೆ, ಅವಿರತ ದುಡಿಮೆ, ಉಕ್ಕುವ ಚಿಲುಮೆಯಂಥ ಹುಮ್ಮಸ್ಸಿನ, ಟಿ.ಎನ್. ಸೀತಾರಾಮ್, ತಾವು ನಡೆದು ಬಂದ ಹಾದಿಯ ನೆನಪುಗಳನ್ನು ಬರೆಯುತ್ತಾ ಹೋಗಿದ್ದಾರೆ. ಅವರೇ ಕರೆದಿರುವಂತೆ ಇವು ನೆನಪಿನ ಪುಟಗಳು. ಆದರೆ, ಆ ನೆನಪುಗಳು ನಮ್ಮನ್ನು ಕೂಡ ಅವರ ಕಾಲಕ್ಕೆ ಕರೆದೊಯ್ಯುತ್ತದೆ. ಟೈಮ್ ಮೆಷೀನಿನಲ್ಲಿ ಹಿಂದಕ್ಕೆ ಹೋಗಿ ಕಾಲಾತೀತರಾಗಿ ಅವರು ಕಂಡದ್ದನ್ನು ನಾವೂ ಕಾಣುತ್ತಾ ಹೋಗುತ್ತೇವೆ. ಹೇಳುವುದಕ್ಕಿಂತ ತೋರಿಸುವುದರಲ್ಲಿ ಸೀತಾರಾಮ್ ಅವರಿಗೆ ಆಸಕ್ತಿ ಎಂದಿದ್ದಾರೆ. ಈ ನೆನಪಿನ ಪುಟಗಳಿಗೆ ಹಲವು ಬಣ್ಣ, ವಿಷಾದ ಮೆತ್ತಿದ ಹಲವು ಪುಟಗಳು, ತಮಾಷೆ ಲೇಪಿಸಿದ ಅನೇಕ ಪುಟಗಳು, ಬದುಕನ್ನು ಅವಡುಗಚ್ಚಿ ದಿಟ್ಟತನದಿಂದ ಎದುರಿಸಿದ ಪುಟಗಳು, ಪ್ರಯೋಗಶೀಲತೆಯ ಪುಟಗಳು, ಹುಡುಕಾಟದ ಸಾಲುಗಳು, ಅಂತರಂಗದ ಪಿಸುಮಾತು, ಲೋಕಾಂತದ ಹೊಸಿಲಿಗೆ ಹಚ್ಚಿದ ಕಿರುದೀಪ-ಎಲ್ಲವನ್ನು ಟಿಎನ್ನೆಸ್ ಸಂತನ ನಿರುಮ್ಮಳ ಧಾಟಿಯಲ್ಲಿ ನಮ್ಮ ಮುಂದಿಟ್ಟಿದ್ದಾರೆ. ಟಿಎನ್ನೆಸ್ ಅವರ ಐದು ದಶಕಗಳ ಜೀವನ ಚಿತ್ರಗಳಲ್ಲಿ ನೂರಾರು ಜೀವಗಳ ಕತೆಯಿದೆ, ಇಲ್ಲಿ ನಮಗೆ ಬಹುಮುಖಿ ಟಿಎನ್ನೆಸ್ ಸಿಗುತ್ತಾರೆ. ಕೃಷಿಕ, ವಕೀಲ, ಉದ್ಯಮಿ, ನಾಟಕಕಾರ, ನಟ, ನಿರ್ದೇಶಕ, ಸಾಹಿತಿಯಾಗಿ ಅವರನ್ನು ಬಲ್ಲವರಿಗೆ ಮಗ, ತಮ್ಮ, ಅಣ್ಣ, ತಂದೆ, ಗಂಡ, ಗೆಳೆಯ ಟಿಎನ್ನೆಸ್ ಕೂಡ ಎದುರಾಗುತ್ತಾರೆ. ಇದು ಟಿಎನ್ನೆಸ್ ಒಬ್ಬರ ನೆನಪಿನ ಪುಟಗಳಲ್ಲ, ಒಂದು ಕಾಲಾವಧಿಯ ಜ್ಞಾಪಕ ಚಿತ್ರಶಾಲೆ. ಇದನ್ನು ಓದುತ್ತಾ ನಾನು ಬೆರಗಾಗಿದ್ದೇನೆ, ಮೌನವಾಗಿದ್ದೇನೆ. ತಲ್ಲಣಿಸಿದ್ದೇನೆ, ನಕ್ಕು ಹಗುರಾಗಿದ್ದೇನೆ. ವಿಷಾದದಿಂದ ತೊಯ್ದು ಹೋಗಿದ್ದೇನೆ. ತನ್ನ ಕತೆಯನ್ನು ಮತ್ತೊಬ್ಬರ ಅನುಭವ ಆಗಿಸಲಿಕ್ಕೆ ಪ್ರಾಮಾಣಿಕತೆ ಇದ್ದರೆ ಸಾಕು. ಅದು ಈ ಪುಟಗಳಲ್ಲಿ ದಟ್ಟವಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
©2024 Book Brahma Private Limited.