ನೆನಪೇ ಸಂಗೀತ

Author : ವಿದ್ಯಾಭೂಷಣ

Pages 152

₹ 180.00

Buy Now


Year of Publication: 2018
Published by: ಪ್ರಕೃತಿ ಪ್ರಕಾಶನ
Address: 22, ಇ.ಎ.ಟಿ ಸ್ಟ್ರೀಟ್, ಗಾಂಧಿಬಜಾರ್‌, ಬೆಂಗಳೂರು, 560004
Phone: 9616102886

Synopsys

ತಮ್ಮ ಸುಮಧುರ ಗಾಯನದಿಂದ ನಾಡಿನ ಮನ ಗೆದ್ದವರು ವಿದ್ಯಾಭೂಷಣರು. ದಾಸರ ಪದಗಳ ಗಾಯನಕ್ಕೆ ತಮ್ಮದೇ ಅನನ್ಯ ಕೊಡುಗೆ ನೀಡಿದ ಅವರು ಸನ್ಯಾಸ ತೊರೆದು ಸಂಸಾರಕ್ಕೆ ಪ್ರವೇಶಿಸಲು ಹಿಂದೇಟು ಹಾಕದೇ ಒಂದು ಕಾಲಘಟ್ಟದಲ್ಲಿ  ವಿದ್ಯಾಭೂಷಣರ ಕ್ರಾಂತಿಕಾರಕ ನಿಲುವು ಕರ್ನಾಟಕದಾದ್ಯಂತ ಮನೆ ಮಾತಾಗಿತ್ತು. ವಿದ್ಯಾಭೂಷಣರ ಬದುಕು ಮತ್ತು ಸಂಗೀತ ಈ ಪುಸ್ತಕದಲ್ಲಿ ಸೊಗಸಾಗಿ ಮೂಡಿ ಬಂದಿದೆ.

ಸಂಗೀತದಲ್ಲಿ ಆಸಕ್ತಿ ಮತ್ತು ಸಂಗೀತದ ಕುರಿತು ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಹಿರಿಯ ಪತ್ರಕರ್ತ ಜಗದೀಶ ಕೊಪ್ಪ ಅವರು ಈ ಕೃತಿಯ ಬಗ್ಗೆ ಹೀಗೆ ಬರೆದಿದ್ದಾರೆ-

ಅತ್ಯಂತ ಪ್ರಾಮಾಣಿಕವಾಗಿ, ಯಾವುದೇ ರಾಗ ದ್ವೇಷಗಳಿಲ್ಲದೆ, ತಮ್ಮೊಳಗಿನ ಭಾವಗಳನ್ನು ಅತ್ಯಂತ ಸಂಯಮದಿಂದ ನವಿರಾದ ಭಾಷೆಯಲ್ಲಿ ವಿದ್ಯಾಭೂಷಣರು ಹಿಡಿದಿಟ್ಟಿರುವುದು ಈ ಕೃತಿಯ ವಿಶೇಷ.
ಆತ್ಮಚರಿತ್ರೆಗಳೆಂದರೆ, ಆತ್ಮವಂಚನೆಯ ದಾಖಲೆಯ ಕೃತಿಗಳು ಎಂಬ ಸ್ಥಿತಿ ತಲುಪಿರುವ ಈ ದಿನಗಳಲ್ಲಿ ಈ ಕೃತಿ ವಿಭಿನ್ನವಾಗಿ ನಿಲ್ಲುತ್ತದೆ.

ಕೃತಿ ಆಯ್ದ ಭಾಗ-

ಒಬ್ಬ ಭಯಂಕರ ಸಮಾಜಸುಧಾರಕನಾಗಿ ಹೊರಹೊಮ್ಮಿ ಜನತೆಯ ಉದ್ದಾರ ಮಾಡಿಬಿಡಬೇಕೆಂಬ ಉದ್ದೇಶವೇ, ಮಹತ್ವಾಕಾಂಕ್ಷೆಯೇ ನನಗಿರಲಿಲ್ಲ ಅದು ನನ್ನಿಂದ ಆಗುವ ಹೋಗುವ ಸಂಗತಿಯೇ ಆಗಿರಲಿಲ್ಲ. ಒಬ್ಬ ಜನ ಸಾಮಾನ್ಯನ, ಇನ್ನೂ ಸ್ವಲ್ಪ ಮರ್ಯಾದೆ ಕೊಟ್ಟು ಹೇಳುವುದಾದರೆ ಶ್ರೀಸಾಮಾನ್ಯನ ಸರ್ವೇ ಸಾಧಾರಣವಾದ ಜೀವನ್ಮುಖಿಯಾದ ಆಸೆ ಆಕಾಂಕ್ಷೆಗಳು ನನ್ನ ಮೆಚ್ಚಿನ ಮಡದಿ-ಬೆಚ್ಚನೆ ಮನೆ-ಮತ್ತೆ ವೆಚ್ಚಕ್ಕೆ ಹೊನ್ನು, ಇಷ್ಟೇ ನನ್ನ ಜೀವನದ ಗುರಿ. ಎಲ್ಲರಂತೆಯೇ ಸಂಗೀತ-ಸಾಹಿತ್ಯ ಸಾಲದೇ? ಆದರೆ ಇದೆಲ್ಲವೂ ಸಾತ್ವಿಕವಾಗಿ ಸಹಜವಾಗಿ ಬಂದುದಾಗಿರಲಿ ಎಂಬ ಸಣ್ಣ ಆದರ್ಶ, ಇವೇ ನನ್ನ ಗುರಿಯಾಗಿದ್ದುದು. ನಾನು ಪೀಠದಲ್ಲಿದ್ದು ಗುಟ್ಟಾಗಿಯೋ, ಅಥವಾ ಸ್ವಲ್ಪ ಮರ್‍ಯಾದೆಗೆಟ್ಟರೆ ಗೊತ್ತಾಗಿ, ಇದನ್ನು ಪಡೆಯಬಹುದಿತ್ತು. ಅದಕ್ಕಾಗಿ ಇಷ್ಟೊಂದು ಮಾನಸಿಕ ತೊಳಲಾಟವೇಕೆ? ಆದರೆ ನನ್ನ ಮನ ಒಪ್ಪಲೇ ಇಲ್ಲ. ನಮ್ಮ ತಂದೆಯವರಲ್ಲಿದ್ದ ಸಮಾಜದ ಕುರಿತಾದ ಅಂದರೆ, ಮೌಲ್ಯಗಳ ಕುರಿತಾದ ಗೌರವ ಬುದ್ದಿ ನನ್ನಲ್ಲಿದ್ದ ಆದರ್ಶ ಬದುಕಿನ ಕಲ್ಪನೆ, ನನ್ನನ್ನು ಹಾಗೆ ಮಾಡಲು ಬಿಡಲಿಲ್ಲ ಅದು ಹಿರಿಯರ ಪುಣ್ಯ. 

About the Author

ವಿದ್ಯಾಭೂಷಣ
(10 July 1952)

.ವಿದ್ಯಾಭೂಷಣ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಶಾಸ್ತ್ರೀಯ ಸಂಗೀತಗಾರರು. ಪ್ರಮುಖವಾಗಿ ಹರಿದಾಸ ಭಕ್ತಿಗೀತೆಗಳನ್ನು ಹಾಡುವ ಮೂಲಕ ಭಕ್ತಿ ಗೀತೆಗಳ ಗಾಯನ ವಲಯದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದವರು. ತನು ನಿನ್ನದು ಜೀವನ ನಿನ್ನದು ಹಾಗೂ ದಾಸರ ಪದಗಳು ಹೀಗೆ ಎರಡು ಧ್ವನಿ ಸುರಳಿಗಳನ್ನು ತಂದಿದ್ದಾರೆ. 1994ರಲ್ಲಿ ಸಂಗೀತ ವಿದ್ಯಾ ನಿಧಿ ಎಂಬ ಗೌರವ ದೊರಕಿದೆ. ಹಂಪಿಯ ಕನ್ನಡ ವಿ.ವಿ.ಯಿಂದ ಗೌರವ ಡಾಕ್ಟರೇಟ್ ನೀಡಲಾಗಿದೆ. ಭಕ್ತಿ ಭಾರತಿ ಪ್ರತಿಷ್ಠಾನದ ಸಂಸ್ಥಾಪಕ ಸದಸ್ಯರಾಗಿದ್ದು, ಆ ಮೂಲಕ ಭಕ್ತಿ ಗಾಯನವನ್ನು ಪ್ರಸಿದ್ಧಿ ಪಡಿಸಿದರು. ‘ನೆನಪೇ ಸಂಗೀತ’ ಎಂಬುದು ಇವರ ಆತ್ಮಕಥೆ. ಜನಪ್ರಿಯ ಕನಕದಾಸರ ಕೀರ್ತನೆಗಳು ...

READ MORE

Conversation

Reviews

ಸಾಂಸಾರಿಕತೆಗೆ ಘನತೆ ತಂದ ಸ್ವಾಮಿಯೊಬ್ಬರ ಆತ್ಮಕಥನ

ದಾಸರ ಕೀರ್ತನೆಗಳ ಸುಶ್ರಾವ್ಯ ಗಾಯನಕ್ಕೆ ಹೆಸರಾದ ವಿದ್ಯಾಭೂಷಣರು ಸಂನ್ಯಾಸವನ್ನು ತ್ಯಜಿಸಿ ,ಗೃಹಸ್ಥರಾಗುವುದರ ಮೂಲಕ ಕರ್ನಾಟಕದ ಮನೆಮಾತಾದವರು. ಅವರ ಈ ಕೃತಿ ಸಂಗೀತ ಮತ್ತು ಮಠೀಯ ಅನುಭವಗಳ ವಿಭಿನ್ನ ಜೀವನ ಕಥನ, ಕೃತಿಯ ಮೊದಲ ಕೆಲವು ಅಧ್ಯಾಯಗಳು ಬಾಲ್ಯದಲ್ಲಿ ಅವರ ಮೇಲಾದ ಸಂಗೀತದ ಪ್ರಭಾವವನ್ನು ದಾಖಲಿಸುತ್ತವೆ. ತಂದೆಯಿಂದಲೇ ಮೊದಲ ಸಂಗೀತ ಪಾಠಗಳನ್ನು ಕಲಿತದ್ದು, ಪುತ್ತೂರಿನ ವೆಂಕಟಪ್ಪ ಡೋಗ್ರ ಎಂಬ ವಾದ್ಯಗಾರ ವಿದೇಶಿ ವಾದ್ಯವಾದ ಸ್ಯಾಕ್ಸೋಫೋನನ್ನು ಮೊದಲಬಾರಿಗೆ ಶಾಸ್ತ್ರೀಯ ಸಂಗೀತಕ್ಕೆ ಅಳವಡಿಸಿದ್ದು: ಶ್ರೀರಂಗಪಟ್ಟಣದ ಪುಟುಸ್ವಾಮಿ ಎಂಬ ನಾದಸ್ವರವಾದಕರು ಕಲೋಪಾಸನೆಯನ್ನು ದೈವೋಪಾಸನೆ ಎಂದು ನಂಬಿ ನದಿಗಳ ಮುಂದೆ, ದೇವಸ್ಥಾನದ ಆನೆ, ಹಸುಗಳ ಮುಂದೆ ನಾದಸ್ವರ ನುಡಿಸುತ್ತಿದ್ದುದು ಮುಂತಾದ ಕುತೂಹಲಕರ ಸಂಗತಿಗಳು ಇಲ್ಲಿವೆ.

ಕುಕ್ಕೆ ಸುಬ್ರಹ್ಮಣ್ಯ ಮಠಕ್ಕೆ ವಿದ್ಯಾಭೂಷಣರ ಬಲವಂತದ ಪೀಠಾರೋಹಣ ಕೃತಿಯ ಪ್ರಮುಖ ಘಟ್ಟಗಳಲ್ಲೊಂದು. ಧಾರ್ಮಿಕ ನಡೆಯ ಮಾರ್ಗದರ್ಶನಕ್ಕಾಗಿ ಸಮುದಾಯಗಳೇ ಮಠಗಳನ್ನು ನಿರ್ಮಿಸಿಕೊಂಡಿರುತ್ತವೆ. ಮಠದ ಸ್ವಾಮೀಯಾಗಿ ಬರುವವರು ಸಾಧಕರಾಗಿದ್ದು ಸನ್ಯಾಸವನ್ನು ಒಪ್ಪಿ ಬಂದವರಾದರೆ ಸಮಸ್ಯೆ ಇರದು. ಆದರೆ ಮಠವೆಂದರೇನು, ಸನ್ಯಾಸವೆಂದರೇನೆಂದರಿಯದ ಮುಗ್ಧ ಬಾಲಕರನ್ನು ಅವರ ಅಭಿಪ್ರಾಯವನ್ನೂ ಕೇಳದೆ ಸ್ವಾಮಿಯನ್ನಾಗಿಸುವುದು ಕ್ರೌರ್ಯವೇ ಸರಿ. ಕಿರಿಯ ಸ್ವಾಮೀಜಿಯಾಗಿ ನಿಯುಕ್ತರಾದಾಗ ವಿದ್ಯಾಭೂಷಣರಿಗೆ ಇನ್ನೂ ಹದಿನೈದರ ವಯಸ್ಸು. ಚಡ್ಡಿ ತೊಡುತ್ತಿದ್ದ ಬಾಲಕ ಕಾಲೇಜಿಗೆಂದು ಆಸೆಪಟ್ಟು ಹೊಲಿಸಿದ್ದ ಪ್ಯಾಂಟನ್ನು ಒಮ್ಮೆಯೂ ಧರಿಸಲಾಗದೆ ಕಾವಿ ಬಟ್ಟೆ ಬಲವಂತವಾಗಿ ಆಕ್ರಮಿಸಿಬಿಡುತ್ತದೆ.

ಪೇಜಾವರ ಮಠದ ವಿಶ್ವೇಶ್ವರತೀರ್ಥರು ವಿದ್ಯಾಭೂಷಣರಿಗೆ ನೆಚ್ಚಿನ  ಗುರುಗಳು. ಹೈದ್ರಾಬಾದಿನ ವಾಸ್ತವ್ಯದಲ್ಲಿ ವಿಶ್ವೇಶ್ವರತೀರ್ಥರು ಭಾಗವತದ ಪ್ರವಚನ ನೀಡುವಾಗ ಆಯ್ದ ಶ್ಲೋಕಗಳಿಗೆ (ತಾವು ಬಲ್ಲ ಕೆಲವೇ ರಾಗಗಳಲ್ಲಿ) ಹಾಡಿದ್ದೇ ವಿದ್ಯಾಭೂಷಣರು ಹಾಡುಗಾರರೆಂದು ಗುರುತಿಸಲ್ಪಟ್ಟರು. ಆಕಾಶವಾಣಿಯಿಂದಲೂ ಕರೆ ಬರುವಷ್ಟು ಜನಪ್ರಿಯರಾದರು. ಸಂಗೀತವೇ ಮುಂದೆ ತಮ್ಮ ಜೀವನಾಧಾರವಾಗಬಹುದೆಂದು ಅವರಾಗ ಎಣಿಸಿರಲೂ ಇಲ್ಲ. ಒಲ್ಲದ ನೊಗ ಹೊತ್ತೇ ೩೦ ವರ್ಷ ಮಠವನ್ನು ಮುನ್ನಡೆಸಿದ ವಿದ್ಯಾಭೂಷಣರು ತಮ್ಮ ಹಾಡುಗಾರಿಕೆಯಿಂದ ಮತ್ತು ನಿರಂತರ ಸಾಂಸ್ಕೃತಿಕ ಚಟುವಟಿಕೆಗಳಿಂದ ಮಠದ ಜನಪ್ರಿಯತೆಯನ್ನು ಹೆಚ್ಚಿಸುತ್ತಾರೆ. ಆದರೆ ಎಲ್ಲರಂತೆ ಸಂಸಾರಿಕ ಜೀವನ ನಡೆಸುವ ಆಸೆ ಅವರೊಳಗೆ ಜೀವಂತವಾಗಿ ಉಳಿದೇ ಇರುತ್ತದೆ. ಸ್ವಲ್ಪ 'ಹೊಂದಾಣಿಕೆ' ಮಾಡಿಕೊಂಡಿದ್ದರೂ ಮಠದೊಳಗೇ 'ಸುಖೀ’ ಜೀವನ ನಡೆಸಬಹುದಿತ್ತೇನೊ! ಆದರೆ ಬದುಕಿನ ಆದರ್ಶ ಮತ್ತು ಮೌಲ್ಯಗಳ ಕುರಿತಾದ ಬದ್ಧತೆಯಿಂದಾಗಿ ಅವರು ಉದ್ದಕ್ಕೂ ಪೀಠತ್ಯಾಗದ ಬಗೆಗೇ ಯೋಚಿಸುತ್ತಾರೆ. ಬಳ್ಳಾರಿಯ ರಮಾ ಎಂಬ ಯುವತಿಯ ಪರಿಚಯದಿಂದಾಗಿ ವಿದ್ಯಾಭೂಷಣರ ಬದುಕು ಹೊಸ ದಿಕ್ಕಿಗೆ ಹೊರಳುತ್ತದೆ. ಈ ಸಂದರ್ಭದ ಅವರ ತಳಮಳ, ತಾಕಲಾಟಗಳು ಓದುಗರ ಮನಮುಟ್ಟುವಂತಿದ್ದು ಅವರ ನಿಸ್ಸಹ ನಡೆ ಪ್ರಾಮಾಣಿಕ ನಿಲುವುಗಳು ಅವರ ಬಗೆಗಿನ ಗೌರವವನ್ನು ಹೆಚ್ಚಿಸುತ್ತವೆ. ಲಕ್ಷ್ಮೀಶ ತೋಳ್ಳಾಡಿಯವರೊಂದಿಗಿನ ವಿದ್ಯಾಭೂಷಣರ ಆತ್ಮೀಯ ಸಂಬಂಧವೂ ಇಲ್ಲಿ ಹಲವು ಸಂದರ್ಭಗಳಲ್ಲಿ ಹಲವು ತೆರನಾಗಿ ವ್ಯಕ್ತವಾಗಿದೆ. ಮುಖ್ಯವಾಗಿ ಪೀಠತ್ಯಾಗದ ವಿಷಯದಲ್ಲಿ ತೋಳ್ಳಾಡಿಯವರು ತೋರುವ ವಿರೋಧ ನಿಜವಾಗಿಯೂ ಸೋಜಿಗವೆನಿಸುತ್ತದೆ. ಈ ಬಗ್ಗೆ ತೋಳ್ಳಾಡಿಯವರೇ ಬರೆದ ಮುನ್ನುಡಿಯಲ್ಲಿ ಸಮಜಾಯಿಷಿ ಮಾತುಗಳಿವೆ.

ವಿದ್ಯಾಭೂಷಣರು ತಮ್ಮ ಆತ್ಮಕಥನದ ಮೂಲಕ ತಮ್ಮದೇ ಆದ ಜೀವನ ದರ್ಶನವನ್ನು ತೆರೆದಿಟ್ಟಿದ್ದಾರೆ. ಅವರು ಉತ್ತಮ ಸಂಗೀತಗಾರರು ಮಾತ್ರವಲ್ಲದೆ ಉತ್ತಮ ಸಾಹಿತಿಯೂ ಹೌದೆನಿಸುವಂತೆ ಅವರ ಬರಹದ ಸೊಗಸಿದೆ. ಅವರದ್ದು ಬೌದ್ದಿಕ ಭಾಷೆಯಲ್ಲ, ಹೃದಯದ ಭಾಷೆ. 'ನೆನಪೇ ಸಂಗೀತ' ಯಾರೂ ಓದಬಹುದಾದ ಸರಳ ಸುಂದರ ಆತ್ಮಕಥೆ.

- ಎನ್. ಎಂ. ಕುಲಕರ್ಣಿ

ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ಪತ್ರಿಕೆ (ಮೇ 2019)

Related Books