‘ಕುಲುಮೆ’ ಸಂಶೋಧಕ, ವಿಮರ್ಶಕ, ಲೇಖಕ ರಹಮತ್ ತರೀಕೆರೆ ಅವರ ಆತ್ಮಕಥೆ. ಈ ಕೃತಿಗೆ ರಹಮತ್ ಅವರದೇ ಬೆನ್ನುಡಿ ಇದ್ದು, ಈ ಬಾಳಕಥನವನ್ನು 'ಕುಲುಮೆ' ಎಂದು ಕರೆದಿರುವೆ. ಕಾರಣ, ನಮ್ಮ ಕುಟುಂಬದ ಕಸುಬು ಕಮ್ಮಾರಿಕೆ ಬೆಂಕಿ ಹೊಗೆ ಹೊಡೆತ ಕಡಿತಗಳ ಈ ಕಸುಬು, ಹೆತ್ತದ್ದೆಯಂತೆ ಎದೆಹಾಲು ಕುಡಿಸಿ ನಮ್ಮನ್ನು ಮೊರೆಯಿತು; ಆತ್ಮಸಂಗಾತಿಯಂತೆ ವಿವಿಧ ಜಾತಿ ವೃತ್ತಿ ಧರ್ಮಗಳ ಜನರೊಟ್ಟಿಗೆ ನಂಟನ್ನು ಬೆಸೆಯಿತು ಎಂದಿದ್ದಾರೆ.
ಹಾಗೇ ಕುಲುಮೆಯ ಕಮ್ಮಟದಲ್ಲಿ ಆಕಾರರಹಿತ ಕಪ್ಪು ಲೋಹವು ಕೆಂಪಗೆ ಕಾಯುತ್ತದೆ. ಕಡಿಸಿಕೊಂಡು ಬಡಿಸಿಕೊಂಡು ಹೊಸ ಸಲಕರಣೆಯಾಗಿ ರೂಪಾಂತರ ಪಡೆಯುತ್ತದೆ. ಇಲ್ಲಿ ಶ್ರಮ ಮಾತ್ರವಲ್ಲ, ಕಲ್ಪನೆ ಮತ್ತು ತಂತ್ರಗಾರಿಕೆಗಳೂ ಇವೆ; ಒಂದನ್ನು ಮತ್ತೊಂದನ್ನಾಗಿ ಪರಿವರ್ತಿಸುವ ಸೃಜನಶೀಲ ಮಾಟವಿದೆ. ಇದು ಅನುಭವ-ಕಲ್ಪನೆ-ಚಿಂತನೆಗಳು ಸಂಗಮಿಸಿ ಕಲಾಕೃತಿ ಸೃಷ್ಟಿಗೊಳ್ಳುವುದಕ್ಕೆ ಸಮೀಪವಾಗಿದೆ.
ನನ್ನ ಪಾಲಿಗೆ ದಕ್ಕಿದ ಬಾಳನ್ನು ಭರಪೂರವಾಗಿ ಅನುಭವಿಸಿದೆ. ಅದರ ಅಪೂರ್ವ ಲೀಲೆಗೆ ಬೆರಗಾದೆ. ದುಗುಡಗಳು ಘಾತಿಸಿದ್ದುಂಟು; ಬವಣೆಗಳು ಸುಸ್ತು ಮಾಡಿದ್ದುಂಟು; ಅಸುರಕ್ಷತೆ ಕಾಡಿದ್ದುಂಟು; ಉತ್ಕಟವಾದ ಮಿತಿ ಮೈಮರೆಸಿದ್ದುಂಟು. ಹೀಗಾಗಿಯೇ ಕುಟುಂಬ ಬೀದಿ ಊರು ಸೀಮೆಗಳನ್ನು ಪ್ರತಿಫಲಿಸುವ ಸದರಿ ಕಥನವು, ಕೇವಲ ನಿರಾಶೆಯ ಗೋಳುಕರೆ ಅಥವಾ ನಿರಾಳತೆಯ ಲೀಲಾವಿಲಾಸ ಆಗಬಾರದು; ಇಕ್ಕಟ್ಟು, ಸಣಸಾಟ, ಸಂಭ್ರಮಗಳ ನಡುವೆ ಮಾಡಿದ ಜೀವನತತ್ವದ ಹುಡುಕಾಟ ಆಗಬೇಕು ಎಂದು ಹಂಬಲಿಸಿರುವೆ ಎಂದಿದ್ದಾರೆ ಲೇಖಕ ರಹಮತ್ ತರೀಕೆರೆ.
©2024 Book Brahma Private Limited.