‘ಹಾಡುವ ಹಕ್ಕಿಯ ಶೋಕಗೀತೆ’ ತಂಬೂರಿ ರಾಜಮ್ಮನವರ ಆತ್ಮಕಥನ ಈ ಕೃತಿಯನ್ನು ಡಾ. ಅಪ್ಪಗೆರೆ ಸೋಮಶೇಖರ್ ನಿರೂಪಿಸಿದ್ದಾರೆ. ಈ ಕೃತಿಗೆ ಪ್ರೊ.ಕಾಳೇಗೌಡ ನಾಗವಾರ ಅವರ ಬೆನ್ನುಡಿ ಬರಹವಿದೆ. ನಾಡಿನ ಜನಪದ ಕಲೆ, ಸಾಹಿತ್ಯ, ಪರಂಪರೆಯಿಂದ ಬಂದಿರುವ ಜ್ಞಾನ ಹಾಗೂ ಒಟ್ಟು ನಮ್ಮ ಜನ ಸಮುದಾಯದ ಸಂಸ್ಕೃತಿಯ ಉದಾತ್ತ ಮೌಲ್ಯಗಳ ಪುನರುತ್ಥಾನದ ಹಾದಿಯಲ್ಲಿ ನಾವೆಲ್ಲ ಹೆಜ್ಜೆ ಇಡಬೇಕಾಗಿದೆ. ಒಂದು ಸಮಾಜದ ವ್ಯಾಖ್ಯಾನಕ್ಕೆ ಬುದ್ಧದೇವ, ಬಸವಣ್ಣ, ಅಕ್ಕಮಹಾದೇವಿ, ಗಾಂಧೀಜಿ, ಅಂಬೇಡ್ಕರ್, ಲೋಹಿಯಾ, ಕುವೆಂಪು ಅವರಂತಹ ಮಹನೀಯರ ಆತ್ಮಕತೆಗಳು ಹೇಗೆ ಮುಖ್ಯವೋ ಹಾಗೆಯೇ ಸತ್ಯ ಮತ್ತು ಸೌಂದರ್ಯಕ್ಕಾಗಿ ನಿರಂತರವಾಗಿ ಹಾರೈಸಿದ ಮತ್ತು ಆ ಮೂಲಕ ತಮ್ಮ ಸಮಸ್ತ ಬದುಕನ್ನೇ ಇನ್ನಿಲ್ಲದಷ್ಟು ಆನಂದಮಯವಾಗಿಸಿಕೊಂಡು ನಮ್ಮ ಜನಪದ ಕಲಾವಿದರ ಆತ್ಮಕತೆಗಳ ವಿವರಗಳು ಕೂಡ ಅಂತ್ಯ ಮಹತ್ವದ್ದಾಗಿವೆ.
ನಾಗರೀಕ ಸಮಾಜದ ಎದೆ ನಡುಗಿಸುವಂತಹ ಹಳ್ಳಿಗಾಡಿನ ಬದುಕಿನ ಅನುಭವಗಳು, ಅಲ್ಲಿನ ಅಪರೂಪದ ಮಾನವೀಯ ಸಂಬಂಧಗಳು, ವಿವಿಧ ಬಗೆಯ ಆಚರಣೆಗಳು, ನಂಬಿಕೆಗಳು, ಕಿತ್ತು ತಿನ್ನುವ ಬಡತನದ ದಾರುಣತೆಯ ನಡುವೆಯೂ ಈ ಜನಸಮುದಾಯಕ್ಕಿರುವ ಜೀವನ ಪ್ರೀತಿಯು ತನ್ನೆಲ್ಲಾ ನಿಜರೂಪದಲ್ಲಿ ನಮ್ಮ ವಿವಿಧ ಜನಪದ ಕಲಾವಿದರ ಆತ್ಮಕತೆಗಳಲ್ಲಿ ದಾಖಲಾಗಿದೆ. ನಮ್ಮ ಅಪರೂಪದ ಜನಪದ ಕಲಾವಿದೆಯರಲ್ಲಿ ಒಬ್ಬರಾಗಿರುವ ತಂಬೂರಿ ರಾಜಮ್ಮನವರ ಬದುಕಿನ ಸುಡುವಾಸ್ತವವನ್ನೆಲ್ಲಾ ಅರಿಯುವುದರ ಮೂಲಕ ನಮ್ಮ ತಿಳಿವಿನ ಕ್ಷೇತ್ರವನ್ನು ವಿಸ್ತರಿಸಿಕೊಂಡ ಅನುಭವವಾಗುತ್ತದೆ. ಪ್ರಸ್ತುತ ಕೃತಿಯನ್ನು ಪ್ರಿಯ ಮಿತ್ರರಾದ ಡಾ.ಅಪ್ಪಗೆರೆ ಸೋಮಶೇಖರ್ ಅವರು ತೀವ್ರವಾದ ಶ್ರದ್ಧೆ ಮತ್ತು ಆಸಕ್ತಿಯಿಂದ ಸಿದ್ಧಪಡಿಸಿದ್ದಾರೆ ಎಂದು ಪ್ರೊ.ಕಾಳೇಗೌಡ ನಾಗವಾರ ಮೆಚ್ಚುಗೆ ಸೂಚಿಸಿದ್ದಾರೆ. ಆತ್ಮಕತೆಯ ನಿರೂಪಣೆಯು ಆಕರ್ಷಣೀಯವಾಗಿದ್ದು ಓದುಗರ ಪ್ರೀತಿಗೆ ಪಾತ್ರವಾಗುತ್ತದೆಂದು ನಾನು ನಂಬಿದ್ದೇನೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.
©2024 Book Brahma Private Limited.