ʼಕಾಫ್ಕಾನೊಂದಿಗೆ ಸಂವಾದʼ ಆನಂದ ಝಂಜರವಾಡ ಅವರ ಅನುವಾದಿತ ಕೃತಿಯಾಗಿದೆ. ಕಾಫ್ಕಾನ ಕುರಿತೂ ಕೂಡ ತುಂಬ ಸೂಕ್ಷ್ಮವಾದ ಬರಹ ಮೊದಲ ಸಂಪುಟದಲ್ಲಿಯೇ ಇದೆ. ಈ ಲೇಖನವನ್ನು ಓದಿದಾಗ ನನಗೆ ಕಾವ್ಯಾ ಕುರಿತು ಇನ್ನು ಹೆಚ್ಚು ಒಳನೋಟಗಳು ಸಿಕ್ಕವು, ಕಾಫ್ಕಾನ ಕುರಿತ ಲೇಖನದಲ್ಲಿ ಅಚ್ಯುತ ಗೋಡಬೋಲೆ,ಕಾಫ್ಕಾನ ತೀರ ಖಾಸಗಿಯಾದ ಬದುಕಿನ ಅನೇಕ ಸೂಕ್ಷ್ಮಗಳನ್ನು ಬಿಚ್ಚಿ ಇಟ್ಟಿದ್ದಾರೆ. ಜೊತೆಗೆ ಆತನ ಸ್ವಭಾವದ ವೈಚಿತ್ರ್ಯಗಳಂತೆ ಕಾಣುವ ವಿಶಿಷ್ಟತೆಗಳನ್ನೂ ಬಿಡಿಸಿದ್ದಾರೆ.ಕಾಫ್ಕಾನ ಜೊತೆ ವಿಚಿತ್ರವಾದ ಸಂಬಂಧಗಳನ್ನು ಹೊಂದಿದ್ದ ಅನೇಕ ಹೆಣ್ಣುಗಳಲ್ಲಿ ಮಿಲೆನಾ ಅನ್ನುವವಳೂ ಇದ್ದಳು. ಅವಳ ಹಾಗೂ ಕಾಫ್ಕಾನ ನಡುವಿನ ಸಖ್ಯದ ಆಖ್ಯಾನವನ್ನು ನಾವು ಗಮನಿಸುವಂತಿದೆ. ಈ ಮಿಲೆನಾ, ಕಾಫ್ಕಾನ ಒಂದು ಪತ್ರಕ್ಕೆ ಉತ್ತರಿಸುವಾಗ, ಕಾವ್ಯಾ ತನಗೆ ಹೇಗೆ ಕಾಣತಾನೆ ಅನ್ನೋದನ್ನ ವಿವರಿಸ್ತಾಳೆ. “ಆತ ಸದಾ ಕಾಲವು ಕಿಟಕಿಯ ಕಬ್ಬಿಣದ ರಾಡ್ಗಳಿಗೆ ಗದ್ದ ಊರಿ ಆಚೆಗಿನ ಆಕಾಶವನ್ನೇ ದಿಟ್ಟಿಸುತ್ತಿದ್ದ. ಆತ ಎಂದೂ ಬಾಗಿಲು ತೆರೆದು ಪೂರ್ತಿ ಹೊರಬಂದು ನೆಲವನ್ನು ನೋಡಲಿಲ್ಲ. ಕಿಟಕಿಯಲ್ಲಿಯೂ ನೆಲವು ಕಾಣುತ್ತದಾದರೂ, ಅದು ಬಾಗಿಲು ತೆರೆದಾಗ ಕಾಣುವಷ್ಟು ಮುಕ್ತವಾಗಿರುವದಿಲ್ಲ." ಇದು ಮಿಲೆನಾ ಹೇಳುವ ಮಾತು. ಈ ಮಾತು ಕಾಫ್ಕಾನನ್ನು ಓದುವಾಗ ಉಪಯುಕ್ತ ಎನ್ನಿಸುವ ಒಂದು ಬಗೆಯ ಟಿಪ್ಪಣಿಯೂ ಆಗಿದೆ. ಲೇಖಕನನ್ನು ಕುರಿತು ಎಷ್ಟೇ ಅರಿತರೂ, ಅವನ ಕೃತಿಗಳನ್ನು ಓದುವಾಗ ಆ ಅರಿವುಗಳನ್ನು ಮರೆಯಬೇಕು ಎಂದು ಭಾವಿಸುವ ಒಂದು ಓದು-ಸಂಸ್ಕೃತಿಯೂ ಇದೆ. ನನಗೆ ಕೃತಿಕಾರನ ಬಗೆಗಿನ ಅರಿವು ಅವನ ಕೃತಿ- ಪ್ರವೇಶಕ್ಕೆ ಅನರ್ಥಕಾರಿ ಎಂದು ಎಂದೂ ಅನ್ನಿಸಿಲ್ಲ.
©2024 Book Brahma Private Limited.