ಕಾಳರಾತ್ರಿ, ಪೂರ್ವರಂಗ ಕೃತಿಗಳಂತೆಯೇ `ಬೆಳಗು' ಕೃತಿಯು ಸಹ ತಮ್ಮ ಅಧ್ಯಾತ್ಮಿಕ ಜೀವನದ ನಕಾಶೆಯೇ. ಬೆಳಗು ಹೊಸದಾಗಿ ಬರೆಯಲ್ಪಟ್ಟದ್ದು ಏನೂ ಅಲ್ಲ. ಎರಡು ವರ್ಷದ ಹಿಂದೆ ಪ್ರಕಟವಾದ `ಕಾಳರಾತ್ರಿ' ಎಂಬುದರದೇ ಕೊನೆಯ ಭಾಗ. ಆಗ ಅವಸರದ ಮೂಲಕ ಅಚ್ಚಾಗದೇ ಉಳಿದ ಅಂಶವಿದು ಎಂದು ಸ್ವತಃ ಕವಿ ಮಧುರಚೆನ್ನರು ಕೃತಿಯ ಆರಂಭದಲ್ಲಿ ಹೇಳಿಕೊಂಡಿದ್ದಾರೆ.
ಅಧ್ಯಾತ್ಮ ಜೀವಿಯು ಈ ಬದುಕನ್ನು ಸೂಕ್ಷ್ಮವಾಗಿ ಗ್ರಹಿಸಿ, ಬುದ್ಧ, ಬಸವ, ಅರವಿಂದರು, ಏಸುಕ್ರಿಸ್ತ, ಮುಹಮ್ಮದ್ ಪೈಂಗಬರ್ ಮುಂತಾದ ದಾರ್ಶನಿಕರ ಅನುಭವಗಳ ಸಂದೇಶಗಳನ್ನು ತಮ್ಮ ಜೀವನದ ಒರೆಗಲ್ಲಿಗೆ ಹಚ್ಚಿ, ಅರ್ಥೈಸುವಿಕೆಯಲ್ಲಿಯ ಚಡಪಡಿಕೆಯ ಒಟ್ಟು ಮೊತ್ತವಾಗಿ ಈ ಕೃತಿ ರೂಪು ತಳೆದಿದೆ.
‘ವೈರವು ವೈರದಿಂದ ಆರದು, ಅದಕ್ಕೆ ಪ್ರೇಮವೇ ಮದ್ದು’ ಬುದ್ಧನ ಇಂತಹ ಸಂದೇಶಗಳು ಕೆಲವೊಮ್ಮೆ ಬದುಕಿನಿಂದ ಆಗುವ ಕಿರಿಕಿರಿಗಳನ್ನು ನಿರ್ಲಕ್ಷಿಸುವ ಬಗೆಯನ್ನು ಕಂಡುಕೊಳ್ಳುವುದು ಜಾಣ್ಮೆ. ಇಂತಹ ಸಂದೇಶಗಳು ರಕ್ಷಣಾತ್ಮಕ ತಂತ್ರಗಳಾಗಿ ಹೇಗೆ ಉಪಯುಕ್ತ ಹಾಗೂ ಅವುಗಳನ್ನು ಪಾಲಿಸಬೇಕಾದ ಅಗತ್ಯ ಹಾಗೂ ಅನಿವಾರ್ಯತೆಯನ್ನು ಇಲ್ಲಿಯ ನಾಯಕನ ಜೀವನ ವಿಶ್ಲೇಷಣೆಯ ಮೂಲಕ ಕವಿಗಳು, ಇತರರ ಬದುಕಿನಲ್ಲೂ ಬೆಳಕು ಚೆಲ್ಲುವಂತೆ ಮಾಡಿದ್ದಾರೆ. ಒಂದರ್ಥದಲ್ಲಿ ಇದು ಕಾದಂಬರಿಯೂ, ಕಥೆಯೂ , ಜೀವನಾನುಭವದ ಸಾರವೂ, ತತ್ವಜ್ಞಾನದ ಮಾರ್ಗವೂ ಆಗಿದೆ. ಓದುಗರು ಕೃತಿಯನ್ನು ಸ್ವೀಕರಿಸುವ ಬಗೆಯ ಮೇಲೆ ಕೃತಿಯ ಪ್ರಕಾರ ರೂಪು ತಳೆಯುತ್ತದೆ. ಬದುಕು-ಜೀವನದ ಸರ್ವ ಆಯಾಮಗಳನ್ನು ವಿಶ್ಲೇಷಿಸುವ ಮೂಲಕ ಸತ್ಯದ ರೂಪು ಪ್ರಕಟಿಸಿ, ಸಂಭ್ರಮಿಸಲು ಹವಣಿಸುವ ನಾಯಕನ ಜಿಜ್ಞಾಸೆಯೇ ಬೆಳಗು ಕೃತಿ.
ಕವಿ ಮಧುರಚೆನ್ನರ ‘ಬೆಳಗು’ ಬರೆದ ಉದ್ದೇಶವನ್ನು ಸ್ಪಷ್ಟಪಡಿಸುತ್ತಾ ‘ಮಹಾಪುರುಷರ ಜೀವನ ಚರಿತ್ರೆಗಳು ಎಷ್ಟೋ ಸಾರೆ ನಮ್ಮ ಬಾಯಿಗೆ ಹಿಡಿಸಲಾರದ ತುತ್ತುಗಳಾಗಿ ತೋರುತ್ತಿರುವುದರಿಂದ ಅತಿ ಕ್ಷುದ್ರ ವ್ಯಕ್ತಿಗಳ ಸಾಹಸವೇ ಸರ್ವ ಸಾಧಾರಣರೆಲ್ಲರ ಭರವಸೆಗೆ ಹೆಚ್ಚಿನ ಕಳೆಯನ್ನು ತರುವ ಸಂಭವವಿದೆ. ಸ್ಥೂಲ ಸೃಷ್ಟಿಗಿಂತ ಹೆಚ್ಚಿಗೆ ಅದೃಶ್ಯವಾದ ಒಂದು ರಾಜ್ಯವುಂಟೆಂಬುದು ಎಷ್ಟೇ ಅಲ್ಪ ಪ್ರಮಾಣದಿಂದಲೇ ಆಗಲೊಲ್ಲದೇಕೆ; ಅದು ನನ್ನ ಅನುಭವಕ್ಕೆ ಹೇಗೆ ಅಣುಅಣುವಾಗಿ ಗೋಚರಿಸಿತೆಂಬುದರ ವರದಿಯೇ ನನ್ನೀ ಆತ್ಮಕಥೆಯು’ ಎಂದೂ ಹೇಳಿದ್ದಾರೆ. ಆದ್ದರಿಂದ, ‘ಬೆಳಗು’ ಕವಿಗಳ ಆತ್ಮಕಥೆಯೂ ಆಗಿದೆ. ಓದುಗರಿಗೆ ಸಾತ್ವಿಕ-ಪಾರಮಾರ್ಥಿಕ ಬದುಕಿನ ದರ್ಶನವೂ ಆಗಿದೆ.
©2024 Book Brahma Private Limited.