ಲೇಖಕಿ, ಪತ್ರಕರ್ತೆ ವಿದ್ಯಾರಶ್ಮಿ ಪೆಲತ್ತಡ್ಕ ಅವರ ಕೃತಿ ಯಕ್ಷ ಗಾನ ಲೀಲಾವಳಿ. ಇದು ಯಕ್ಷಗಾನ ರಂಗದ ಪ್ರಥಮ ಮಹಿಳಾ ಭಾಗವತರಾದ ಲೀಲಾವತಿ ಬೈಪಾಡಿತ್ತಾಯ ಆತ್ಮಕಥನವಾಗಿದೆ. ಹಿರಿಯ ಲೇಖಕ ಲಕ್ಷ್ಮೀಶ ತೋಳ್ಪಾಡಿ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ. ‘ಯಕ್ಷಮೇಳಗಳ ತಿರುಗಾಟದಲ್ಲಿ ಭಾಗವಹಿಸಿದ ಮೊದಲ ಮಹಿಳಾ ಭಾಗವತರೆಂಬ ಇತಿಹಾಸವನ್ನು ಲೀಲಮ್ಮ ಸೃಷ್ಟಿಸಿದರು – ಹೀಗೊಂದು ಇತಿಹಾಸ ಸೃಷ್ಟಿಸುತ್ತಿದ್ದೇನೆ ಎಂಬ ಅರಿವಿಲ್ಲದೆ! ಹೊಸ ಮಾರ್ಗವೊಂದು ಉದ್ಘಾಟನೆಗೊಂಡಿತು ಎಂದು ಅರಿವಿಗೆ ಬಂದಾಗಲೂ ಲೀಲಮ್ಮನಿಗೆ ಉಂಟಾದದ್ದು ಕೂಡಾ ವಿನೀತ ಭಾವವೇ. ಲೋಕವನ್ನೇ ಕರಗಿಸುವ ಈ ವಿನಯ ಲೀಲಮ್ಮನವರದೇ ಸೊತ್ತು ಎನಿಸುತ್ತದೆ ನನಗೆ. ಕಲೆಯ ಮೂಲ ಸಮಸ್ಯೆಗಳಲ್ಲಿ ಇದೂ ಒಂದು; ಅದೆಂದರೆ ತನ್ನ ಭಾವ ತಾದಾತ್ಮ್ಯ ಮತ್ತು ಎಚ್ಚರದ ಸಮತೋಲ. ಲೀಲಮ್ಮನಿಗೆ ಇದು ಸಹಜವಾಗಿ ಬಂದಂತಿದೆ. ಒಂದೆಡೆ ಸಂಸಾರ. ಇನ್ನೊಂದೆಡೆ ಯಕ್ಷವೇದಿಕೆ. ಒಂದೆಡೆ ಲೋಕಧರ್ಮಿ, ಇನ್ನೊಂದೆಡೆ ನಾಟ್ಯ ಧರ್ಮಿ. ಇವೆರಡನ್ನೂ ಕಲಾತ್ಮಕ ಹದದಿಂದ ಮುನ್ನಡೆಯಿಸಿದವರು ಅವರು. ಈ ಕಲಾ ಕಾಯಕದಲ್ಲಿ ಲೀಲಮ್ಮನವರ ಪತಿ ಶ್ರೀ ಹರಿನಾರಾಯಣ ಬೈಪಾಡಿತ್ತಾಯರ ಹಿಮ್ಮೇಳ, ಹಿನ್ನೆಲೆ, ಮಾರ್ಗದರ್ಶನ, ಪ್ರೋತ್ಸಾಹಗಳು- ತಾನು ಹಿನ್ನೆಲೆಯಲ್ಲಿ ನಿಂತು ಮಡದಿಯನ್ನು ಮುನ್ನೆಲೆಗೆ ತರುವಲ್ಲಿನ ಸಹೃದಯತೆ- ಸರ್ವಥಾ ಅಭಿನಂದನೀಯವಾಗಿದೆ’ ಎಂದಿದ್ದಾರೆ.
©2024 Book Brahma Private Limited.