ಲೇಖಕ ಕೆ ಸತ್ಯನಾರಾಯಣ ಅವರು ಆತ್ಮ ಕಥಾನಕ ರೂಪದಲ್ಲೇ ಬರೆದ ಬರಹಗಳ ಸಂಕಲನ 'ಸಣ್ಣ ಪುಟ್ಟ ಆಸೆಗಳ ಆತ್ಮಚರಿತ್ರೆ'. ಇಡೀ ಪುಸ್ತಕದುದ್ದಕ್ಕೂ ಎದ್ದು ಕಾಣುವುದು ಅವರ ಪ್ರಯೋಗಶೀಲತೆ. ಆತ್ಮಕಥೆ, ಜೀವನಚರಿತ್ರೆಯ ತಥಾಕಥಿತ ಕಟ್ಟುಗಳನ್ನು ಮೀರುವ ಈ ಕೃತಿ ಬಗ್ಗೆ ಪ್ರಕಾಶಕ, ಲೇಖಕ ನ. ರವಿಕುಮಾರ ಆಡಿರುವ ಮಾತುಗಳು ಹೀಗಿವೆ: .'ಇದು ಮುಂದಿನ ತಲೆಮಾರಿಗೆ ಬರೆದದ್ದು', 'ಕೃತಿ ತನ್ನಷ್ಟಕ್ಕೆ ತಾನೇ ಹೇಳುತ್ತದೆ' ಎಂದು ಸತ್ಯನಾರಾಯಣರು ಆತ್ಮಚರಿತ್ರೆಯ ಪುಟಗಳು ಎಂದು ಕರೆದಿರುವ ಈ ಬರಹಗಳು ಕೂಡ ರೂಢಿಗತವಾದ ಕ್ರಮ, ವಿವರ, ವಿಶ್ಲೇಷಣೆಯ ಮಾದರಿಗಳನ್ನು ಅನುಕರಿಸದೆ, ಅದರ ಮಿತಿಗಳನ್ನು ದಾಟಿ ಆಶಯಕ್ಕೆ ಬೇಕಾದ ಹೊಸ ಬಗೆಯ ಕ್ರಮವನ್ನು ಕಂಡುಕೊಂಡಿರುವುದು ಗಮನೀಯ' ಎಂದಿದ್ದಾರೆ.
ಇದು ಕೇವಲ ಅವರ ಆತ್ಮಕಥೆ ಮತ್ತು ಆ ಕಾಲದ ಆತ್ಮಕಥೆಯಾಗದೆ ನಮ್ಮ ಕಾಲದ ಮತ್ತು ನಮ್ಮದೇ ಆತ್ಮಕಥೆಯೂ ಆಗುತ್ತದೆ, ದಿನನಿತ್ಯದ ಬದುಕಿನಲ್ಲಿ ಅನಿವಾರ್ಯವಾಗಿ ಎದುರಾಗಬೇಕಾದ ಮತ್ತು ಎದುರಾದಾಗಲೂ ಅದನ್ನು ನಿರ್ವಹಿಸುವಲ್ಲಿನ ಅಸಹಾಯಕತೆ, ಒತ್ತಡ, ಗೊಂದಲ, ಸಂಭ್ರಮಗಳು ಸಹಜವಾಗಿ ಇಲ್ಲಿ ಚಿತ್ರಿಸಲ್ಪಟ್ಟಿವೆ. ಸಹಜವಾಗಿಯೇ ಸತ್ಯನಾರಾಯಣರು ಬರೆದಿರುವುದು ಅವರ ಜೀವಿತದ ಕಾಲುಭಾಗದ ಅವರ ಅನುಭವ ಮತ್ತು ವಿವರಗಳನ್ನು, ಉಳಿದ ಮುಕ್ಕಾಲುಭಾಗ ಆತ್ಮಕಥೆ ರೂಪುಗೊಳ್ಳುವುದು ನಮ್ಮ ಮನಃಪಟಲದಲ್ಲಿ ಎನ್ನಬಹುದು.
©2024 Book Brahma Private Limited.