ಕೆ. ಸತ್ಯನಾರಾಯಣ ಕನ್ನಡದ ಪ್ರಮುಖ ಕಾದಂಬರಿಕಾರ, ಕತೆಗಾರ.ಅವರ ಆತ್ಮಕಥಾನಕ ’ನಾವೇನು ಬಡವರಲ್ಲ’.
ಮೇಲ್ಮುಖವಾಗಿ ಚಲಿಸಿದ ಜನಾಂಗವೊಂದು ಬಡತನವನ್ನು ನೀಗಿಕೊಂಡರೂ ನಾವು ಬಡವರಲ್ಲ ಎನ್ನುವುದನ್ನು ಒಪ್ಪಿಕೊಳ್ಳಲು ಸಿದ್ದವಿರುವುದಿಲ್ಲ. ಅದರಿಂದ ಕಣ್ಣೆದುರಿಗಿನ ನಿಜವಾದ ಬಡವರ ಬಡತನ ಅವರ ಕಣ್ಣಿಗೆ ಕಾಣಿಸುವುದಿಲ್ಲ. ಅಲ್ಲಿಯವರೆಗೆ ಅವರ ಬಡತನವೂ ನೀಗುವುದಿಲ್ಲ - ಎಂಬ ಕಹಿ ಸತ್ಯವನ್ನು ಆತ್ಮ ನಿರೀಕ್ಷಣೆಯ ಮೂಲಕ ಅನನ್ಯವಾಗಿ ಲೇಖಕರು ಮನಗಾಣಿಸಿದ್ದಾರೆ. ಈ ಕೃತಿಯು ಬೀದಿಯಿಂದ ಪ್ರಾರಂಭವಾಗಿ ನಗರಗಳವರೆಗೂ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿದೆ. ಹೀಗಾಗಿ ನಗರೀಕರಣಗೊಂಡ ಜನಾಂಗದ ಆತ್ಮಕಥನವೂ ಆಗಿದೆ. ನಿಷ್ಟುರವಾದ ಆತ್ಮಪರೀಕ್ಷೆಗೆ ಒಡ್ಡಿಕೊಂಡಿರುವುದರಿಂದ ಆತ್ಮಕಥನದಲ್ಲಿ ಅಪರೂಪವಾದ ವಸ್ತುನಿಷ್ಠತೆ ಇದೆ.
ಚಲನಶೀಲವಾದ ಸಮಾಜದಲ್ಲಿ ಆ ಸಮಾಜವನ್ನು ನೋಡುವ, ಅರ್ಥಮಾಡಿಕೊಳ್ಳುವ ವೈಚಾರಿಕ ಚೌಕಟ್ಟುಗಳೂ ಬದಲಾಗಬೇಕಾಗುತ್ತದೆ ಎನ್ನುವ ಲೇಖಕರ ವಿಚಾರ ಪ್ರಶ್ನಾತೀತವಾದುದು. ಹಾಗೆಯೇ ಈ ವೈಚಾರಿಕ ಚೌಕಟ್ಟುಗಳು ಸಮಕಾಲೀನ ಬದುಕಿನ ಬಗ್ಗೆ ಸೂಕ್ತ ಹಾಗೂ ಮುಕ್ತಚಿಂತನೆಯಲ್ಲಿ ಹುಟ್ಟಿಕೊಳ್ಳಬೇಕು ಎನ್ನುವ ಲೇಖಕರ ವಾದವೂ ಗ್ರಾಹ್ಯವಾದುದು. ಸತ್ಯನಾರಾಯಣ ಅವರು ಕತೆ, ಕಾದಂಬರಿ, ಪ್ರಬಂಧ - ಈ ಎಲ್ಲ ಪ್ರಕಾರಗಳಲ್ಲಿಯೂ ಹೊಸ ದಾರಿಗಳನ್ನು ತುಳಿದವರಾಗಿದ್ದು ಈ ಪುಸ್ತಕವೂ ಈ ಮಾತಿಗೆ ಅಪವಾದವಲ್ಲ.
©2024 Book Brahma Private Limited.