‘ನನ್ನೊಳಗೆ’ ಕೃತಿಯು ಎಮ್. ಎನ್ ದಿನೇಶ ಉಪ್ಪೂರ ಅವರ ಆತ್ಮಕಥೆಯಾಗಿದೆ. ಕೃತಿಗೆ ಹಿನ್ನುಡಿ ಬರೆದಿರುವ ಶ್ರೀಧರ ಡಿ.ಎಸ್ ಅವರು, ‘ದಿನೇಶ ಉಪ್ಪೂರರು ಇಲ್ಲಿ ತನ್ನೊಳಗನ್ನು ಅನುಭವ ಕಥನವಾಗಿಸಿದ್ದಾರೆ. ತಮ್ಮ ಬದುಕಿನ ಘಟನೆಗಳನ್ನು ಚಿಂತನೆಗೆ ಒಗ್ಗಿಸಿಕೊಳ್ಳುತ್ತಾ ಸಾಗುವ ಆತ್ಮಕಥನದ ರೀತಿ ಸತ್ಯಕಥೆಯೂ ಆಗಿರುವುದರಿಂದ ಸಾಹಿತ್ಯ ನಿರ್ಮಿತಿಯಲ್ಲಿ ಈ ಬಗೆಯ ಕೃತಿಗಳಿಗೆ ಮಹತ್ವದ ಸ್ಥಾನವಿದೆ. ಹಾಗೆ ನೋಡಿದರೆ, ಸಾಹಿತ್ಯ ವಿವಿಧ ಪ್ರಕಾರಗಳ ರಚನೆಯೂ ಭಾಗಶಃ: ಸಾಹಿತಿಯ ಆತ್ಮವೃತ್ತವೇ. ಅದು ಭಾಗಶಃ ಆಗಿರುತ್ತದೆ ಅಷ್ಟೆ. ಯಾವುದೇ ಬರೆಹ ಪೂರ್ಣ ಕಾಲ್ಪನಿಕವಾಗಲು ಸಾಧ್ಯವಿಲ್ಲ. 'ನನ್ನೊಳಗೆ' ಕೃತಿಯಾಗಿ ಬದುಕಿನೊಂದಿಗೆ ಅವರ ತೀರ್ಥರೂಪರ ಬದುಕನ್ನೂ ಪರಿಚಯಿಸುತ್ತಿರುವುದು ವಿಶೇಷ. ಇಂದಿನ ಉಡುಪಿ ಜಿಲ್ಲೆಯ ಹಾಲಾಡಿ ಪರಿಸರ ಸಾಂಸ್ಕೃತಿಕ ಹಿನ್ನೆಲೆ ಇರುವ ಊರು. ಇಲ್ಲಿಯ ಹಾಡಿ, ಬೆಟ್ಟ, ಬಯಲು, ಮಳೆಗಾಲದ ಸೊಬಗನ್ನು ತನ್ನೊಳಗೆ ಬೆಚ್ಚಗೆ ಉಳಿಸಿ ಬೆಳೆಸಿಕೊಂಡಿರುವುದನ್ನು ಇವರು ಕೃತಿಯಲ್ಲಿ ಸೊಗಸಾಗಿ ದಾಖಲಿಸಿದ್ದಾರೆ. ಉಪ್ಪರದ ಇನ್ನೊಂದು ಹವ್ಯಾಸ ಯಕ್ಷಗಾನದಲ್ಲಿ ದಾಖಲಾದ ವಿಚಾರಗಳನ್ನು ಸಂಗ್ರಹಿಸುವುದು. ಹಾಗಾಗಿ ಕೃತಿಯುದ್ದಕ್ಕೂ ಯಕ್ಷಗಾನದ ವಿಚಾರ ಅನುರಣಿಸುತ್ತಾ ಸಾಗುತ್ತದೆ. ಇದಲ್ಲದೆ ಮಲೆನಾಡಿನ ಹವ್ಯಕರ ಆತಿಥ್ಯ ಬಂಗಾರದ ಸರ ಕಳ್ಳತನವಾಗಿ ಹಿಂದಿರುಗಿದ ಕಥೆ, ಮಗು ನವಿಲುಗರಿ ತಂದ ವಿಚಾರ, ಲಂಚ ಕೊಟ್ಟ ಹಣ ಇವರು ಪಡೆಯದೆ ಉಳಿದುಹೋಗಿ ಅದನ್ನು ಅಪವಿತ್ರವೆಂದು ಗ್ರಹಿಸಿದ ವಿಚಾರ ಮನೆಕಟ್ಟುವಾಗಿನ ತೊಡಕುಗಳು, ತಾಳಮದ್ದಲೆಯೊಳಗಿನ ಜಗಳ, ಮುಂತಾದ ಸ್ವಾರಸ್ಯಕರವಾದ ವಿವರಗಳೆಲ್ಲ ಒಂದು ಒಟ್ಟು ಕೃತಿಯ ರೋಚಕತೆಯನ್ನು ಹೆಚ್ಚಿಸಿವೆ. ದಿನೇಶ ಉಪ್ಪೂರರು ಅಧಿಕಾರದಲ್ಲಿದ್ದಾಗ ನಡೆದುಕೊಳ್ಳುತ್ತಿದ್ದ ಪ್ರಾಮಾಣಿಕತನವನ್ನು ಗಮನಿಸಿದಾಗ ಇಂತಹ ಒಬ್ಬರಾದರೂ ಪ್ರತಿಯೊಂದು ಕಛೇರಿಯಲ್ಲೂ ಇರಬಾರದೇ ಅನ್ನಿಸುತ್ತದೆ. ಅವರ ಬಾಲ್ಯವನ್ನು ಓದಿದರೆ ಇಂತಹ ಹಳ್ಳಿ ಈಗಲೂ ಉಳಿದಿದೆಯೇ ಅನಿಸುತ್ತದೆ’ ಎಂದಿದ್ದಾರೆ.
©2024 Book Brahma Private Limited.