ಲಕ್ಷಾಂತರ ಭಾರತೀಯರನ್ನು ತಮ್ಮ ಸಂಗೀತದಿಂದ ಮುಟ್ಟಿರುವ ಮಲ್ಲಿಕಾರ್ಜುನ ಮನಸೂರ್ ಭಾರತದ ಅತ್ಯುತ್ತಮ ಸಂಗೀತಗಾರರಲ್ಲಿ ಒಬ್ಬರು. ಸಂಗೀತರತ್ನ, ಪದ್ಮಶ್ರೀ, ಪದ್ಮಭೂಷಣ, ಕಾಳಿದಾಸ ಪ್ರಶಸ್ತಿಗಳನ್ನು ಗಳಿಸಿದವರು. ಕರ್ನಾಟಕ ವಿಧಾನಪರಿಷತ್ತಿನ ನಾಮಕರಣ ಸದಸ್ಯರು. ಇತ್ತೀಚೆಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದವರು. ಇಂದು ಇಂಥ ಗೌರವಾನ್ವಿತ ಸ್ಥಿತಿಗೆ ಏರಿರುವ ಮನಸೂರ್ ಬಾಲ್ಯದಲ್ಲಿ ತುಂಬ ಬಡತನವನ್ನೂ, ಇತರ ಕಷ್ಟಗಳನ್ನೂ ಅನುಭವಿಸಿದವರು. ಉತ್ತರ ಕರ್ನಾಟಕದ ಸಾಮಾನ್ಯ ಹುಡುಗನೊಬ್ಬ ಇಷ್ಟೆಲ್ಲ ದೊಡ್ಡದಾಗಿ ಬೆಳೆದದ್ದು ಹೇಗೆ? ಎಂಬ ಪ್ರಶ್ನೆ ಸಹಜವಾಗಿಯೇ ಅವರ ಅಭಿಮಾನಿಗಳ ಮುಂದೆ ಬರುತ್ತದೆ. ಮನಸೂರರ ಆತ್ಮಚರಿತ್ರೆ 'ನನ್ನ ರಸಯಾತ್ರೆ' ಇಂಥ ಪ್ರಶ್ನೆಗಳನ್ನು ಕೆಲಮಟ್ಟಿಗೆ ಉತ್ತರಿಸುತ್ತದೆ. ಆದರೆ ಅದೇ ಈ ಆತ್ಮಕಥನದ ಪ್ರಧಾನ ಉದ್ದೇಶವಲ್ಲ. ಯಾವುದೇ ಆತ್ಮ ಚರಿತ್ರೆ ಒಬ್ಬ ವ್ಯಕ್ತಿ ತನ್ನ ಜೀವನವನ್ನು ತಾನೇ ಹಿಂದಿರುಗಿ ನೋಡಿಕೊಳ್ಳುವ, ತನ್ನ ಹೆಜ್ಜೆ ಗುರುತುಗಳನ್ನು ಗುರುತಿಸಿಕೊಳುವ, ಒಂದು ರೀತಿಯ ಆತ್ಮ ವಿಮರ್ಶೆಯ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಇಲ್ಲಿ ಆ ವ್ಯಕ್ತಿಯ ಸೋಲು ಗೆಲುವುಗಳು ಕೇವಲ ಅಂಕಿ ಅಂಶಗಳಾಗದೆ ವ್ಯಕ್ತಿತ್ವವನ್ನು ರೂಪಿಸಿದ ಅಂಶಗಳೇ ಆಗಿರುತ್ತವೆ. ಮನಸೂರರ 'ನನ್ನ ರಸಯಾತ್ರೆ' ಕೂಡ ಈ ತರದ ಬರವಣಿಗೆ.
©2024 Book Brahma Private Limited.