ಖ್ಯಾತ ಗಾಯಕ ಮಲ್ಲಿಕಾರ್ಜುನ ಮನಸೂರ ಹಿಂದುಸ್ಥಾನಿ ಗಾಯಕರಲ್ಲಿ ಪ್ರಮುಖರು. ಆರು ದಶಕಗಳ ಕಾಲ ಸಂಗೀತಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಮನ್ಸೂರ ಅವರನ್ನು ‘ಫಕೀರ ಆಫ್ ಖಯ್ಯಲ್’ ಎಂದು ಗುರುತಿಸಲಾಗುತ್ತಿತ್ತು. ಮಲ್ಲಿಕಾರ್ಜುನ ಅವರು ಧಾರವಾಡ ಸಮೀಪದ ‘ಮನಸೂರ’ ಎಂಬ ಗ್ರಾಮದಲ್ಲಿ 1911ರ ಡಿಸೆಂಬರ್ 31 ರಂದು ಜನಿಸಿದರು. ತಂದೆ ಭೀಮರಾಯಪ್ಪ. ತಾಯಿ ನೀಲಮ್ಮ. ಬಾಲ್ಯದ ದಿನಗಳಲ್ಲಿಯೇ ಮಲ್ಲಿಕಾರ್ಜುನ ತನ್ನ ಅಣ್ಣ ಬಸವರಾಜ ಮನ್ಸೂರ ಅವರೊಂದಿಗೆ ಶಾಲೆಗೆ ವಿದಾಯ ಹೇಳಿ ವಾಮನರಾವ್ ಮಾಸ್ತರ ನಾಟಕ ಕಂಪೆನಿ ಸೇರಿದರು. ತಮ್ಮ ಮಧುರ ಕಂಠದಿಂದ ಗ್ವಾಲಿಯರ್ ಘರಾಣೆಯ ಪಂ. ನೀಲಕಂಠ ಬುವಾ ಅವರ ಶಿಷ್ಯತ್ವ ಪಡೆದರು. ನಂತರ ಮುಂಬೈಗೆ ಹೋದ ಮಲ್ಲಿಕಾರ್ಜುನ ಎಚ್.ಎಂ.ವಿ. ಕಂಪನಿಗಾಗಿ ರೆಕಾರ್ಡ್ ಮಾಡಿದರು. ಜೈಪುರ ಘರಾಣೆಯ ಗಾಯಕ ಉಸ್ತಾದ್ ಅಲ್ಲಾದಿಯಾ ಖಾನ್ ಮಕ್ಕಳಾದ ಮಂಜಿಖಾನ್ ನಂತರ ಬುರ್ಜಿಖಾನರಲ್ಲಿ ಕಲಿತು ಜೈಪುರು – ಅತ್ರೌಲಿ ಘರಾಣೆಯ ಪ್ರಮುಖ ಗಾಯಕರಾದರು.
ಗದುಗಿನ ಸಂಗೀತಾಸಕ್ತರ ಬಳಗದ ‘ಸಂಗೀತ ರತ್ನ (1930), ‘ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ’ ಪಡೆದ ‘ಮೊದಲ ಹಿಂದುಸ್ಥಾನಿ ಗಾಯಕ’ (196೦) ‘ಕರ್ನಾಟಕ ಸಾರ್ವಜನಿಕ ಸೇವಾ ಪ್ರಶಸ್ತಿ’ (1968), ‘ಪದ್ಮಶ್ರೀ’ (1970), ‘ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ’ (1976), ‘ಪದ್ಮಭೂಷಣ’ (1976), ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ (1975), ಮಧ್ಯ ಪ್ರದೇಶ ಸರ್ಕಾರದ ಕಾಳಿದಾಸ ಸಮ್ಮಾನ’ (1981), ಕೋಲ್ಕತ್ತಾದ ವಿಶ್ವಭಾರತಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ (1975), ಮಧ್ಯ ಪ್ರದೇಶ ಸರ್ಕಾರದ ಕಾಳಿದಾಸ ಸಮ್ಮಾನ’ (1981) ಗೌರವ ಪಡೆದಿದ್ದರು.
ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿದ್ದ ಅವರಿಗೆ ‘ಪದ್ಮ ವಿಭೂಷಣ ಪ್ರಶಸ್ತಿ ಸಂದಿತ್ತು ವಚನ ಗಾಯನ ಆರಂಭಿಸಿದ ಹಿರಿಮೆ ಅವರದು. ಕರ್ನಾಟಕ ವಿಶ್ವವಿದ್ಯಾಲಯವು ಅವರಿಗೆ ‘ಸಂಗೀತ ರತ್ನ’ ಗೌರವ ಗ್ರಂಥ ಅರ್ಪಿಸಿದೆ. ‘ನನ್ನ ರಸ ಯಾತ್ರೆ’ ಅವರ ಆತ್ಮಕತೆ. ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ಅಧ್ಯಯನ ಪೀಠದ ಮೊದಲ ನಿರ್ದೇಶಕರಾಗಿದ್ದರು. 1992ರ ಸೆಪ್ಟೆಂಬರ್ 12ರಂದು ಅಸುನೀಗಿದರು.