ನಮ್ಮ ನಡುವಿನ ಸಂತ, ಅನುಭಾವಿ ಬೆಳಗೆರೆ ಕೃಷ್ಣಶಾಸ್ತ್ರಿಗಳು ತಮ್ಮ ಬದುಕಿನಲ್ಲಿ ಕಂಡ ಅನೇಕ ವ್ಯಕ್ತಿಗಳ ಬಗ್ಗೆ ಬರೆದ ಕೃತಿ ’ಮರೆಯಲಾದೀತೆ...?’ ಕೃತಿ ಕುರಿತು ಪುಸ್ತಕದಲ್ಲಿರುವ ಅಪೂರ್ವ ಮಾಹಿತಿ ಬೆಳಗೆರೆ ಅವರ ಬದುಕು, ಅವರ ಜೀವನದೃಷ್ಟಿಯನ್ನು ವಿವರಿಸುತ್ತದೆ: 2024ರಲ್ಲಿ ಹನ್ನೊಂದನೆಯ ಮುದ್ರಣ ಕಂಡಿರುವ ಕೃತಿ ಇದಾಗಿದೆ.
ಬೆಳಗೆರೆ ಕೃಷ್ಣಶಾಸ್ತ್ರಿಗಳು ಅಪೂರ್ವ ಅನುಭಾವಿ. ಅನುಭಾವವೆನ್ನುವುದು ನಿಗೂಢದ ಕಥೆ ಅಲ್ಲ, ಅದು ಚೈತನ್ಯದ ಕ್ಷಣಗಳನ್ನು, ತಿಳಿವಿನ ವಾತಾವರಣವನ್ನು ಹುಡುಕುವ, ಹಾಗೆ ಹುಡುಕಿದ್ದನ್ನು ಅರಿಯುವ, ನಿಬ್ಬೆರಗಿನಿಂದ ಮೆಲುಕುಹಾಕುವ, ಗತಿಶೀಲತೆಯಾಗಿದೆ. ಇಂತಹ ಗತಿಶೀಲತೆಯ ಅನುಭವವನ್ನು ಅವರು ಮೈದುಂಬಿ, ಮನದುಂಬಿ ಪಡೆದಿದ್ದಾರೆ. ಹಾಗೆ ಪಡೆದಿದ್ದನ್ನು ಅನುಭವವಾಗಿಯೇ ಮಾತುಗಳಲ್ಲಿ ಹಂಚಿಕೊಂಡಿದ್ದಾರೆ. ತಿಳಿವಿನ ಅನುಭವಕ್ಕೆ ಮಾತುಗಳ ಮೂಲಕ ಪಾರದರ್ಶಕತೆ ಸಾಧ್ಯವಾಗುವುದು ಆನುಭಾವದ ಒಂದು ಮುಖ್ಯ ಸಾಧನೆಯಾಗಿದೆ. ಇಲ್ಲಿ ರೂಪು ತಾಳಿದ ಹಲವಾರು ವ್ಯಕ್ತಿಚಿತ್ರಗಳು ಕೃಷ್ಣಶಾಸ್ತ್ರಿಗಳ ಸೂಕ್ಷ್ಮ ಅವಲೋಕನದ ಭಾಗವಾಗಿಯೇ ಮೈತಳೆದು ಬಂದಂಥವುಗಳಾಗಿವೆ. ಇವುಗಳು ಅರಿವಿನ ರೂಪಕಗಳಾಗಿ ಹೊಸ ಅನುಭವ ಸಾಧ್ಯತೆಯನ್ನು ಓದುಗರಲ್ಲಿ ಸೃಷ್ಟಿಸುತ್ತದೆ. ಆದ್ದರಿಂದಲೇ ಗೋಕಾಕದ ಪಾರವ್ವ, ಕಾಳಿಂಗಕೃಷ್ಣ, ತೋಪಿನ ಹನುಮಣ್ಣ, ಮಹಮದ್ ಹಯಾತ್ ಸಾಬ್, ಗಾಂಧೀಜಿ, ಗುಜ್ಜಪ್ಪ, ಗಗ್ಗರಂಗಪ್ಪ ಮುಂತಾದ ವ್ಯಕ್ತಿತ್ವಗಳು ವಿಭಿನ್ನವಾಗಿ ಮರುಹುಟ್ಟು ಪಡೆದಂತಾಗಿದೆ. ಓದುಗನ ಎದೆಯೊಳಗೆ ಹಗುರವಾಗಿ ಇಳಿಯುವ ಕೃಷ್ಣಶಾಸ್ತ್ರಿಗಳ ಮಾತು ಈ ಮಾತುಗಳು ಲೋಕಕಲ್ಯಾಣದ ಆಶಯವನ್ನು ಒಳಸೂತ್ರದಂತೆ ಮಿಡಿಯುತ್ತಿರುವುದು ಓದುಗನ ಒಳಗಣ್ಣಿಗೆ ಕಾಣಲೇಬೇಕು.
ಬೆಳಗೆರೆ ಕೃಷ್ಣಶಾಸ್ತ್ರಿ ಅವರ " ಮರೆಯಲಾದೀತೆ?" | Treasure Hunt With Vrushanka Bhat
©2024 Book Brahma Private Limited.