'ಮನೆತನದ ಪಥ' ಇದು ಚಿಕ್ಕನಾಯಕನಹಳ್ಳಿಯ ದೇವಾಂಗದ ಸಿದ್ದೇಗೌಡರ ವಂಶ ಬೆಳೆದುಬಂದ ದಾರಿಯ ಬಗ್ಗೆ ಬೆಳಕು ಬೀರುವ ಒಂದು ಕಥಾರೂಪ. ವಿಜಯನಗರ ಸಾಮ್ರಾಜ್ಯದ ಪತನದ ನಂತರ ಹಂಪೆಯಿಂದ ವಲಸೆ ಬಂದು, ಹರಿದು ಹಂಚಿಹೋದ ಅನೇಕ ದೇವಾಂಗ ಕುಟುಂಬಗಳಲ್ಲಿ ಸಿದ್ದೇಗೌಡರ ಕುಟುಂಬವೂ ಒಂದು. ಇವರು ಕುಟುಂಬದ ಜೀವನದಲ್ಲಿ ಅನೇಕ ಏಳುಬೀಳುಗಳನ್ನು ಕಂಡು 'ಕಾಯಕವೇ ಕೈಲಾಸ' ಎಂದು ತಿಳಿದು ಶ್ರಮವಹಿಸಿ ದುಡಿದು ಸಮಾಜದಲ್ಲಿ ಒಂದು ಉತ್ತಮ ಸ್ಥಾನಕ್ಕೇರಿ ಆದರ, ಗೌರವ, ಬಿರುದುಗಳನ್ನು ಸಂಪಾದಿಸಿದ್ದಾರೆ. ಸಿದ್ದೇಗೌಡರ ವಂಶ ನಾಟಕ ರಂಗದಲ್ಲಿ ಚಿತ್ರ ರಂಗದಲ್ಲಿ ಖ್ಯಾತಿ ಪಡೆದು ಜನಮನ್ನಣೆ ಗಳಿಸಿದೆ. ಚಿಕ್ಕನಾಯಕನಹಳ್ಳಿ ಕಲಾವಿದರ ತವರೂರು. ವಿಜಯನಗರ ಪತನದ ನಂತರ, ಅಂದರೆ-ಸಿದ್ದೇಗೌಡರ ಕುಟುಂಬ ಹಂಪೆಯಿಂದ ವಲಸೆ ಬಂದಾಗಿನಿಂದ ಸಿದ್ದೇಗೌಡರು ಚಿಕ್ಕನಾಯಕನಹಳ್ಳಿಯಲ್ಲಿ ನೆಲೆಸಿದ್ದು, ಎಲ್ಲವನ್ನೂ ಕಳೆದುಕೊಂಡಿದ್ದ ಇವರು ಸತತ ಪರಿಶ್ರಮದಿಂದ ಕಳೆದುದೆಲ್ಲವನ್ನೂ ಗಳಿಸಿ ತಮ್ಮ ಮುಂದಿನ ಪೀಳಿಗೆಗೂ ಜೀವನೋಪಾಯ ತೋರಿಸಿದ ಕೆಲವು ಘಟನಾವಳಿಗಳನ್ನು ಕಥಾರೂಪದಲ್ಲಿ ಬರೆಯಲಾಗಿದೆ. ಈ ಘಟನಾವಳಿಗಳನ್ನು ಹಿರಿಯರಿಂದ ತಿಳಿದು ಒಂದು ನೋಟ್ ಪುಸ್ತಕದಲ್ಲಿ ಅಂಶಗಳಾಗಿ ನಮೂದಿಸಿಕೊಂಡು ದಾಖಲಿಸಿ, ಅನೇಕ ವರ್ಷಗಳಿಂದ ಜೋಪಾನವಾಗಿ ಕಾಪಾಡಿಕೊಂಡು ಬಂದವರು ಬಿ.ಕೆ. ಕಾಡುಬಸವಯ್ಯನವರು. ಶಿಕ್ಷಕರಾಗಿ ಸೇವೆ ಸಲ್ಲಿಸಿ ಇಂದು ಚಿಕ್ಕನಾಯಕನಹಳ್ಳಿಯಲ್ಲಿ ನಿವೃತ್ತಿ ಜೀವನವನ್ನು ಸಾಗಿಸುತ್ತಿದ್ದಾರೆ. ಇವರು ನಮೂದಿಸಿಕೊಂಡು ಅಂಶಗಳನ್ನು ಲೇಖಕ ನಟರಾಜ್ ಅವರಿಗೆ ನೀಡಿ ಕಥಾವಳಿಯ ರೂಪ ಕೊಡಬೇಕೆಂದು ಅವರನ್ನು ಪ್ರೋತ್ಸಾಹಿಸಿದ್ದರು, ಅದರ ಫಲವೇ ಈ ಕೃತಿ.
©2024 Book Brahma Private Limited.