ರಂಗಕರ್ಮಿ ಬಿ.ವಿ. ಕಾರಂತರ ಆತ್ಮಚರಿತ್ರೆಯಲ್ಲಿ ಲೇಖಕಿ, ಕಾದಂಬರಿಗಾರ್ತಿ ವೈದೇಹಿ ಅವರು ಸಂಗ್ರಹಿಸಿ ಪುಸ್ತಕರೂಪದಲ್ಲಿ ಪ್ರಕಟಿಸಿದ್ದಾರೆ. ಕಾರಂತರ ಆತ್ಮಚರಿತ್ರೆಯಲ್ಲಿ ಖಾಸಗಿ ಹಾಗೂ ಸಾರ್ವಜನಿಕವೆಂಬುದರ ನಡುವೆ ಗಡಿರೇಖೆಗಳಿವೆ. ಕನ್ನಡ ರಂಗಭೂಮಿ ಹಾಗೂ ಭಾರತೀಯ ರಂಗಭೂಮಿಯ ಸಂತೆಯೇ ಅಲ್ಲಿ ಸೇರಿಹೋಗಿದೆಯಾದರೂ ಆಪ್ತವಾದ ಮಾನವೀಯ ಸಂಬಂಧಗಳ ಬಗೆಗೆ ನಿರ್ಲಿಪ್ತರಾಗಿಲ್ಲ. ಅವರ ಬದುಕಿನ ಎಲ್ಲ ಘಟ್ಟಗಳಲ್ಲಿಯೂ ಹಚ್ಚಿಕೊಂಡ ಆಪ್ತ ಸಂಬಂಧಗಳು ಹಾಗೂ ವ್ಯಕ್ತಿಗಳ ವಿಚಾರದಲ್ಲಿ ಮಾನವೀಯ ಒಳನೋಟಗಳನ್ನು ಅಲ್ಲಿ ಕಾಣಬಹುದು. ಅಲೆಮಾರಿಯಂತೆ ಬದುಕಿದ ಕಾರಂತರು ಎಂದೂ ಒಂದೆಡೆ ಕುಳಿತು ಬರೆಯುವ ಪ್ರವೃತ್ತಿಯವರಾಗಿರಲಿಲ್ಲ. ಬಾಳಿನ ಕೊನೆಗಾಲದಲ್ಲಿ ಅವರು ಹೇಳಿ ಬರೆಸಿದ ಈ ಆತ್ಮಕಥೆಯನ್ನು ಒಪ್ಪವಾಗಿ ರಚಿಸಲು ವೈದೇಹಿಯವರಂತಹ ಶ್ರೇಷ್ಠ ಕತೆಗಾರ್ತಿ ದೊರೆತದ್ದು ಅದೃಷ್ಟವೆನ್ನಬಹುದು. ಒಂದು ವಿಷಯ ಹೇಳುತ್ತಿದ್ದಂತೆ ಇನ್ನೊಂದರ ನೆನಪಾಗಿ ಅದನ್ನು ದಾಟಿಕೊಂಡು ಅಂತೂ ವಿಷಯದಿಂದ ವಿಷಯಕ್ಕೆ ತೇಲುವ ನೆಗೆಯುವ ಗುಣದ”... ತಮ್ಮ ಪ್ರವೃತ್ತಿಯನ್ನು ಕಾರಂತರೇ ಸ್ಪಷ್ಟವಾಗಿ ಹೇಳಿಕೊಂಡಿದ್ದಾರೆ. ಈ ವಿಷಯಾಂತರಗಳು ನೀರಸವಾಗದಂತೆ ಅನೌಚಿತ್ಯಕ್ಕೆಡೆಯಾಗದಂತೆ ಸಂಗ್ರಹಿಸಿ ಸೂಕ್ತ ಸಮಯದಲ್ಲಿ ಮೂಲ ವಿಷಯಕ್ಕೆ ಹಿಂದಿರುಗುವಂತೆ ಕಥನ ಗತಿಯನ್ನು ನಿಯಂತ್ರಿಸುವಲ್ಲಿ ವೈದೇಹಿಯವರ ಕೊಡುಗೆ ಅಸಾಧಾರಣವಾಗಿದೆ. ಕಾರಂತರ ಬದುಕಿನ ಕೌತುಕಗಳು ಇಲ್ಲಿ ತೆರೆದುಕೊಳ್ಳುತ್ತವೆ.
©2024 Book Brahma Private Limited.