ನಾಮದೇವ ನಿಮ್ಗಾಡೆ ಜನಿಸಿದ್ದು ಮಹಾರಾಷ್ಟ್ರದ ಭೂರಹಿತ ಕೃಷಿ ಕಾರ್ಮಿಕ ಕುಟುಂಬವೊಂದರಲ್ಲಿ. ಅಸ್ಪೃಶ್ಯರಾದ ಅವರಿಗೆ ಬಿಸಿಲಲ್ಲಿ ಜಗಲಿಯ ಮೇಲೆ ನಿಂತು ಕಿಟಕಿ ಮೂಲಕ ಪಾಠ ಕೇಳಿಸಿಕೊಳ್ಳುವ ಸ್ಥಿತಿ. ಅಂಬೇಡ್ಕರ್ ಅವರ ಜೀವನದಲ್ಲಿ ಸ್ಫೂರ್ತಿಯ ಸೆಲೆಯಾಗಿ ಮೂಡಿಬರುತ್ತಾರೆ. ಆ ಸ್ಫೂರ್ತಿಯಿಂದಲೇ ಅವರ ಓದು ಸಾಗುತ್ತದೆ. ಅಂಬೇಡ್ಕರ್ ಬಳಿಕ ಅಮೆರಿಕ ವಿಶ್ವವಿದ್ಯಾಲಯವೊಂದರಿಂದ ಡಾಕ್ಟರೇಟ್ ಪಡೆದ ಮೊದಲ ವ್ಯಕ್ತಿ ಎಂಬ ಅಗ್ಗಳಿಕೆ ಅವರದಾಗುತ್ತದೆ. ಉಳಲು ನೆಲವೇ ಇಲ್ಲದ ಕುಟುಂಬದಿಂದ ಬಂದ ಅವರು ಮಣ್ಣಿನ ವಿಜ್ಞಾನದ ಮೇರು ಶಿಖರವೇ ಆಗುತ್ತಾರೆ.
ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿದ್ದ ನಿಮ್ಗಾಡೆ ಅವರಿಗೆ ಅಂಬೇಡ್ಕರ್ ಇನ್ನಷ್ಟು ಹತ್ತಿರವಾಗುತ್ತಾರೆ. ಅಂಬೇಡ್ಕರ್ ಸಾವಿನ ಬಳಿಕ ಅವರ ಚಿಂತನೆಗಳನ್ನು ಮುಂದುವರಿಸುವುದು ಇದೇ ನಿಮ್ಗಾಡೆ. ಅವರು ಇಂಗ್ಲಿಷ್‌ನಲ್ಲಿ ಬರೆದ In The Tigers Shadow ಕೃತಿಯನ್ನು ಬಿ. ಶ್ರೀಪಾದ ಅವರು ’ಹುಲಿಯ ನೆರಳಿನೊಳಗೆ’ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ.
ಅನುವಾದಿತ ಕನ್ನಡ ಆತ್ಮಕತೆಗಳಲ್ಲಿಯೇ ಕೃತಿಗೆ ವಿಶೇಷ ಸ್ಥಾನವಿದೆ ಎನ್ನುತ್ತಾರೆ ಲೇಖಕ ಡಾ. ಅಪ್ಪಗೆರೆ ಸೋಮಶೇಖರ್. ’ಅಂಬೇಡ್ಕರ್ ಅವರ ಬರಹ ಮತ್ತು ಭಾಷಣಗಳ ಸಂಪುಟಗಳಲ್ಲಿ ಭಿನ್ನ ಸ್ವರೂಪದಲ್ಲಿ ವ್ಯಾಪಿಸಿಕೊಂಡಿರುವ ಅವರ ಬದುಕಿನ ಅನುಭವಗಳು ಸಮಗ್ರ ಸ್ವರೂಪದಲ್ಲಿ ಆತ್ಮಕಥೆಯ ಪಠ್ಯವಾಗಿ ದಾಖಲಾಗಿದ್ದಿದ್ದರೆ, ಭಾರತೀಯ ಸಾಮಾಜಿಕ, ಚಾರಿತ್ರಿಕವಾದ ಪಾರಂಪರಿಕ ನೆಲೆಗಳು * ವಿಶಿಷ್ಟವಾದ ತರ್ಕಕ್ಕೆ ಒಳಪಡುತ್ತಿದ್ದವು. ಜೊತೆಗೆ, ಭಾರತೀಯ ಸಾಹಿತ್ಯ ಪರಂಪರೆಯಲ್ಲಿನ ಆತ್ಮಕಥೆ ಪ್ರಕಾರ ಕುರಿತ ಚರ್ಚೆಯನ್ನು ಇನ್ನಷ್ಟು ವಿಭಿನ್ನವೂ, ಚರ್ಚಾಸ್ಪದವೂ ಆದ ವಿಮರ್ಶಾತ್ಮಕ ನೆಲೆಯ ವಾಗ್ವಾದದ ಸ್ತರಕ್ಕೆ ವಿಸ್ತರಿಸುತ್ತಿತ್ತು. ದಲಿತ ಆತ್ಮಕಥೆಗಳನ್ನು ಕುರಿತ ಸಂಶೋಧನಾತ್ಮಕ ಅಧ್ಯಯನದ ಒಳನೋಟಗಳು ಸಹಾ ಈಗಿರುವುದಕ್ಕಿಂತ ವಿಶಿಷ್ಟವಾಗಿ ರೂಪುಗೊಳ್ಳುತ್ತಿದ್ದವು. ಅಂಬೇಡ್ಕರ್ ಅವರ ಆತ್ಮಕಥೆಯಿಂದ ಬಯಸಲಾದ ಈ ಎಲ್ಲಾ ಬಹುತೇಕ ನಿರೀಕ್ಷೆಗಳಲ್ಲಿ ಕೆಲವನ್ನಾದರು ನಾಮದೇವ ನಿಮಾಡೆಯವರ ಆತ್ಮಕಥೆ ದಕ್ಕಿಸಿಕೊಡುವುದರಿಂದ ಉಳಿದೆಲ್ಲಾ ಅನುವಾದಿತ ದಲಿತ ಆತ್ಮಕಥೆಗಳಿಗಿಂತ ಇದು ವಿಶೇಷವಾಗಿದೆ’ ಎಂಬುದು ಅವರ ಮಾತು.
©2024 Book Brahma Private Limited.