'ಹೀಗೊಂದು ಕುಟುಂಬದ ಕತೆ’ ಪಾಲಹಳ್ಳಿ ವಿಶ್ವನಾಥ್ ಅವರ ಕುಟುಂಬದ ಕುರಿತ ಕಥನವಾಗಿದೆ. ಈ ಕೃತಿಗೆ ಮುನ್ನುಡಿ ಬರೆದಿರುವ ಕೆ. ಸತ್ಯನಾರಾಯಣ ಅವರು, 'ಕಳೆದ ಶತಮಾನದ ಮೊದಲ ದಶಕಗಳಲ್ಲಿ ಮೈಸೂರಿನ ಒಬ್ಬ ಯುವಕ ಬನಾರಸಿಗೆ ಹೋಗಿ ಗಾಂಧೀಜಿಯವರಿಂದ ಪ್ರಭಾವಿತನಾಗಿ ಆದರ್ಶವಾದಿಯಾಗಿ ಪರಿವರ್ತನೆಗೊಂಡು ಕನ್ನಡ ಪತ್ರಿಕಾ ಕ್ಷೇತ್ರವನ್ನು ಪ್ರವೇಶಿಸಿ, ಅಲ್ಲಿಯ ಸವಾಲುಗಳನ್ನು ಮತ್ತು ಆಡಳಿತವರ್ಗದ ಧೋರಣೆಗಳನ್ನು ಹೇಗೆ ಎದುರಿಸುತ್ತಾನೆ ಎಂಬುದು ಈ ಕೃತಿಯ ಮುಖ್ಯಭಾಗವಾಗಿದೆ' ಎನ್ನುತ್ತಾರೆ.
ಈ ಕೃತಿಯಲ್ಲಿ ಲೇಖಕರು ತಮ್ಮ ಪ್ರಮುಖ ಪತ್ರಗಳನ್ನು, ದಿನಚರಿಯ ಭಾಗಗಳನ್ನು, ನಾಯಕರ ಸಾರ್ವಜನಿಕ ಭಾಷಣಗಳ ಉಲ್ಲೇಖಗಳನ್ನು, ವೃತ್ತ ಪತ್ರಿಕೆ, ಸರ್ಕಾರದ ವರದಿಗಳ ಆಯ್ದ ಭಾಗಗಳನ್ನು, ಭಾವಚಿತ್ರಗಳನ್ನು ಬಳಸಿಕೊಂಡು, 'ತಾಯಿನಾಡು' ಪತ್ರಿಕೆಯ ಹುಟ್ಟು, ಏಳಿಗೆ ಮತ್ತು ಅವನತಿಯನ್ನು ಸಹ ಅರ್ಥ ಪೂರ್ಣವಾಗಿ ನಿರೂಪಿಸಿದ್ದಾರೆ. ಕನ್ನಡ ಪತ್ರಿಕೋದ್ಯಮದ ಇತಿಹಾಸವನ್ನು ಕುರಿತು ಅಧ್ಯಯನ ಮಾಡುವವರಿಗೆ ಇಲ್ಲಿ ವಿಫುಲ ಸಾಮಗ್ರಿಗಳಿವೆ. ಅವರ ಕುಟುಂಬವೇ ಹಳೆ ಮೈಸೂರು, ಬೆಂಗಳೂರಿನ ಸಾಂಸ್ಕೃತಿಕ ಗುರುತುಗಳನ್ನು ಕಟ್ಟಲು ಗಣನೀಯವಾಗಿ ಕಾಣಿಕೆ ನೀಡಿರುವಂತದ್ದು ತಾಯಿ ಜಯಲಕ್ಷಮ್ಮನವರ ವಿಕಾಸ – ಸಂಪ್ರದಾಯಸ್ಥ ಗೃಹಿಣಿಯಿಂದ ಕರುಣಾಮಯಿ ಸಮಾಜಸೇವಕಿ - ಸ್ವಾರಸ್ಯಕರ ಭಾಗ, ಹಿರಿಯ ಸಹೋದರ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಪಿ.ಆರ್. ಬ್ರಹ್ಮಾನಂದರನ್ನು ಕುರಿತ ಅಧ್ಯಾಯ ಆ ಕಾಲಮಾನದ ಆರ್ಥಿಕ ಚಿಂತನೆಯ ಸ್ವರೂಪವನ್ನು ಗುರುತಿಸುವ ದೃಷ್ಟಿಯಿಂದ ಮುಖ್ಯವಾಗಿದೆ.
ಆ ಕಾಲದ ಬೆಂಗಳೂರಿನ ಬಸವನಗುಡಿ ಮತ್ತು ಅಲ್ಲಿನ ಒಂದು ಕುಟುಂಬ ವಿದ್ಯಾಭ್ಯಾಸ, ವೃತ್ತಿಯ ಮೂಲಕ ಹೇಗೆ ಆಧುನಿಕತೆಯತ್ತ ಹೊರಳಿತು ಎಂಬುದಲ್ಲದೇ, ಆ ಕಾಲದ ವೈಯಕ್ತಿಕ ಮತ್ತು ಸಾರ್ವತ್ರಿಕ ಜೀವನ ಶೈಲಿಯ ಬಗ್ಗೆ ಕೃತಿ ಬೆಳಕು ಚೆಲ್ಲುತ್ತದೆ. ಲೇಖಕರ ಬರವಣಿಗೆಯ ಇನ್ನೊಂದು ವೈಶಿಷ್ಟ್ಯವೆಂದರೆ, ವೈಯಕ್ತಿಕ ನೆಲೆಯಿಂದ ಕೌಟುಂಬಿಕ ನೆಲೆಗೆ, ನಂತರ ಸಾರ್ವಜನಿಕ ಬದುಕಿನ ನೆಲೆಗೆ ಮತ್ತೆ ವೃತ್ತಿಯ ನೆಲೆಗೆ ಯಾವುದೇ ಯಾವುದೇ ದೋಷ ಇಲ್ಲದಂತೆ ವಿವರಿಸುವ ನಿರೂಪಣೆ ಇದೆ. ಹಲವು ಕತೆಗಳನ್ನು ಅಡಕಗೊಳಿಸಿಕೊಂಡಿರುವ ಈ ಕೃತಿ ಸಂಪನ್ಮೂಲವಾಗಿ ಬಳಸಿಕೊಂಡಿರುವ ಬರವಣಿಗೆ ದಾಖಲೆಗಳಲ್ಲೂ ಒಂದು ವಿಶಿಷ್ಟತೆ ಇದೆ.
'ಹೀಗೊಂದು ಕುಟುಂಬದ ಕಥೆ' . ಕೃತಿಯ ಕುರಿತು ಲೇಖಕ ಪಾಲಹಳ್ಳಿ ವಿಶ್ವನಾಥ್ ಅವರ ಮಾತು.
©2024 Book Brahma Private Limited.