ಕೃತಿಯ ಹೆಸರೇ ಹೇಳುವಂತೆ ಇದು ಲೇಖಕರ ಜೀವನ ಪಯಣದ ‘ಹಾದಿಗಲ್ಲು’. ಬಡಜೀವವೊಂದು ಭವ್ಯಜೀವನವನ್ನು ಹೇಗೆ ಕಟ್ಟಿಕೊಳ್ಳಬಹುದು ಎಂಬುದಕ್ಕೆ ಈ ಕೃತಿ ಉದಾಹರಣೆ. ಹಳ್ಳಿ ಸಮುದಾಯಗಳ ಅನೂಹ್ಯವಾದ ಲೋಕ, ಬದುಕಿನ ದಟ್ಟ ಅನುಭವಗಳನ್ನು ಕಾಣಬಹುದಾಗಿದೆ. ಬಹುಸಂಸ್ಕೃತಿಯ ಆಳದಲ್ಲಿ ಬಹುವಾಗಿ ಕಾಡಿದ ಮತ್ತು ವಿಸ್ಮಯವಾಗಿ ಕಂಡಿದ್ದನ್ನೇ ಲೇಖಕರು ಇಲ್ಲಿ ಕಥನವಾಗಿಸಿದ್ದಾರೆ. ಹಳ್ಳಿ ಬದುಕಿನ ಜನರ ಸಂಪ್ರದಾಯ, ಹತಾಶೆ, ಬಡತನ, ಅಸಹಾಯಕತೆಗಳು ‘ಹಾದಿಗಲ್ಲು’ ಕೃತಿಯ ಲೇಖನಗಳಲ್ಲಿ ಲೇಖಕ ಕೆ.ಎ. ದಯಾನಂದ ಕಾಣಿಸಿದ್ದಾರೆ.
ಈಗ ಕರ್ನಾಟಕ ಸರ್ಕಾರದಲ್ಲಿ ಐ.ಎ.ಎಸ್. ಅಧಿಕಾರಿಯಾಗಿರುವ ಕೆ.ಎ. ದಯಾನಂದ ಅವರ 'ಆತ್ಮವೃತ್ತಾಂತದ ಮೊದಲ ಚರಣ'ವಿದು. ಕೆ.ಆರ್ ನಗರದ ಆಸುಪಾಸಿನ ಹಳ್ಳಿಯೊಂದರ ಬಡ ಮತ್ತು ಹಿಂದುಳಿದ ವರ್ಗದ ಕುಟುಂಬದ ಬಾಲಕನೊಬ್ಬ ಸಿಕ್ಕ ಅವಕಾಶಗಳನ್ನು ಸತತ ಶ್ರಮ ಮತ್ತು ಛಲಗಳ ಮೂಲಕ ಸದುಪಯೋಗಪಡಿಸಿಕೊಂಡು ಹಿರಿಯ ಅಧಿಕಾರಿಯಾಗಿ ತಾನು ಬದುಕಿನಲ್ಲಿ ಪಟ್ಟ ಕಷ್ಟನಷ್ಟಗಳನ್ನು ಮರೆಯದೆ ಒಂದು ಬದ್ಧತೆಯಿಂದ ಜನ ಸೇವೆ೦ರಲ್ಲಿ ತೊಡಗಿಕೊಂಡಿರುವ ಕಥೆಯನ್ನು ಹೇಳುವ ಕೃತಿಯಿದು. ತನ್ನಂಥದ್ದೇ ಹಿನ್ನೆಲೆ ಯು ಇತರಿಗೆ ಇದು ಮಾರ್ಗದಶಿಯಾಗಬಹುದೆಂಬ ಆಶಯದೊಡನೆ ಇದನ್ನು ದಾಖಲಿಸಿರುವುದಾಗಿ ಲೇಖಕರು ಹೇಳಿಕೊಂಡಿದ್ದಾರೆ.
ಬಾಲ್ಯದ ಬಡತನದ ಹಳ್ಳಿ ಜೀವನದ ಆತಂಕಕಾರಿ ಕ್ಷಣಗಳ ಜೊತೆಗೆ ಕೌಟುಂಬಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ನೋಟಗಳನ್ನು ಜೀವಂತವಾಗಿಯೇ ಕಟ್ಟಿಕೊಡುವ ಲೇಖಕರು ತಮ್ಮ ತಂದೆಯವರ ಆಧ್ಯಾತ್ಮಿಕ ದೃಷ್ಟಿ ಮತ್ತು ತಾಯಿಯ ಕುಟುಂಬ ಕಟ್ಟುವ ಹಠಗಳ ನಡುವೆ ತುಯ್ದಾಡುತ್ತಿದ್ದ ಬಾಲಕ ದಯಾನಂದನ ಬದುಕನ್ನು ಒಂದು ದಡಕ್ಕೆ ಒಯ್ಯಲು ನೆರವಾದವರು ಅವರ ಕುಟುಂಬದಲ್ಲೇ ಇದ್ದ ವಿದ್ಯಾವಂತ ಬಂಧುಗಳು. ಮುಖ್ಯವಾಗಿ ಅವರ ಸೋದರತ್ತೆ ಹುಚ್ಚಮ್ಮ ಬೆಂಗಳೂರಿನಲ್ಲಿನ ಹುಜೂರ್ ಖಜಾನೆಯಲ್ಲಿ ನೌಕರಿಯಲ್ಲಿದ್ದ ಈ ಒಂಟಿ ಮಹಿಳೆ ತನ್ನ ಆಪ್ತ ಸಂಬಂದಿಕರ ಎಲ್ಲ ಮಕ್ಕಳ ಯೋಗಕ್ಷೇಮ ಮತ್ತು ಉನ್ನತಿಗಾಗಿಯೇ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದ ಕುಟುಂಬ ವತ್ಸಲೆ.
ಈ ಕುಟುಂಬ ವತ್ಸಲೆಯ ಶ್ರದ್ದೆಯಿಂದ ಉದ್ದೀಪನರಾದ ದಯಾನಂದ್ ಬೆಂಗಳೂರಿನಲ್ಲಿ ತಮ್ಮ ಇನ್ನೋರ್ವ ಹಿತೈಷಿ ಕೊಡಿಸಿದ ಡಿ ದರ್ಜೆಯ ನೌಕರಿಯೊಂದನ್ನು ಆಸರೆಯಾಗಿ ಆತುಕೊಂಡು ಬಿಎಡ್ ಸೇರಿದಂತೆ ಪದವಿ-ಸ್ನಾತಕೋತ್ತರ ಪದವಿಯವರೆಗೆ ಶಿಕ್ಷಣವನ್ನು ಪೂರೈಸಿದರು. ಈ ಮಧ್ಯೆ ಗೆಳೆಯರೊಬ್ಬರಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸು ಮಾಡಲು ನೆರವಾಗುವುವೆಂದು ತಿಳಿದು ಸ್ಪರ್ಧಾ ಪರೀಕ್ಷೆಗಳ ಮಾರ್ಗದರ್ಶಿ ಪತ್ರಿಕೆಗಳನ್ನು ಓದುವುದರ ಜೊತೆಗೆ ತಮ್ಮ ಅಣ್ಣನೊಡನೆ ಸ್ವಯಂ ಅಧ್ಯಯನವನ್ನೂ ನಡೆಸಿ ಕರ್ನಾಟಕ ಆಡಳಿತ ಸೇವಾ (ಕೆಎಎಸ್) ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಾರೆ. ಇದರ ನಡುವೆಯೇ ಕಾಲೇಜೊಂದರಲ್ಲಿ ಗುಮಾಸ್ತರಾಗಿ, ನಂತರ ಮಲೆನಾಡಿನ ಊರೊಂದರ ಪ್ರೌಢಶಾಲಾ ಶಿಕ್ಷಕರಾಗಿಯೂ ಕೆಲಸ ಮಾಡಿ ಅನುಭವ ಗಳಿಸುತ್ತಾರೆ.
ಕೆಎಎಸ್ ಅಧಿಕಾರಿಯಾದ ನಂತರ ದಯಾನಂದರ ಬದುಕಿನ ಬಂಡಿ ಹೊಸ ಎತ್ತರಗಳನ್ನು ಏರುತ್ತಲೇ ಹೋಗುವುದು ಸಹಜವೇ. ಆದರೆ ಈ ಪುಸ್ತಕದ ಈ ಭಾಗ ಅವರ ವೃತ್ತಿಜೀವನ ವಿವರಗಳಲ್ಲೇ ಸುತ್ತು ಹೊಡೆಯುತ್ತಾ ಸ್ವಲ್ಪ ನಿರಾಶೆಯನ್ನೇ ಉಂಟುಮಾಡುತ್ತದೆ, ಬದುಕಿನ ಈ ಘಟ್ಟದವರೆಗೆ ಹರಿದುಕೊಂಡು ಬಂದ ಕುಟುಂಬದ ಕಥೆ ಇಲ್ಲಿಗೇ ನಿಂತುಹೋದಂತಾಗಿ ಮುಂದೆ ಇವರು ಹೇಳುವ ತಮ್ಮ ಬದುಕಿನ ಯಶಸ್ಸಿನ ವೃತ್ತಾಂತದ ಆತ್ಮ ಬಿರುಕು ಬಿಟ್ಟಂತೆನಿಸುತ್ತದೆ. ಹಾಗಾಗಿಯೇ ಈ ಭಾಗ ದಯಾನಂದರು ತಮ್ಮ ವೃತ್ತಿಜೀವನದ ಎಷ್ಟೇ ಸಾಧನೆಗಳ ಕಥೆ ಹೇಳಿದರೂ ಅದು ಒಂದು ಮಾರ್ದವತೆಯನ್ನು ಕಳೆದುಕೊಂಡು ಸರ್ಕಾರಿ ಕಡತಗಳಲ್ಲಿನ ಹಾಳೆಗಳ ಸ್ವರೂಪ ಪಡೆದು ಭಾಷೆ ಬಡಕಲಾಗುತ್ತಾ ಹೋಗುತ್ತದೆ. ಬಹುಶಃ ಶಿಕ್ಷಕ ಅವಧಿಯ ಶಿಷ್ಯ ಶಂಕರ ಮತ್ತು ಕೃಷಿ ಸಾಧಕ ದುರ್ಗಪ್ಪನನ್ನು ಕುರಿತ ಎರಡು ಅಧ್ಯಾಯಗಳ ಹೊರತಾಗಿ.
ಅಂದ ಮಾತ್ರಕ್ಕೆ ದಯಾನಂದರ ವೃತ್ತಿಜೀವನ ಕುತೂಹಲಕಾರಿಯಾಗಿಲ್ಲ ಎಂದಲ್ಲ. ಆದರೆ ಇದು ಬರೀ ಸಾಧನೆಗಳ ಸರಮಾಲೆಯಂತೆ ನಿರೂಪಿಸಲ್ಪಟ್ಟಿದ್ದು, ಆ ಸಾಧನೆಗಳ ಹಿಂದಿನ-ಅವರದ್ದೂ ಸೇರಿದಂತೆ-ವ್ಯಕ್ತಿತ್ವಗಳ ಜೀವಂತಿಕೆಯ ಪಸೆ ಕಳೆದುಕೊಂಡತೆನಿಸುತ್ತದೆ. ಇವರು ಚಿಕ್ಕಮಗಳೂರು ಉಪವಿಭಾಗಾಧಿಕಾರಿಯಾಗಿದ್ದಾಗಲೇ ಅಲ್ಲಿ ನಕ್ಸಲ್ ಚಟುವಟಿಕೆಗಳು, ಕೊಲೆ, ಲೂಟಿ, ಎನ್‌ಕೌಂಟರ್ ಇತ್ಯಾದಿ ನಡೆದು, ಉಚ್ಚಾಯ ಸ್ಥಿತಿಯಲ್ಲಿದ್ದುದು. ಈ ಸಂದರ್ಭದಲ್ಲಿ ಇವರು ಶರಣಾದ ನಕ್ಸಲರ ಪುನರ್ವಸತಿಗಾಗಿ ತೆಗೆದುಕೊಂಡ ಕ್ರಮಗಳು ಮತ್ತು ಅದಕ್ಕಾಗಿ ಅವರು ಪಟ್ಟ ಶ್ರಮ ಮೆಚ್ಚುಗೆಗೆ ಅರ್ಹವಾಗಿದ್ದರೂ, ಆ ಸಂದರ್ಭದಲ್ಲಿ ಬಿಚ್ಚಿಕೊಳ್ಳುವ ಅವರ ವ್ಯಕ್ತಿತ್ವ ಅವರ ಅಧಿಕಾರ ಸ್ಥಾನದ ಆಚೆಗೆ ಕಾಣುವುದೇ ಇಲ್ಲ. ಅಲ್ಲಿನ ಕಾಡಿನ ಸೌಂದರ್ಯದ ವರ್ಣನೆಯ ಮತ್ತು ಅಲ್ಲಿ ಎದುರಾದ ಮುದುಕನೊಬ್ಬನ ಸಣ್ಣ ಭೇಟಿಯ ಸಾರ್ಥಕ ಕ್ಷಣಗಳ ಅನುಭವಗಳ ಹೊರತಾಗಿ, ಅಧಿಕಾರ ಸ್ಥಾನದಲ್ಲಿದ್ದಾಗ ಬರೆಯಲು ಸಾಧ್ಯವಾಗುವುದು ವರದಿಯನ್ನೇ ಹೊರತು ವೃತ್ತಾಂತವನ್ನಲ್ಲ ಎಂದು ಕಾಣುತ್ತದೆ. ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದಾಗ 'ಅಕ್ಕ' ಸಮ್ಮೇಳನಕ್ಕಾಗಿ 'ಆಯ್ದ ಸರ್ಕಾರಿ ಪರಿವಾರದೊಂದಿಗೆ ನಡೆಸಿದ ಅಮೆರಿಕಾದ ಪ್ರವಾಸ ಕುರಿತ ಬರಹದ ಬಗೆಗೂ ಇದೇ ಮಾತನ್ನು ಹೇಳಬಹುದು.
ಮಿಕ್ಕಂತೆ ಚಿಕ್ಕಮಗಳೂರಿನಲ್ಲಿದ್ದಾಗ ಚನ್ನಪ್ಪಗೌಡರಂತಹ ಹಿರಿಯ ಜಿಲ್ಲಾಧಿಕಾರಿಗಳ ಬಳಿ ತಾವು ಕಲಿತ ಆಡಳಿತದ ಅಪರೂಪದ ಪಾಠಗಳು, ಅವುಗಳ ಪ್ರಭಾವದಿಂದಾಗಿ ಜನಪ್ರತಿನಿಧಿಗಳ ಹಸ್ತಕ್ಷೇಪದ ಪ್ರಯತ್ನಗಳನ್ನು ಧಿಕ್ಕರಿಸಿ ಕೈಗೊಂಡ ಕೆಲ ದಿಟ್ಟ ಜನಪರ ನಿರ್ಧಾರಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮತ್ತು ರಾಜ್ಯ ಪತ್ರಾಗಾರದ ನಿರ್ದೇಶಕರಾಗಿ ಕನ್ನಡ ತಂತ್ರಜ್ಞಾನ ಪೋಷಣೆ ಮತ್ತು ಇ-ಆಡಳಿತಗಳ ಮೂಲಕ ಅಲ್ಲಿ ತಂದ ಬದಲಾವಣೆಗಳು, ವಿಶೇಷವಾಗಿ ಯಾರ ಗಮನವನ್ನೂ ಸೆಳೆಯದೆ ಅವಶೇಷದ ರೂಪ ತಾಳಿದ್ದ ಪತ್ರಾಗಾರಕ್ಕೆ ಸಂಬಂಧಪಟ್ಟಂತೆ ಎಂ.ಎಂ. ಕುಲಬರ್ಗಿಯವರಂತಹ ಹಿರಿಯ ಸಂಶೋಧಕರ ಗಮನ ಸೆಳೆಯುವಂತಹ ಹಲವು ಐತಿಹಾಸಿಕ ದಾಖಲೆಗಳ ಸಂರಕ್ಷಣಾ ಕಾರ್ಯಕ್ರಮಗಳನ್ನು ಕೈಗೊಂಡದ್ದು ದಯಾನಂದರ ಆಡಳಿತ ಶ್ರದ್ಧೆ ಮತ್ತು ನಾಡು-ನುಡಿಗಳ ಮೇಲಿನ ಪ್ರೀತಿಯ ಉದಾಹರಣೆಗಳಾಗಿ ಇಲ್ಲಿ ಗಮನ ಸೆಳೆಯುತ್ತವೆ. ಇಂಥಹುದೇ ಶ್ರದ್ದೆ ಶಿವಮೊಗ್ಗದ ಜಿಲ್ಲಾಧಿಕಾರಿಗಳಾಗಿದ್ದಾಗ ಸೊರಬದ ಬಳಿಯ ದುರ್ಗಪ್ಪನೆಂಬ ಹೊಸ ಮಾದರಿಯ ಪ್ರಗತಿಪರ ರೈತನ ಮನೆಗೆ ನೀಡಿದ ಭೇಟಿ ಇಂಥದೇ ಇನ್ನೊಂದು ಉದಾಹರಣೆಯಾದರೆ, ಗುಣಮಟ್ಟ ಕೆಡಿಸುವ ಹಸ್ತಕ್ಷೇಪದ ಕಾರಣದ ಮೇಲೆ ಜನಪ್ರತಿನಿಧಿಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಬಹಳ ವರ್ಷಗಳಿಂದ ನಿಂತುಹೋಗಿದ್ದ ಸಹ್ಯಾದ್ರಿ ಉತ್ಸವವನ್ನು ಯಶಸ್ವಿಯಾಗಿ ನಡೆಸಿದ್ದಾಗಿ ಹೆಮ್ಮೆಯಿಂದ ಹೇಳಿಕೊಳ್ಳುವುದು ಪ್ರಜಾಪ್ರಭುತ್ವವಾದಿಗಳಾರೂ ಒಪ್ಪಲಾಗದ ವಿಚಾರ. ಇಲ್ಲಿ ಗುಣಮಟ್ಟದ ಮಾತು ಚರ್ಚಾರ್ಹವೇ ಸರಿ.
ಆದರೆ ದಯಾನಂದ ಹೋದೆಡೆಯಲ್ಲೆಲ್ಲ ತಮ್ಮ ಜನಪರ ಕಾರ್ಯಕ್ರಮಗಳಲ್ಲಿ ಯಾವುದೇ ತರತಮವಿಲ್ಲದೆ ಇಡೀ ಆಧಿಕಾರಿವೃಂದವನ್ನು ತೊಡಗಿಸಿಕೊಳ್ಳುವ ಆವೃತ ಆಡಳಿತ ಶೈಲಿ ವಿಶೇಷವಾದದ್ದು ಮತ್ತು ಇದೇ ಅವರ ಆಡಳಿತದ ಯಶಸ್ಸಿನ ಗುಟ್ಟೂ ಇರಬಹುದು. ದಯಾನಂದರ ಸಾಮಾಜಿಕ ಹಿನ್ನೆಲೆ ಕಲಿಸಿದ ಪಾಠವಿದಿರಬಹುದು. ಇವರಿಗೆ ತಾವು ಕೆಲಸ ಮಾಡಿದ ಕಛೇರಿಗಳ ಎಲ್ಲ ಸ್ತರಗಳ ಸಿಬ್ಬಂದಿಯ ಹೆಸರುಗಳೂ ನೆನಪಿನಲ್ಲಿದ್ದಂತಿವೆ. ಒಳ್ಳೆಯ ಆಡಳಿತಗಾರನ ಲಕ್ಷಣವಿದು. ಆದರೆ ಚಿಕ್ಕಮಗಳೂರಿನಲ್ಲಿ ನಕ್ಸಲರ ಅನುಮಾನಕ್ಕೀಡಾಗಿ ಕ್ರೂರವಾಗಿ ಹತವಾದ ರೈತ ಕುಟುಂಬದ ಹುಡುಗನೊಬ್ಬ ಅನಾಥನಾದಾಗ ಆತನ ಸ್ಥಳೀಯ ಪೋಷಕರಾಗಿ ದಯಾನಂದರು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಆತನ್ನು ಪ್ರತಿಷ್ಟಿತ ಇಂಗ್ಲಿಷ್ ಮಾಧ್ಯಮದ ಶಾಲೆಗೆ ಸೇರಿಸಿ ಆತನ ಹಾಸ್ಟೆಲ್‌ನ ಒಂದಿಷ್ಟು 'ಇತರ' ಖರ್ಚುಗಳಿಗಾಗಿ ಪೇಜಾವರ ಶ್ರೀಗಳ ಬಳಿ ನೆರವಿಗೆ ಧಾವಿಸುವಾಗ ಇದನ್ನೆಲ್ಲ ಮರೆತದ್ದು ಏಕೋ ಗೊತ್ತಾಗದು!
ಈ ಪುಸ್ತಕದಲ್ಲಿ ವ್ಯಕ್ತವಾಗುವ ದಯಾನಂದರ ಆಡಳಿತಗಾರನ ವ್ಯಕ್ತಿತ್ವದ ಎರಡು ಮುಖ್ಯ ದೌರ್ಬಲ್ಯಗಳೆಂದರೆ ಸಾಹಿತ್ಯ-ಸಂಸ್ಕೃತಿ ಲೋಕ ಕುರಿತ ಮಿತಿಮೀರದ ಆಸ್ಥೆ ಮತ್ತು ಆಕರ್ಷಣೆ. ಇದರಲ್ಲಿನ 'ಸಾಧಕರ ನೆರಳಿನಲ್ಲಿ' ಎಂಬ ಅತಿ ದೀರ್ಘ ಆಧ್ಯಾಯದಲ್ಲಿ ಸಾಹಿತಿಗಡಣದ ಸನ್ನಿಧಿ ಮತ್ತು ಅವರ ಶ್ಲಾಘನೆಗಳಿಂದುಂಟಾದ ಧನ್ಯತೆಯ ಕ್ಷಣಗಳ ದಾಖಲೆಗಳೆ ಸಾಕ್ಷಿ. ಈ ಮುಗ್ಧತೆಯೇ ಅವರಿಗೆ ತಮ್ಮ (ಕನ್ನಡ-ಸಂಸ್ಕೃತಿ ಇಲಾಖೆ ಪ್ರಾಯೋಜಿಸುವ ಎಲ್ಲ "ದುಬಾರಿ' ಕಾರ್ಯಕ್ರಮಗಳ ಉಸ್ತುವಾರಿ ಸದಾ ಅದೇ ಮುವ್ವರ ಕೈಗೇ ಏಕೆ ಹೋಗುತ್ತದೆ ಎಂದು ಯೋಚಿಸಲು ಅಸಾಧ್ಯ ಮಾಡಿದಂತಿದೆ. ದಯಾನಂದರ ಇನ್ನೊಂದು ದೌರ್ಬಲ್ಯವೆಂದರೆ ಸಂದರ್ಭ ಸಿಕ್ಕರೆ ಪ್ರವಚನ ಮಾಡತೊಡಗುವುದು. ಈ ಮಾಹಿತಿ ಪಾಂಡಿತ್ಯದ ಪ್ರದರ್ಶನದ ದೌರ್ಬಲ್ಯದ ಪರಿಚಯ ಬೇಕಾದರೆ ಈ ಪುಸ್ತಕದ 'ಒಂದು ಕನ್ನಡ ರಾಜ್ಯೋತ್ಸವ ಭಾಷಣ' ಎಂಬ ಅಧ್ಯಾಯವನ್ನು ಓದಬಹುದು.
-ಡಿ.ಎಸ್. ನಾಗಭೂಷಣ
ಕೃಪೆ: ಹೊಸ ಮನುಷ್ಯ-ಅಕ್ಟೋಬರ್ 2020
©2024 Book Brahma Private Limited.