ಕವಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಬಾಲ್ಯದ ಸ್ಮೃತಿಗಳನ್ನು ಒಳಗೊಂಡಿರುವ ‘ಗಿರಿಜವ್ವನ ಮಗ’ ಬಹುಮುಖ್ಯ ಸಾಂಸ್ಕೃತಿಕ-ಸಾಹಿತ್ಯಕ ಕೃತಿ. ಪಟ್ಟಣಶೆಟ್ಟರ ಬರಲಿರುವ ಆತ್ಮಕಥನದ ಪೂರ್ವಾರ್ಧವಾಗಿರುವ ಈ ಗ್ರಂಥವು ಕೇವಲ ಲೇಖಕರ ನೆನಪುಗಳಿಗೆ-ಅನುಭವಕ್ಕೆ ಸೀಮಿತವಾಗಿಲ್ಲ. ಅದು ಅನುಭವದ ಅನಾವರಣದ ಜೊತೆಯಲ್ಲಿಯೇ ಒಂದು ಕಾಲ ಘಟ್ಟದ ಬದುಕು- ಜನಜೀವನ, ವಸ್ತು-ವಿಷಯಗಳನ್ನು ವಿಭಿನ್ನ –ವಿಶಿಷ್ಟ ರೀತಿಯಲ್ಲಿ ದಾಖಲಿಸುತ್ತದೆ.
ಅವ್ವ ಗಿರಿಜವ್ವನ ಕುರಿತಾದ ಪ್ರೀತಿ- ಆರ್ದ್ರತೆ, ಕಾಳಜಿಗಳು ಸಹಜವಾಗಿ ಮೂಡಿಬಂದಿವೆ. ಮೇಲ್ನೋಟಕ್ಕೆ ಅವ್ವನನ್ನು ಕೇಂದ್ರವಾಗಿಟ್ಟು ಮಗನ ಬದುಕನ್ನು ಅನಾವರಣ ಮಾಡುವಂತೆ ಕಾಣಿಸುತ್ತದೆ. ಆದರೆ, ಅದು ಕೇವಲ ಅಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ ಎಂಬುದೇ ಈ ಪುಸ್ತಕದ ವಿಶೇಷ. ಗ್ರಾಮೀಣ ಪ್ರದೇಶದ ಒಂದು ಕಾಲಮಾನದ ಸಾಂಸ್ಕೃತಿಕ ದಾಖಲೆ ಆಗಿರುವ ಗ್ರಂಥದಲ್ಲಿ ಪ್ರಸ್ತಾಪಿತ ಘಟನೆಗಳು-ವಿವರಗಳು ಮೆಲುಕು ಹಾಕುವಂತಿವೆ. ಬಾಲ್ಯದ ದಿನಗಳ ತೀಕ್ಷ್ಣ ಗ್ರಹಿಕೆಯು ಅಷ್ಟೇ ತಾಜಾ ಆಗಿ ಅಕ್ಷರಕ್ಕೆ ಇಳಿದು ಬಂದಿದೆ. ಉತ್ತರ ಕರ್ನಾಟಕದ ಸಹಜ ಲಯದ ಸೊಗಸು ಓದುಗರ ಅಂತರಂಗವನ್ನು ಮುಟ್ಟುವಂತಿದೆ.
ದೇಸಿ ಭಾಷೆಯ ನುಡಿಗಟ್ಟು- ಗ್ರಾಮೀಣ ಜೀವನ ಶೈಲಿಯನ್ನು ಬಿಂಬಿಸುವಲ್ಲಿ ಯಶ ಕಂಡಿದೆ. ಅಪರೂಪದ ಪದಗಳ ಬಳಕೆಯ ಪ್ರಯತ್ನ ಗಮನ ಸೆಳೆಯುವಂತಿದೆ. ಸರಳವಾಗಿ-ಸರಾಗವಾಗಿ ಓದಿಸಿಕೊಂಡು ಹೋಗುವ ಬರವಣಿಗೆಯು ಓದುಗರನ್ನು ಪಟ್ಟಣಶೆಟ್ಟರ ಬಾಲ್ಯದ ಲೋಕಕ್ಕೆ ಕರೆದೊಯ್ಯತ್ತದೆ. ನೆನಪ ಗಂಧರ್ವರು ಪದಗಳ ಲಾಸ್ಯದಲಿ ಮಿಂದು ಎದ್ದಂತೆ ಭಾಸವಾಗುತ್ತದೆ. ಈ ಕೃತಿಯನ್ನು 2018ರಲ್ಲಿ ಗದಗಿನ ಜಗದ್ಗುರು ಶ್ರೀ ತೋಂಟದಾರ್ಯ ಸಂಸ್ಥಾನ ಮಠದ ಡಾ.ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆಯಿಂದ ಪ್ರಕಟಗೊಂಡಿದ್ದು, ಸದ್ಯದ ಈ ಕೃತಿಯು ಎರಡನೇ ಆವೃತ್ತಿ.
ಆತ್ಮ ಕಥನ ’ಗಿರಿಜವ್ವನ ಮಗ’ ಕುರಿತ ವಿಶೇಷ ಸಂದರ್ಶನ.
©2024 Book Brahma Private Limited.