ಖ್ಯಾತ ಕತೆಗಾರ-ಕಾದಂಬರಿಕಾರ ಕುಂ. ವೀರಭದ್ರಪ್ಪ ಅವರ ಆತ್ಮಕತೆ. ರೋಚಕವಾಗಿ-ರಂಜನೀಯವಾಗಿ ಕತೆ ಹೇಳುವ-ಕಟ್ಟುವ ಕುಂ.ವೀ. ಅವರ ಆತ್ಮಕತೆಯಲ್ಲಿಯೂ ಕತೆಯ ಸೊಗಡು-ಸೊಗಸು ಕೂಡಿಕೊಂಡಿವೆ. ಈ ಆತ್ಮಕತೆಯ ಬಗ್ಗೆ ಹಿರಿಯ ವಿಮರ್ಶಕ ಸಿ.ಎನ್. ರಾಮಚಂದ್ರನ್ ಅವರ ಟಿಪ್ಪಣಿ-
'ಗಾಂಧಿ ಕ್ಲಾಸ್' ಕೃತಿಯನ್ನು ಓದಿದ ನಂತರ ನನಗೆ ಬಂದ ಸಂದೇಹ ಇದು: ಕುಂವೀ ಮರೆತು ಆತ್ಮಕಥೆಯ ಬದಲಿಗೆ ತಾವು ಬರೆದಿರುವ ಹೊಸ ಕಾದಂಬರಿಯೊಂದನ್ನು ನನಗೆ ಕಳಿಸಿದ್ದಾರೆಯೆ? ಇಷ್ಟು ರೋಚಕ ನಿರೂಪಣೆ, ಇಷ್ಟು ರಂಜಕ ಹಾಗೂ ಅಸಾಧಾರಣ ಘಟನೆಗಳು ಕಾದಂಬರಿಯಲ್ಲಲ್ಲದೆ ಆತ್ಮಕಥೆಯಲ್ಲಿರಲು ಸಾಧ್ಯವೆ? ಉದಾಹರಣೆಗೆ: ಕೇವಲ ತನ್ನ ಸುಯೋಧನ-ಛಲದಿಂದಾಗಿ ಸಾಕಷ್ಟಿದ್ದ ಸ್ಥಿರ-ಚರಾಸ್ತಿಗಳನ್ನು ಕಳೆದುಕೊಂಡು ಒದ್ದಾಡುವ ಸ್ಥಿತಿಗೆ ಬಂದ 'ಹೀರೋ' ತಂದೆಯ ಮಗನಾಗಿ, ಅತಿ ಕಷ್ಟದಿಂದ ಎಸ್ ಎಸ್ ಎಲ್ಲಿ ಪಾಸಾಗಿ, ಕೆಲಸವಿಲ್ಲದೆ ಸೈನ್ ಬೋರ್ಡ್ ಪೇಂಟರ್ ಆಗುವ, ರೇಲ್ವೇ ದಿನಗೂಲಿಯಾಗುವ, ಪ್ಲಾಟ್ ಫಾರಂನಲ್ಲಿ ಮೂರು ದಿನ ಹಸಿವೆಯಿಂದ ಸಾಯುವ ಸ್ಥಿತಿ ತಲುಪುವ, ಕೊನೆಗೆ ಶತಮಾನದಷ್ಟು ಹಿಂದುಳಿದಿರುವ ಊರೊಂದರಲ್ಲಿ ಶಾಲಾ ಮಾಸ್ತರನಾಗುವ, ತಿಂಗಳಿಗೊಂದು ಕೊಲೆಯಾಗುವ ಆ ಕುಗ್ರಾಮದಲ್ಲಿ ಧೈರ್ಯದಿಂದ ದಲಿತರನ್ನು ಶಾಲೆಗೆ ಸೇರಿಸಿಕೊಂಡೂ ಬದುಕಿ ಉಳಿಯುವ, 'ಕಪ್ಪು' ಎಂಬ ತನ್ನ ಮೊದಲ ಕಾದಂಬರಿಯ ಕಾರಣದಿಂದ ಎಂದೋ ಕೊಲೆಯಾಗಬಹುದಾಗಿದ, ಸಿನೆಮಾ ಪ್ರಪಂಚದಲ್ಲಿ ಎಲ್ಲರಿಂದ ವಂಚಿಸಲ್ಪಡುವ, ಅಕಾಡೆಮಿ ಪ್ರಶಸ್ತಿ ಪಡೆದ 'ಅರಮನೆ' ಕಾದಂಬರಿಯ ಬ್ಲರ್ಬ್ ತೋರಿಸಿ ಅಮೇರಿಕಾಕ್ಕೆ ವೀಸಾ ಪಡೆಯುವ - ಇಂತಹ ವ್ಯಕ್ತಿ ಕಥಾನಾಯಕನಾಗಿರುವುದು; ಆ ವ್ಯಕ್ತಿಯೇ ಒಂದು ರಾತ್ರಿಯಲ್ಲಿ 15 ಹಾಡು ಬರೆಯುವ, ನೂರಾರು ಕಥೆ ಬರೆದು ಸವೆದ ತನ್ನ ನಡುಬೆರಳನ್ನು 'ಇದೊಂದು ರೂಪಕ' ಎಂದು ಅಭಿಮಾನದಿಂದ ತೋರಿಸುವ, ಪ್ರಕಾಶಕರಿಗೆ ಮಾತು ಕೊಟ್ಟಂತೆ ಮೂರು ವಾರಗಳಲ್ಲಿ 600 ಪುಟಗಳ 'ಶಾಮಣ್ಣ' ಎಂಬ ಕಾದಂಬರಿ ಬರೆಯುವ, 'ಅರಮನೆ' ಎಂಬ 1200 ಪುಟಗಳ ಕಾದಂಬರಿಯನ್ನು 500 ಪುಟಗಳಿಗೆ ತರಲು ಮತ್ತೆ ಮತ್ತೆ ಅದನ್ನು ಮುರಿದು ಕಟ್ಟಿ ಕೊನೆಗೆ ಅದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯುವ, ಈ ಸಾಧನೆಗಳ ನಂತರವೂ ಅಬೋಧ ಬಾಲಕನ ಪ್ರೀತಿ-ವಿಸ್ಮಯತೆಗಳನ್ನು ಉಳಿಸಿಕೊಂಡಿರುವ ಸಾಹಿತಿಯೂ ಆಗಿರುವುದು; ಇವೆಲ್ಲವೂ ಒಂದು ರೋಚಕ ಕಾದಂಬರಿಯಲ್ಲಿ ಮಾತ್ರ ಸಾಧ್ಯ; ಅಥವಾ, ಸೋಮಶೇಖರ ಉರುಫ್ ವೀರಭದ್ರಪ್ಪ ಉರುಫ್ ಕುಂವೀ ಎಂಬ ಅದ್ಭುತ ಪ್ರತಿಭಾಶಾಲಿಯ ಅಸಾಧಾರಣ ಬದುಕಿನಲ್ಲಿ ಮಾತ್ರ ಸಾಧ್ಯ ಎಂದು ಆಶ್ಚರ್ಯ, ಅಭಿಮಾನ, ಅಸೂಯೆಗಳೊಡನೆ ಗ್ರಹಿಸುವಲ್ಲಿಗೆ-ಶಂಭೋ ಶಂಕರ ಮಹಾದೇವ.
©2024 Book Brahma Private Limited.