ಲೇಖಕಿ ಎಸ್ ವಿ ಪ್ರಭಾವತಿ ಅವರ ಆತ್ಮಕಥೆ ’ಎನ್ನ ಪಾಡೆನಗಿರಲಿ’. ಈ ಕೃತಿಯ ಬಗ್ಗೆ ಲೇಖಕಿಯೆ ಹೇಳಿರುವಂತೆ ಎನ್ನ ಪಾಡೆನಗಿರಲಿ..ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ. ಕಲ್ಲು ಸಕ್ಕರೆ ಯಂಥ ನಿನ್ನೆದೆಯು ಕರಗಿದರೆ ಆ ಸವಿಯ ಹನಿಸು ಎನಗೆ ..ಎಂಬ ಬೇಂದ್ರೆ ಯವರ ಕವಿತೆಯ ಸಾಲಿನ ಮೊದಲೆರಡು ಪದಗಳನ್ನು ಹೆಸರಾಗಿ ಹೊತ್ತು ಬಂದಿರುವ ಈ ಪುಸ್ತಕಕ್ಕೆ ಆತ್ಮಕಥೆ ಎಂಬ ಉಪಶೀರ್ಷಿಕೆಯನ್ನೇನೋ ಕೊಟ್ಟಾಗಿದೆ. ಆದರೆ ನಾನು ಆತ್ಮಕಥೆ ಬರೆಯುವಷ್ಟು ದೊಡ್ಡವಳೇ ಎಲ್ಲ ಅರ್ಥದಲ್ಲಿಯೂ ಎಂಬ ಸಂದೇಹ ಕಾಡುತ್ತದೆ . ನೆನಪಿನ ದೋಣಿಯಲ್ಲಿ, ಹೋರಾಟದ ಬದುಕು, ಹೋರಾಟದ ಹಾದಿ, ನೆನಪು ಸಿಹಿ ಕಹಿ, ಕುದಿಯೆಸರು, ಆಡಾಡತ ಆಯುಷ್ಯ, ಭಿತ್ತಿ .......... ಇವುಗಳನ್ನು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಓದುತ್ತಿದ್ದ ನನಗೆ ನಾನೂ ಬರೆಯಬೇಕೆಂಬ ಭಾವನೆ ಎಂದೂ ಬಂದಿರಲಿಲ್ಲ . ಅಷ್ಟು ಸಣ್ಣ ವಳಾಗಿ ಹುಟ್ಟಿ ಬೆಳೆದ ನಾನು ಅಷ್ಟು ಎತ್ತರಕ್ಕೇರಿ ಮತ್ತೆ ಅಷ್ಟೇ ಪಾತಾಳಕ್ಕೆ ಬಿದ್ದು ಹೋದ ಮೇಲೆ, ಬದುಕಿನ ಎಲ್ಲ ದೊಡ್ಡ ದೊಡ್ಡ ಬಾಗಿಲುಗಳೂ ದಡಾರನೆ ಮುಚ್ಚಿ ಕೊಂಡ ಮೇಲೆ ನರಕವೆಂದರೇನೆಂದು ಇಲ್ಲೇ ಕಂಡ ಮೇಲೆ ದಾಖಲಿಸಬೇಕೆನಿಸಿತು . ಇದೇನೋ ಮಹಾ ಗ್ರಂಥ ವೆಂದಾಗಲೀ ಹಲವಾರು ಜನರಿಗೆ ದಾರಿ ತೋರುತ್ತದೆಂದಾಗಲೀ ಭ್ರಮೆಯಿಂದ ಅಲ್ಲ. ಇದನ್ನು ಬರೆಯುವ ಮೂಲಕ ನನಗೆ ನಾನೇ ಒಂದು ಹೊರದಾರಿಯನ್ನು(outlet) ಕಂಡುಕೊಳ್ಳಬಹುದೆ ಎಂಬ ದೂರದ ಆಸೆಯಿಂದ. 2017 ರಲ್ಲಿ ಬರೆದು ಮುಗಿಸಿ ಮುದ್ರಣಕ್ಕೆ ಹೋದಮೇಲೆ ಕಳೆದ ಐದು ವರ್ಷಗಳ ಹಿಂದೆಯೇ ಲಾಕ್ ಡೌನ್ ಆಗಿದ್ದ ನನ್ನ ಬದುಕು ಕರೋನಾ ಕಾರಣದಿಂದ ಸಕಲ ಸಮಸ್ತರ ಜೊತೆಗೆ ಮತ್ತೊಮ್ಮೆ ಲಾಕ್ ಆಯಿತು . ಈಗ ಭಗವಂತ ಮುಖಪುಟ ( fb ) ಎಂಬ ಸಣ್ಣ ಕಿಟಕಿಯನ್ನು ನನಗಾಗಿ ತೆರೆದ. ತಣ್ಣನೆಯ ಗಾಳಿ ಬೀಸತೊಡಗಿತು. ಪಾತಾಳದಲ್ಲಿ ಬಿದ್ದಿದ್ದ ನನಗೆ ಅನೇಕ ಸ್ನೇಹ ಹಸ್ತಗಳು ಕೈ ಚಾಚಿ ನನ್ನನ್ನು ಕೊಂಚಮಟ್ಟಿಗೆ ಮೇಲೆತ್ತಿದವು. ಈಗ ಬರೆಯಲೊಂದು ವೇದಿಕೆ. ಓದಲೊಂದಷ್ಟು ಕಣ್ಣು, ಕೇಳಲೊಂದಷ್ಟು ಕಿವಿ ದೊರೆತವು. ಬದುಕು ಸತ್ತಿಲ್ಲ ಹಾಗಾದರೆ ಅನಿಸಿತು. " ಎನಿತು ಜನ್ಮದಲಿ ಎನಿತು ಜೀವರಿಗೆ ಎನಿತು ನಾವು ಋಣಿಯೋ ತಿಳಿದು ನೋಡಿದರೆ ಬಾಳು ಎಂಬುದಿದು ಋಣದ ರತ್ನಗಣಿಯೋ " ಎಂಬ ಜಿ ಎಸ್ ಎಸ್ ಅವರ ಕವಿತೆಯ ಸಾಲು ನೆನಪಾಗುತ್ತದೆ ಎಂಬುದಾಗಿ ಹೇಳಿದ್ದಾರೆ.
©2024 Book Brahma Private Limited.