ಡಾ.ಎಚ್.ಎಸ್.ಅನುಪಮಾ ಅವರು ಕನ್ನಡಕ್ಕೆ ಅನುವಾದಿಸಿರುವ ರಾಮಚಂದ್ರ ಸಿಂಗ್ ಅವರ 'ಆ ಹದಿಮೂರು ವರುಷಗಳು' ಕೃತಿಯು ನಕ್ಸಲೈಟನ ಜೈಲು ಆತ್ಮಕಥನವನ್ನು ಒಳಗೊಂಡಿರುವಂತದ್ದು.
ನಕ್ಸಲಿಸಂ ಬಗೆಗಿನ ಪೂರ್ವಾಗ್ರಹಗಳನ್ನು ದೂರ ಮಾಡುವ ಕೃತಿಯಾಗಿ ಓದುಗರಿಗೆ ಹತ್ತಿರವಾಗುವ ಅಪೂರ್ವ ಕೃತಿಯಾಗಿದೆ. ಉತ್ತರ ಪ್ರದೇಶದ ಬಂಗಾರಮಾವ್ ನ ಹಿಂದುಳಿದ ಜಾತಿಗೆ ಸೇರಿದ ರಾಮಚಂದ್ರ ಸಿಂಗ್ ವಿದ್ಯಾರ್ಥಿ ದೆಸೆಯಲ್ಲೇ ಈ ಹಾದಿಯಲ್ಲಿ ಪಯಣಿಸಿ ನಕ್ಸಲೈಟರಾದುದು; ಸಶಸ್ತ್ರ ಹೋರಾಟ ಕೈಗೆತ್ತಿಕೊಂಡ ಅವರು ತಮ್ಮ ಸಹಚರರೊಂದಿಗೆ ಸೆರೆ ಸಿಕ್ಕಿ ಜೀವಾವಧಿ ಶಿಕ್ಷೆಗೆ ಗುರಿಯಾದುದು; ಆ ಸಮಯದಲ್ಲಿ ಉತ್ತರ ಪ್ರದೇಶದ ವಿವಿಧ ಜೈಲುಗಳಲ್ಲಿ ಕಳೆದ ದಿನಗಳ ಅವರ ಅನುಭವದ ದಾಖಲೆಯನ್ನು ಒಳಗೊಂಡಿದೆ.
ಮುನ್ನುಡಿಯಲ್ಲಿ ಪ್ರೊ.ನಗರಗೆರೆ ರಮೇಶ್ ಹೇಳುವಂತೆ - 'ಆ ನೆನಪುಗಳು ಕೇವಲ ವೈಯುಕ್ತಿಕವಲ್ಲ. ಅಲ್ಲಿ ದೇಶದ ಪರಿಸ್ಥಿತಿಯ ಬಗ್ಗೆ ಒಳನೋಟಗಳಿವೆ. ಜೈಲು ಸಿಬ್ಬಂದಿಯ ಅನಾಗರಿಕ, ಅಮಾನುಷ ನಡವಳಿಕೆಯ ವಿವರಗಳಿವೆ. ವಿರಳ ಒಳ್ಳೆಯ ಅಧಿಕಾರಿಗಳ ಚಿತ್ರಣವಿದೆ. ಚಿತ್ರಹಿಂಸೆಗೆ ಗುರಿಯಾಗುವಾಗಲೂ ಮಾನಸಿಕ ಸಮತೋಲನ ಕಾಯ್ದುಕೊಂಡ ರಾಮಚಂದ್ರ ಸಿಂಗರ ಪ್ರಬುದ್ಧ ವ್ಯಕ್ತಿತ್ವದ ಅನಾವರಣವಾಗಿ ಕೃತಿ ಹೊರಹೊಮ್ಮಿದೆ.' ಎಂದಿದ್ದಾರೆ.
ವಸ್ತುನಿಷ್ಠವಾಗಿ ಎಲ್ಲವನ್ನೂ ಎಲ್ಲರನ್ನೂ ಪರಿಚಯಿಸುವ ರಾಮಚಂದ್ರ ಸಿಂಗ್ ರದು ಅನನ್ಯ ನಿರೂಪಣೆ. ಒಳ್ಳೆಯ ಉದ್ದೇಶವನ್ನೇ ಇಟ್ಟುಕೊಂಡು ಆರಂಭವಾಗುವ 'ಕ್ರಾಂತಿ' ಸಿದ್ಧಾಂತದ ತಿಕ್ಕಾಟದಲ್ಲಿ ಒಡೆದು ಹೋಳಾದಾಗ ಎದುರಾಗುವ ದುರ್ಗಮತೆಯನ್ನು; ಸುಧಾರಣಾ ಕೇಂದ್ರಗಳಾಗಬೇಕಾದ ಜೈಲುಗಳು ಹಿಂಸಾ ಕೇಂದ್ರಗಳಾಗುತ್ತಿರುವ ಕಟು ವಾಸ್ತವವನ್ನು, ಜೈಲಿನ ಕಗ್ಗತ್ತಲ ಕೋಣೆಗಳ ಕೊಳಕುತನವನ್ನು ಮೀರಿಸುವ ಸ್ವಾರ್ಥ ಸಮಾಜದಲ್ಲಿ ವಿಜೃಂಭಿಸುತ್ತಿರುವುದನ್ನು; ಮೂಲ ಚಳುವಳಿಯ ಆಶಯದ ಪರಿಚಯವೇ ಇಲ್ಲದೇ ನಕ್ಸಲರನ್ನು ದ್ವೇಷಿಸುವುದೇ ದೇಶಪ್ರೇಮ ಎಂದು ಬಿಂಬಿತವಾಗುತ್ತಿರುವ ವರ್ತಮಾನದ ವಿಪರ್ಯಾಸವನ್ನು - ಎಳೆ ಎಳೆಯಾಗಿ ಬಿಚ್ಚಿಡುವ ಕೃತಿ 'ಆ ಹದಿಮೂರು ವರ್ಷಗಳು'.
©2024 Book Brahma Private Limited.