ಡಾ.ಪುರುಷೋತ್ತಮ ಬಿಳಿಮಲೆ ಅವರು ಜನಿಸಿದ್ದು 1955 ಆಗಸ್ಟ್ 21ರಂದು. ನವದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಪುರುಷೋತ್ತಮ ಬಿಳಿಮಲೆಯವರು ಬಂಡಾಯ-ದಲಿತ ಸಾಹಿತ್ಯ ಚಳುವಳಿಯಲ್ಲಿ ನೇರವಾಗಿ ಭಾಗವಹಿಸಿದವರು, ಜನಪರ ಹೋರಾಟಗಳನ್ನು ಸಂಘಟಿಸಿದವರು. ಬಡವರ, ಹಿಂದುಳಿದವರ , ಅಲ್ಪಸಂಖ್ಯಾತರ ಮತ್ತು ದಲಿತರ ಪರವಾಗಿ ನಿರಂತರವಾಗಿ ಬರೆಯುತ್ತಲೇ ಬಂದಿರುವ ಅವರು ಸಾಹಿತ್ಯವನ್ನು ತಮ್ಮ ಹೋರಾಟಗಳಿಗೆ ಪೂರಕವಾಗಿ ಬಳಸಿಕೊಂಡಿದ್ದಾರೆ.
ಜನಪದ ಸಾಹಿತ್ಯವನ್ನು ಗಂಭೀರವಾಗಿ ಅಭ್ಯಸಿಸಿರುವ ಅವರು ಆ ಮೂಲಕ ಶಿಷ್ಟ ಸಾಹಿತ್ಯದ ಕೆಲವು ಜನವಿರೋಧಿ ನೆಲೆಗಳನ್ನು ಗಂಭೀರವಾಗಿ ಪ್ರಶ್ನಿಸಿದ್ದಾರೆ. 1955ರಲ್ಲಿ ಸುಳ್ಯ ತಾಲೂಕಿನ ಪಂಜದಲ್ಲಿ ಹುಟ್ಟಿದ ಇವರು ಪುತ್ತೂರು, ಮದರಾಸು, ಮಂಗಳೂರುಗಳಲ್ಲಿ ಶಿಕ್ಷಣ ಪಡೆದು ಸುಳ್ಯ, ಮಂಗಳೂರು, ಹಂಪಿ, ದೆಹಲಿಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ದಲಿತ ಜಗತ್ತು, ಶಿಷ್ಟ ಪರಿಶಿಷ್ಟ, ಕರಾವಳಿ ಜಾನಪದ, ಕೂಡುಕಟ್ಟು, ಬಹುರೂಪ ಇವರ ಕೆಲವು ಮುಖ್ಯ ಕೃತಿಗಳು. ಕರ್ನಾಟಕ ಜಾನಪದ ಅಕಾಡೆಮಿ ಮತ್ತು ರಾಜ್ಯೋತ್ಸವ ಪ್ರಶಸ್ತಿಗಳು ಸೇರಿ ಹಲವು ಗೌರವಗಳು ಸಂದಿವೆ.