About the Author

ಲೇಖಕಿಯಾಗಿ ಚಿರಪರಿಚಿತರಾಗಿರುವ ಕಮಲಾ ಹಂಪನಾ ಅವರು ಪ್ರಾಕೃತ, ಜೈನಶಾಸ್ತ್ರದಲ್ಲಿ ಪರಿಣಿತರು. ಬೆಂಗಳೂರು ಜಿಲ್ಲೆ ದೇವನಹಳ್ಳಿಯಲ್ಲಿ 1935ರ ಅಕ್ಟೋಬರ್ 28 ರಂದು ಜನಿಸಿದರು. ತಂದೆ ಸಿ. ರಂಗಧಾಮನಾಯಕ್- ತಾಯಿ ಲಕ್ಷಮ್ಮ. ಚಳ್ಳಕೆರೆಯಲ್ಲಿ ಪ್ರಾರಂಭವಾದ ಪ್ರಾಥಮಿಕ ವಿದ್ಯಾಭ್ಯಾಸ ಬೇರೆ ಬೇರೆ ಊರುಗಳಲ್ಲಿ ಮುಂದುವರಿಯಿತು. ತುಮಕೂರಿನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸವಾಗಿ, ಕಾಲೇಜು ವಿದ್ಯಾಭ್ಯಾಸ ಮೈಸೂರಿನಲ್ಲಿ ಮುಂದುವರೆದು ಬಿ.ಎ. ಆನರ್ಸ್ (1958) ಮಾಡಿದರು. ಕನ್ನಡ ಅಧ್ಯಾಪಕಿಯಾಗಿ (1959) ಶಿಕ್ಷಣ ವೃತ್ತಿಗೆ ಪ್ರವೇಶಿಸಿ, ಬೆಂಗಳೂರು ಮತ್ತು ಮೈಸೂರು ಮಹಾರಾಣಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಬೆಂಗಳೂರಿನ ವಿಜಯನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದರು. ಸರ್ಕಾರಿ ಸೇವೆಯಿಂದ ನಿವೃತ್ತರಾದ ಮೇಲೆ ಮೈಸೂರು ವಿಶ್ವವಿದ್ಯಾಲಯದ ಜೈನಶಾಸ್ತ್ರ, ಪ್ರಾಕೃತ ಅಧ್ಯಯನದ ಪ್ರಾಧ್ಯಾಪಕರೂ, ಅಧ್ಯಕ್ಷರೂ, ಹಂಪಿ ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕರೂ ಆಗಿದ್ದರು. ಅವರು 2024 ಜೂನ್ 22 ರಂದು ನಿಧನರಾದರು.

ಅಧ್ಯಾಪನ, ಲೇಖನ, ಭಾಷಣಗಳ ಮೂಲಕ ಮಾಡಿರುವ ಸಾಹಿತ್ಯ ಸೇವೆಯನ್ನು ಗುರುತಿಸಿ ನಾಡಿನ ನಾನಾ ಸಂಘ ಸಂಸ್ಥೆಗಳಿಂದ ಅನೇಕ ಗೌರವ ಪ್ರಶಸ್ತಿಗಳು ದೊರೆತಿವೆ. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬಾಬಾ ಆಮ್ಟೆ ರಾಷ್ಟ್ರೀಯ ಪ್ರಶಸ್ತಿ, ಸಾವಿತ್ರಮ್ಮ ದೇಜಗೌ ಪ್ರಶಸ್ತಿ, ರನ್ನಕವಿ ಪ್ರಶಸ್ತಿ, ಐಐಟಿ ಮದರಾಸು ಕನ್ನಡ ಸಂಘದ ರಜತೋತ್ಸವ ಪುರಸ್ಕಾರ, ಶ್ರವಣಬೆಳಗೊಳದ ಮಹಾ ಮಸ್ತಕಾಭಿಷೇಕದ ರಾಷ್ಟ್ರೀಯ ಪುರಸ್ಕಾರ, ಶ್ರೀ ಗೋಮಟೇಶ್ವರ ವಿದ್ಯಾಪೀಠ ಪ್ರಶಸ್ತಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಇತ್ಯಾದಿ ಪ್ರಶಸ್ತಿಗಳು ದೊರೆತಿವೆ.  ಮೂಡಬಿದರೆಯಲ್ಲಿ ನಡೆದ 71ನೇ ಕನ್ನಡ ಸಾಹಿತ್ಯ ಸಮ್ಮೇಳನ (2003) ಅಧ್ಯಕ್ಷತೆ ವಹಿಸಿದ್ದರು.

ಮಹಿಳಾ ಸಾಹಿತಿಯಾಗಿ ಕನ್ನಡದಲ್ಲಿ ಹೆಚ್ಚು ಕೃತಿಗಳನ್ನು ರಚಿಸಿದವರಲ್ಲಿ ಒಬ್ಬರಾಗಿರುವ ಅವರು 48 ಕೃತಿಗಳನ್ನು ರಚಿಸಿದ್ದಾರೆ. ಜೈನಧರ್ಮ ಹಳಗನ್ನಡ ಗ್ರಂಥ ಸಂಪಾದನೆ, ಜೀವನ ಚರಿತ್ರೆ, ಕಥೆ, ಕವನ, ವ್ಯಕ್ತಿಚಿತ್ರ ಮುಂತಾದ ನಾನಾ ವಿಷಯಗಳಿಗೆ ಸಂಬಂಧಿಸಿದಂತೆ ಇವರು ಕೃತಿರಚನೆ ಮಾಡಿದ್ದಾರೆ. ತುರಂಗ ಭಾರತವನ್ನು ಕುರಿತು ವಿಶೇಷ ಅಧ್ಯಯನಮಾಡಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಅವರು ರಚಿಸಿದ ಕೆಲವು ಮುಖ್ಯಕೃತಿಗಳು ಇವು – ಕಾವ್ಯ : ಬಿಂದಲಿ, ಬುಗುಡಿ. ವ್ಯಕ್ತಿಚಿತ್ರ: ನುಡಿಮಲ್ಲಿಗೆ, ಆ ಮುಖ. ವೈಚಾರಿಕ: ಬಾಸಿಂಗ, ಬಾಂದಳ, ಬಡಬಾಗಿ, ಬಿತ್ತರ, ಬಕುಳ. ನಾಟಕ : ಬೆಳ್ಳಕ್ಕಿ, ಬಾನಾಡಿ, ಗ್ರಂಥಸಂಪಾದನೆ : ಸುಕುಮಾರ ಚರಿತೆಯ ಸಂಗ್ರಹ, ಶ್ರೀ ಪಚ್ಚೆ, ಧರಣೇಂದ್ರಯ್ಯ ಸ್ಮೃತಿಗ್ರಂಥ, ಡಿ.ಎಲ್.ಎನ್. ಆಯ್ದ ಲೇಖನಗಳು, ಹಳೆಯ ಗದ್ಯಸಾಹಿತ್ಯ (ಇತರರೊಡನೆ) ಅನುವಾದ: ಬೀಜಾಕ್ಷರ ಮಾಲೆ.

ಕಮಲಾ ಹಂಪನಾ

(28 Oct 1935-22 Jun 2024)