ರಾಮನಗರ ಜಿಲ್ಲೆಯ ಕಾಡನಕುಪ್ಪೆಯ ಹಳ್ಳಿಯಲ್ಲಿ ಶಿವರಾಮು ಕಾಡನಕುಪ್ಪೆ (1953ರ ಆಗಸ್ಟ್ 9) ಜನಿಸಿದರು. ತಂದೆ ಲಿಂಗೇಗೌಡ, ತಾಯಿ-ಶಿವಮ್ಮ. ಕನ್ನಡ ಸಾಹಿತ್ಯವಲಯದಲ್ಲಿ ಉತ್ತಮ ವಿಮರ್ಶಕರು, ಪ್ರಬಂಧಕಾರರು, ಕವಿಗಳು, ಕಾದಂಬರಿಕಾರರು ಎಂಬ ಖ್ಯಾತಿ ಇವರಿಗಿದೆ. ದಲಿತ ಸಮುದಾಯದ ಜೀವನ ಅನುಭವಗಳನ್ನು ಸಮಗ್ರವಾಗಿ ಕಟ್ಟಿಕೊಡುವ ಕೃತಿ-ಕುಕ್ಕರಹಳ್ಳಿ, ಮೈಸೂರು ವಿ.ವಿ. ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಮೈಸೂರಿನ ವಿದ್ಯಾವರ್ಧಕ ಪ್ರಥಮ ದರ್ಜೆ ಪದವಿ ಕಾಲೇಜು ಪ್ರಿನ್ಸಿಪಾಲರಾಗಿಯೂ ಸೇವೆ ಸಲ್ಲಿಸಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಪಂಪ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು, 2006ರಲ್ಲಿ ಜರುಗಿದ ಬೆಂಗಳೂರು ಗ್ರಾಮಾಂತರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರ ಮೊದಲ ಕಾದಂಬರಿ-ವಸುಂಧರೆ’ಗೆ ಸಿಂಗಾರಿಗೌಡ ಪ್ರಶಸ್ತಿ ಲಭಿಸಿದೆ. ಸಮನ್ವಯ, ಸಾಮಾಜಿಕ ನೆಲೆ ಹಾಗೂ ಕುವೆಂಪು ಸಾಹಿತ್ಯ ಮತ್ತು ವಿಚಾರ, ಆಧುನಿಕ ಕನ್ನಡ ಕಥೆಗಳು, ಶಿವರಾಮ ಕಾರಂತ ಹತ್ತು ಅಧ್ಯಯನಗಳು, ವಿನಾಯಕ -ಒಂದು ಅಧ್ಯಯನ, ಕನ್ನಡ ಪ್ರಬಂಧಗಳು, ಹಾ.ಮಾ.ನಾ. ಸಾಹಿತ್ಯ ಪರಿಚಯ, ಆಧುನಿಕ ಕನ್ನಡ ಕಾವ್ಯ -ಇವು ವಿಮರ್ಶಾ ಕೃತಿಗಳು.ಭೂಮಿ ತೂಕದ ಕಣ್ಣೀರು; ದುಡಿಯುವ ಮಹಿಳೆಯ ಕುರಿತಾದ ವೈಚಾರಿಕ ಬರೆಹ, ನೀಲಿ ಚಂದ್ರ,ಮ -ಇವರ ಕವನ ಸಂಕಲನ.
ಸುಧಾ ವಾರಪತ್ರಿಕೆಯಲ್ಲಿ ‘ವಿಚಾರ ಲಹರಿ’ ಹಾಗೂ ಮಂಡ್ಯದ ‘ಅಭಿವ್ಯಕ್ತಿ’ ಜರ್ನಲ್ ನಲ್ಲಿ ‘ಸಮಕಾಲೀನ ಸಂವಾದ’ ಅಂಕಣಕಾರರಾಗಿದ್ದರು. ‘ಬೀಜ ಮತ್ತು ಭೂಮಿ’ ಅಂಕಣ ಬರೆಹಗಳ ಸಂಕಲನ. ಬಯಲು ಬೇಳೆ-ಕೃತಿಯು ಸಹ ಮಹಿಳಾ ಸಬಲೀಕರಣ ಹಾಗೂ ಪ್ರಸಕ್ತ ಸಾಮಾಜಿಕ ವಿದ್ಯಮಾನಗಳಿಗೆ ಸಂಬಂಧಿಸಿ ಬರೆದ ಅಂಕಣ ಬರೆಹಗಳ ಸಂಕಲನವಾಗಿದೆ. ಅವರಿಗೆ ಅನಾರೋಗ್ಯ ಕಾಡಿದಾಗ ಆಸ್ಪತ್ರೆಯಲ್ಲಿ ಕಳೆದ ದಿನಗಳ ಅನುಭವ ಕಥನ ಕೃತಿ- ‘ಆಸ್ಪತ್ರೆಯಲ್ಲಿ 54 ದಿನಗಳು’. ಇದು ತನ್ನ ಸಾಹಿತ್ಯಕ ಮೌಲ್ಯದಿಂದ ಮೈಸೂರು ವಿ.ವಿ. ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿತ್ತು. ಅವರಿಗೆ ರಾಘವ ಪ್ರಶಸ್ತಿ ಲಭಿಸಿದೆ. ಸಂಶೋಧನಾ ವಿದ್ಯಾರ್ಥಿ ಎನ್. ಜಿ.ಮಹೇಶ ಅವರು ಶಿವರಾಮು ಕಾಡನಕುಪ್ಪೆ ಕುರಿತಂತೆ ಬೆಂಗಳೂರು ವಿ.ವಿ.ಯಲ್ಲಿ ಮಹಾಪ್ರಬಂಧ ಬರೆಯುತ್ತಿದ್ದಾರೆ.
ಸಮಾಜವಾದಿ ಯುವಜನ ಸಭಾ, ಜಾತಿ ವಿನಾಶ ಹೋರಾಟ, ಕನ್ನಡ ವಿಚಾರವಾದಿ ಒಕ್ಕೂಟ.. ಹೀಗೆ ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು ಸಹ ಇವರ ವಿಶೇಷತೆ. 1979ರಲ್ಲಿ ಆರಂಭವಾದ ಕರ್ನಾಟಕ ಬಂಡಾಯ ಸಾಹಿತ್ಯ ಸಂಘಟನೆಯ ಸಂಸ್ಥಾಪಕರ ಪೈಕಿ ಇವರೂ ಒಬ್ಬರು. 1980 ರಲ್ಲಿ ನಡೆದ ಕನ್ನಡ ಭಾಷಾ ಚಳವಳಿ (ಗೋಕಾಕ ಚಳವಳಿ), 1983-84 ರಲ್ಲಿ ನಡೆದ ರೈತ ಚಳವಳಿ ಹಾಗೂ ದಲಿತ ಚಳವಳಿಯಲ್ಲೂ ಪಾಲ್ಗೊಂಡ ಹಿರಿಮೆ ಇವರದು. 2018ರ ಜುಲೈ 26ರಂದು ಮೈಸೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು.