ಅಮೆರಿಕದ ಕವಿ ಟೆಡ್ ಕೂಸರ್‌ನ ಕವಿತೆಗಳನ್ನು ಹಿರಿಯ ವಿಮರ್ಶಕ ಡಾ.ಎಚ್.ಎಸ್. ರಾಘವೇಂದ್ರ ರಾವ್ ಅವರು ’ಮಂಜು ಮಣ್ಣು ಮೌನ’ ಹೆಸರಿನಲ್ಲಿ ಅನುವಾದಿಸಿದ್ದಾರೆ. ಟೆಡ್ ಕೂಸರ್ ಅಮೆರಿಕದ ಬಹುದೊಡ್ಡ ಕವಿ. ಸಂವಾದಾತ್ಮಕ ಶೈಲಿಯ ಪದ್ಯಗಳಿಗೆ ಆತ ಹೆಸರುವಾಸಿ. ರೈತರ ಬದುಕು, ಪ್ರೀತಿ-ಪ್ರೇಮದ ಝಲಕ್ಕು ಅವನ ಕಾವ್ಯದಲ್ಲಿ ಹೊಕ್ಕಾಡಿದೆ. ಅಮೆರಿಕದ ಸಾಮಾಜಿಕ ಪರಿಸರಕ್ಕೆ ಭಿನ್ನವಾದ ಕುಟುಂಬ ಸಂಸ್ಕೃತಿಗೆ ಹತ್ತಿರವಾದ ಕವಿತೆಗಳನ್ನು ಬರೆಯುವ ಕಾರಣಕ್ಕೇ ಅವನನ್ನು ಬೇರೆಯದೇ ನೆಲೆಯಲ್ಲಿ ಗುರುತಿಸಲಾಗಿದೆ.
ಕೃತಿ ಕುರಿತು ಬರೆದಿರುವ ಹಿರಿಯ ಕವಿ ಆನಂದ ಝಂಜರವಾಡ, ’ತುದಿಯಲ್ಲಿ ಮೂಡಿಬಂದಿರುವ ಹಣ್ಣಿನ ಒಳಗೆ ಅಡಗಿ, ಮರದ ವಿಸ್ತಾರವನ್ನೂ ಬೇರು ನೆಲೆಯೂರಿದ ನೆಲದ ಆಳವನ್ನೂ ಕಂಡುಂಡು ಕಾಣಿಸುವ ಹಾಗು ಉಣಿಸುವ ಕಾವ್ಯಸೃಷ್ಟಿಯ ಬಗೆ ಕುಸರ್ ಅವರ ಕಾವ್ಯವಲ್ಲ. ಅದರ ಬದಲು ತಾಯಿಬೇರುಗಳ ಜಾಲದಿಂದ ಹಿಡಿದು, ಕೊಂಬೆ-ಕೊಂಬೆಗಳ ವಿಸ್ತಾರ ಜಾಲದಲ್ಲಿ ಸಿಕ್ಕು ಹಾಕಿಕೊಂಡಿರುವ ಎಲೆ, ಮುಳ್ಳು ಕಾಣಿಸುವ ಮೂಲಕವೇ ಅಗ್ರದಲ್ಲಿನ ಹಣ್ಣನ್ನು ಎಲ್ಲಕ್ಕು ಮೊದಲು, ಉಣ್ಣಿಸುವ ತೀರ ವಿಶಿಷ್ಟವಾದ ಕಾವ ಅವರದು. ಅವಳು ಚೆಲುವೆಯಾಗಿರಬೇಕು. ಬೌದ್ದರ ವಿಪಸ್ಸನಾ ಧ್ಯಾನದಿಂದ ಪ್ರೇರಿತವಾದ ಮಧ್ಯಾಹ್ನದ ಕಡುಒಂಟಿ ಕ್ಷಣದಲ್ಲಿ ಕಾವ್ಯದ ಹೋಳವು ಇಲ್ಲಿದೆ. ಜಡಗೊಂಡ ಕನ್ನಡ ಕಾವ್ಯಪ್ರಜ್ಞೆಗೆ, ಇನ್ನೊಂದು ಸಾಧ್ಯತೆಯ ಕಣ್ ಚಿವುಟುವಿಕೆ ಇಲ್ಲಿದೆ.
ಕೂಸರ್ ಅವರ ಕವಿತೆಗಳು ಕಸ-ಕಡ್ಡಿಗಳಿಂದ ಮನೆ ಕಟ್ಟಿಕೊಳ್ಳುವ ಹಕ್ಕಿಯ ಸಂಸಾರದ ಕ್ರಿಯಾ-ಕಲಾಪದಂತೆ ಇವೆ. ಮನೆ ಕಟ್ಟಿಕೊಂಡ ಹಕ್ಕಿ ಅದರಲ್ಲಿ ಬಾಳುವದು ಒಂದು ನಿಗದಿಯಾದ ಹೊತ್ತು ಮಾತ್ರ. ಆದರೆ ಅದರ ಮುಂದಿನ ತಲೆಮಾರುಗಳೂ ಅಲ್ಲಿ ಬದುಕುತ್ತವೆ. ಅವೂ ತಮ್ಮದೇ ಆದ ಹೊಸ ಮನೆಗಳನ್ನು ಕಟ್ಟಬಹುದು. ಆ ಮನೆಗಳು ಮತ್ತೆ ಮುಂದಿನ ತಲೆಮಾರಿಗೆ ಆಸರೆ ಆದಾವು. ಆದರೆ ಅನುಭವದ ಕಸ-ಕಡ್ಡಿಯನ್ನು ಕಾವ್ಯಕ್ಕೆ ಬಳಸುವ ಈ ಕಲಿಯು, ತತ್ವಜಗತ್ತಿನ ಭಾವ-ಸಂಪತ್ತಿನ, 'ಇಕಾಲಜಿ'ಯ ನೆಲೆಯಲ್ಲೂ ಬಹಳ ದೊಡ್ಡ ಅರಿವು ಉಳ್ಳದ್ದುಭೂಮಿಯೂ ಒಂದು ಆಕಾಶ'ವೆಂದು ಪ್ರಾರಂಭವಾಗುವ ಕೊಸರ್ ನಲ್ಲಿ ಆಕಾಶವೂ ಒಂದು ಭೂಮಿ' ಎಂದು ಕಾಣುವವರೆಗೆ ವಿಶ್ರಮಿಸುವದಿಲ್ಲ ಎನ್ನುವದೇ ಅವನ ಅದ್ಭುತ ಶಕ್ತಿ’ ಎಂದಿದ್ದಾರೆ.
ನೂರು ಬಾರಿ ಮಡಿಸಿ, ಬಿಡಿಸಿ ಮತ್ತೆ ಮಡಿಸಿದ ಹಾಗೆ
ಮುದುರಿ ಮುದುರಿ ಕೊಳಕಾಗಿ, ಮಣ್ಣಾಗಿ ನಿನ್ನ ಬಳಿ ಬಂದರೆ,
ಬರೆದದ್ದು ಸರಿಯೋ ತಪ್ಪೋ, ಸರಿಯೋ ತಪ್ಪೋ ಎಂದು
ಅಳೆದು ಸುರಿದು ಅಳೆದು ಸುರಿದು ತಡವರಿಸಿದಂತೆ ಇದು ಕಂಡರೆ,
ಅದೆಲ್ಲದರ ಕಾರಣ ಇಷ್ಟೆ: ಇದನ್ನು ನಿನ್ನ ಜೇಬಿನಲ್ಲಿಯೇ ಇಡಬೇಕೆಂದು
ಬಹುಕಾಲ ಕಾದೆ. ನಡುರಾತ್ರಿಯಲ್ಲಿ ನಡುಗುತ್ತವೆ ಭಯವಿಹ್ವಲ ಬೆರಳು
ಪುಟ್ಟಕಾಣಿಕೆಯನ್ನು ಒಬ್ಬಂಟಿ ಕುಳಿತು ಬಣ್ಣದಲ್ಲಿ ಕಟ್ಟುವಾಗ
ನಾನು ಹೇಳಬೇಕೆಂದಿದ್ದು ಇಷ್ಟೆ: ನಿನ್ನ ಹತ್ತಿರವೇ ಇರಬೇಕು ನಾನು..
ಎಷ್ಟು ಹತ್ತಿರವೆಂದರೆ, ನಿನ್ನ ಕೈಸೇರಿದಾಗ
ಇದು ನನ್ನ ಮೈ ಕಾವಿಂದ ಬೆಚ್ಚಗಿರಬೇಕು.
©2024 Book Brahma Private Limited.